ಪಣಜಿ: ಗೋವಾ ವಾಸ್ಕೊದ ಮುರಗಾಂವ ಕೇಸರವಾಲ್ ಗಣೇಶ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ್ ಹೊಸ್ಮಠ ಎಂಬ ಕರ್ನಾಟಕದ ವಿಜಯಪುರ ಜಿಲ್ಲೆಯ ಮೂಲದ ಅರ್ಚಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅರ್ಚಕ ಬಸವರಾಜ್ ಹೊಸ್ಮಠ ರವರು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕರ್ನಾಟಕದ ವಿಜಯಪುರ ಮೂಲದ ಅರ್ಚಕರಾದ ಬಸವರಾಜ್ ರವರು ಕಳೆದ ಅನೇಕ ವರ್ಷಗಳಿಂದ ಗೋವಾದ ಮುರಗಾಂವ ಗಣೇಶ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆಯೇ ಅರ್ಚಕರನ್ನು ಸ್ಥಳೀಯರು ಕಾರಿನಲ್ಲಿ ಹೊತ್ತೊಯ್ದು ಧಳಿಸಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆಯೇ ದೇವಸ್ಥಾನ ಪೂಜೆ ಬಿಟ್ಟು ವಾಪಸ್ಸು ಊರಿಗೆ ಹೋಗುವಂತೆಯೂ ಅರ್ಚಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೈಕಾಲು ಮುರಿದು ಸಮುದ್ರಕ್ಕೆ ಎಸೆಯುತ್ತೇನೆ ಎಂದು ಕೂಡ ಬೆದರಿಕೆ ಹಾಕಿರುವುದಾಗಿ ಅರ್ಚಕರು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದರಿಂದ ಭಯಭೀತರಾಗಿರುವ ಅರ್ಚಕರು ಊರಿಗೆ ವಾಪಸ್ಸು ತೆರಳಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳು ಹಾಗೂ ದೇವಸ್ಥಾನ ಸಮೀತಿಯ ಪ್ರಮುಖರು ಆತಂಕಕ್ಕೊಳಗಾಗಿದ್ದು, ದೇವಸ್ಥಾನವನ್ನು ತೆರವುಗೊಳಿಸಲು ಈ ರೀತಿ ಕೃತ್ಯ ನಡೆಸಲಾಗುತ್ತಿದೆಯೇ..? ಎಂದು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೆಯೇ ತಮಗೆ ಅರ್ಚಕರು ಕೂಡ ಬಹಳ ಮುಖ್ಯ. ಈ ದೇವಸ್ಥಾನಕ್ಕಾಗಿ ಎಷ್ಟು ಹೋರಾಟ ನಡೆಸಲೂ ಸಿದ್ಧ ಎಂದು ಭಕ್ತಾದಿಗಳು ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಅರ್ಚಕರು ದೂರು ನೀಡಿದ್ದು ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ. ಆದರೆ ಇವರು ಕರ್ನಾಟಕದವರು ಎಂದು ಇವರನ್ನು ಬೆದರಿಸಿ ಓಡಿಸಲು ಸಂಚು ನಡೆಯುತ್ತಿದೆಯೇ..?ಎಂಬ ಪ್ರಶ್ನೆ ಕೂಡ ಎದುರಾಗಿದೆ.
ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕೆ ಅಪಾಯವಿಲ್ಲ, ಕಾಂಗ್ರೆಸ್ ರಾಜಕೀಯವಾಗಿ ನಾಶವಾಗಿದೆ: ಸ್ಮೃತಿ ಇರಾನಿ