ಬೆಳ್ತಂಗಡಿ: ಜನಸಾಮಾನ್ಯರಿಗೆ ಕಾವ್ಯದ ಅರ್ಥ, ಭಾವ ಮತ್ತು ಧ್ವನಿ ಪ್ರಪಂಚದ ಸೊಗಡನ್ನು ತಿಳಿಯುವಂತೆ ಸರಳವಾಗಿ ವ್ಯಾಖ್ಯಾನಿಸುವುದೇ ಪುರಾಣ ವಾಚನ – ಪ್ರವಚನದ ಉದ್ದೇಶವಾಗಿದೆ. ಪುರಾಣ ವಾಚನ – ಪ್ರವಚನದಿಂದ ಅಂತರಂಗ ಮತ್ತು ಬಹಿರಂಗ ಸೌಂದರ್ಯ ವರ್ಧನೆಯಾಗುತ್ತದೆ ಎಂದು ಮಂಜೇಶ್ವರದ ಡಾ| ರಮಾನಂದ ಬನಾರಿ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಎರಡು ತಿಂಗಳ ಕಾಲ ನಡೆಯುವ ಕರ್ನಾಟಕ ಭಾಗವತ ವಾಚನ – ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮನೋರಂಜನೆಯೊಂದಿಗೆ ಉತ್ತಮ ಸಂಸ್ಕಾರ ಕೊಡುವ ಕಾರ್ಯ ಮಾಡಬೇಕು. ಪುರಾಣ ಗ್ರಂಥಗಳನ್ನು ವಿದ್ಯಾರ್ಥಿಗಳು ಕುತೂಹಲ ಮತ್ತು ಆಸಕ್ತಿಯಿಂದ ಅಧ್ಯಯನ ಮಾಡಬೇಕು ಎಂದರು.
ಡಾ| ರಮಾನಂದ ಬನಾರಿ ಅವರನ್ನು ಡಾ| ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಸಮ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹೇಮಾವತಿ ವಿ.ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇìಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಉಜಿರೆ ಅಶೋಕ್ ಭಟ್ ಸ್ವಾಗತಿಸಿ, ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು. ದಿವಾಕರ ಆಚಾರ್ಯ ಮತ್ತು ಉಜಿರೆ ಅಶೋಕ್ ಭಟ್ ವಾಚನ – ಪ್ರವಚನ ನಡೆಸಿದರು.