ಹೊಸದಿಲ್ಲಿ: ನವೋದ್ಯಮ (ಸ್ಟಾರ್ಟ್‌ಅಪ್) ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023ನೇ ರಾಜ್ಯಗಳ ರ್‍ಯಾಂಕಿಂಗ್ ಅನ್ನು ಕೇಂದ್ರ ಸರಕಾರಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಒಂದು ಕೋಟಿ ಮಂದಿ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಅಗ್ರ ಸ್ಥಾನದಲ್ಲಿ ಇದೆ. ಜತೆಗೆ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಪ್ರಶಸ್ತಿಯನ್ನೂ ಪಡೆದಿದೆ. ಸತತ ಎರಡನೇ ಬಾರಿಗೆ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಪ್ರಶಸ್ತಿ ಪಡೆದುಕೊಂಡಿದೆ. ಈ ಸಾಲಿನಲ್ಲಿ ಗುಜರಾತ್, ಕೇರಳ, ತಮಿಳುನಾಡು ಕೂಡ ಪ್ರಶಸ್ತಿ ಗೆದ್ದುಕೊಂಡಿವೆ. ಇನ್ನು, ಒಡಿಶಾ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತೆಲಂಗಾಣ “ಟಾಪ್ ಪರ್ಫಾರ್ಮರ್’ (ಅತ್ಯುತ್ತಮ ಸಾಧನೆ) ಗೌರವಕ್ಕೆ ಪಾತ್ರವಾಗಿದೆ. ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರ್‍ಯಾಂಕಿಂಗ್ ಲಿಸ್ಟ್ ಪ್ರಕಟಿಸಿದ್ದಾರೆ.
ಪುರಿ ಕಾರಿಡಾರ್ ಲೋಕಾರ್ಪಣೆ
ಪುರಿ: ಒಡಿಶಾದ ಪುರಿಯಲ್ಲಿರುವ ಐತಿಹಾಸಿಕ ಶ್ರೀ ಜಗನ್ನಾಥ ದೇಗುಲದ ಸುತ್ತ ಯಾತ್ರಾರ್ಥಿಗಳಿಗೆ ಸುಧಾರಿತ ಸೌಕರ್ಯಗಳನ್ನು ಒದಗಿಸುವ ಗುರಿ ಹೊಂದಿರುವ 800 ಕೋಟಿ ರೂ. ವೆಚ್ಚದ ಪಾರಂಪರಿಕ ಕಾರಿಡಾರ್ ಯೋಜನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಉದ್ಘಾಟಿಸಿದರು. ಈ ಯೋಜನೆಯು ಜಗನ್ನಾಥ್ ದೇಗುಲದ ಸುತ್ತಮುತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಪಾರ್ಕಿಂಗ್ ಪ್ರದೇಶ, ನೂತನ ಸೇತುವೆ, ಹೊಸ ರಸ್ತೆ, ಯಾತ್ರಾ ಕೇಂದ್ರ, ವಿಶ್ರಾಂತಿ ಕೊಠಡಿಗಳು, ಕ್ಲಾಕ್‌ರೂಮ್, ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಪುರಿ ದಿವ್ಯಸಿಂಗ ದೇಬ್‌ನ ಗಜಪತಿ ಮಹಾರಾಜ್ ಸೇರಿದಂತೆ ದೇಶ-ವಿದೇಶಗಳ 90 ಪ್ರಮುಖ ದೇಗುಲಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.