ಮುಂಬಯಿ: ಕರ್ಣಾಟಕ ಬ್ಯಾಂಕ್ ಇದರ ಚಾಲ್ತಿ ಮತ್ತು ಉಳಿತಾಯ ಖಾತೆ ಅಭಿಯಾನದ ಅಂಗವಾಗಿ ಜನಜಾಗೃತಿ ಪಾದಯಾತ್ರೆಯು ಡಿ. 31 ರಂದು ಬೊರಿವಲಿಯಲ್ಲಿ ನಡೆಯಿತು.
ಬೊರಿವಲಿಯ ವೀರಸಾವರ್ಕರ್ ಉದ್ಯಾನವನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ಮುಂಬಯಿ ವಲಯದ ಉಪ ಮಹಾಪ್ರಬಂಧಕ ಸತೀಶ್ ಶೆಟ್ಟಿ ಅವರು ಚಾಲ್ತಿ ಹಾಗೂ ಉಳಿತಾಯ ಖಾತೆಗಳ ಉಪಯೋಗಗಳು ಹಾಗೂ ಡಿಜಿಟಲೀಕರಣದ ಬಗ್ಗೆ ನಾಗರಿಕರಿಗೆ ಮಾಹಿತಿಯನ್ನು ನೀಡುವುದು ಇದರ ಉದ್ಧೇಶವಾಗಿದೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಅಂಕಿ ಅಂಶಗಳನ್ನು ಉಲ್ಲೇಖೀಸಿದ ಅವರು, 25,800 ಕ್ಕೂ ಹೆಚ್ಚು ಆನ್‌ಲೈನ್ ಅವ್ಯವಹಾರಗಳು ನಡೆದಿದ್ದು, ಸುಮಾರು 170 ಕೋ. ರೂ. ಗಳಷ್ಟು ಹಣವನ್ನು ಆನ್‌ಲೈನ್ ಮೂಲಕ ವಂಚಿಸಲಾಗಿದೆ. ಇಂತಹ ವಂಚನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ಧೇವಾಗಿದೆ ಎಂದು ನುಡಿದರು.
ವೀರ ಸಾವರ್ಕರ್ ಉದ್ಯಾನವನದಿಂದ ಹೊರಟ ಪಾದಯಾತ್ರೆಯು ಬೊರಿವಲಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಹೊಸ ವರ್ಷದ ಶುಭಾಶಯ ಕೋರಿ ಪಾದಯಾತ್ರೆಯ ಉದ್ಧೇಶವನ್ನು ನಾಗರಿಕರಿಗೆ ತಿಳಿಸಲಾಯಿತು. ಬ್ಯಾಂಕಿನ ದೀರ್ಘ ಕಾಲದ ಗ್ರಾಹಕರು, ಹಿತೈಷಿಗಳಾದ ಪದ್ಮನಾಭನ್, ಜೀವ ವಿಮಾ ನಿಗಮದ ಸಂಘಟನೆಯ ಪದಾಧಿಕಾರಿಗಳು, ಉನ್ನಿ ಜೀವ ವಿಮಾ ನಗರ ಸಂಘಟನೆಯ ಮಹಿಳಾಧ್ಯಕ್ಷೆ, ವಲಯ ಮುಖ್ಯಸ್ಥರುಗಳನ್ನು ಸ್ವಾಗತಿಸಲಾಯಿತು. ಗಣ್ಯರು ಬ್ಯಾಂಕಿನ ಸಮಾಜಮುಖೀ ಸೇವೆಗಳನ್ನು ಶ್ಲಾಘಿಸಿ ಅವರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ನೀಡುತ್ತಿರುವ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆನಂತರ ಕರ್ಮಯೋಗಿ ಉದ್ಯಾನ ಹಾಗೂ ಎಲ್‌ಐಸಿ ಕಾಲನಿಯ ಹಲವು ರಸ್ತೆಗಳಲ್ಲಿ ಸ್ವಚ್ಚತಾ ಅಭಿಯಾನವನ್ನು ಕೈಗೊಂಡ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕಿಂಗ್ ಜೊತೆಗೆ ಸ್ವಚ್ಚತೆಯ ಬಗ್ಗೆಯೂ ಜಾಗೃತಿ ಮೂಡಿಸಿದರು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚ ಭಾರತ್ ಅಭಿಯಾನವನ್ನು ಬ್ಯಾಂಕಿನ ಸಿಬಂದಿ ವರ್ಗದವರು ಯಶಸ್ವಿಯಾಗಿ ನೆರವೇರಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.
ಮುಂಬಯಿ ವಲಯದ ಸಹಾಯಕ ಮಹಾಪ್ರಬಂಧಕ ಬಿ. ಜಿ. ಸಾಮಗ ಹಾಗೂ ಮುಖ್ಯ ಪ್ರಬಂಧಕ ಅರುಣ್ ಟಿ. ಆರ್. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಹಕರಿಸಿದ ಬೊರಿವಲಿ ಶಾಖೆಯ ಮುಖ್ಯ ಪ್ರಬಂಧಕ ಸಂಜೀವ ಕುಮಾರ್ ಕುಲಕರ್ಣಿ ಮತ್ತು ವಜೀರ್‌ನಾಕಾ ಶಾಖೆಯ ಹಿರಿಯ ಶಾಖಾ ಪ್ರಬಂಧಕ ರಾಮ್ ವಿ. ಪುರಾಣಿಕ ಅವರನ್ನು ಉಪ ಮಹಾಪ್ರಬಂಧಕ ಸತೀಶ್ ಶೆಟ್ಟಿ ಅವರು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.