Advertisement

ಕರ್ಣಾಟಕ ಬ್ಯಾಂಕ್‌: ಚೇರ್‌ಮನ್‌ ಆಗಿ ಜಯರಾಮ್‌ ಭಟ್‌, ಎಂಡಿ-ಸಿಇಒ ಆಗಿ ಮಹಾಬಲೇಶ್ವರ ಎಂ.ಎಸ್‌

10:41 AM Apr 14, 2020 | sudhir |

ಮಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಕರ್ಣಾಟಕ ಬ್ಯಾಂಕಿನ ಚೇರ್‌ಮನ್‌ ಆಗಿ ಪಿ. ಜಯರಾಮ್‌ ಭಟ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿ ಮಹಾಬಲೇಶ್ವರ ಎಂ.ಎಸ್‌. ಅವರು ಭಾರತೀಯ ರಿಸರ್ವ್‌ ಬ್ಯಾಂಕಿನ ಅನುಮೋದನೆಯಂತೆ ಎರಡನೇ ಅವಧಿಗೆ ಪುನರಾಯ್ಕೆಗೊಂಡಿದ್ದಾರೆ.

Advertisement

ಈ ಆದೇಶದ ಅನ್ವಯ ಪಿ. ಜಯರಾಮ್‌ ಭಟ್‌ ಅವರು 2021ರ ನ. 13ರ ಅವಧಿಯವರೆಗೆ ಚೇರ್‌ಮನ್‌ ಆಗಿ ಮುಂದುವರಿದರೆ, ಮಹಾಬಲೇಶ್ವರ ಎಂ.ಎಸ್‌. ಅವರು ಮುಂದಿನ ಮೂರು ವರ್ಷಗಳ ಪರ್ಯಂತ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿ ಬ್ಯಾಂಕನ್ನು ಮುನ್ನಡೆಸಲಿದ್ದಾರೆ.

ತಮ್ಮ ಮರು ಆಯ್ಕೆಯ ಬಗ್ಗೆ ಹರ್ಷವ್ಯಕ್ತಪಡಿಸಿದ ಮಹಾಬಲೇಶ್ವರ ಎಂ.ಎಸ್‌. ಅವರು, “ಮೂರು ವರ್ಷಗಳ ಕಾಲ ಬ್ಯಾಂಕಿನ ಚುಕ್ಕಾಣಿಯನ್ನು ಹಿಡಿದು ಮುನ್ನಡೆಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಮತ್ತು ಹೆಮ್ಮೆಯ ವಿಷಯ.

ಯೋಗಾಯೋಗವೋ ಎಂಬಂತೆ ನನ್ನ ಮಾರ್ಗ ದರ್ಶಕರಾಗಿರುವ ಪಿ. ಜಯರಾಮ್‌ ಭಟ್‌ ಅವರೂ ಎರಡನೇ ಅವಧಿಗೆ ಪುನರಾಯ್ಕೆ ಗೊಂಡು ಇನ್ನೂ ಒಂದೂವರೆ ವರ್ಷ ನಮಗೆ ಮಾರ್ಗದರ್ಶನ ನೀಡಲಿದ್ದಾರೆ. ನಾನು ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆಗಿ ಆಯ್ಕೆಯಾದಾ ಗಿನಿಂದಲೂ ಪಿ. ಜಯರಾಮ್‌ ಭಟ್‌ ಹಾಗೂ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ನೀಡಿದ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನಕ್ಕಾಗಿ ಅವರಿಗೆ ವಿಶೇಷ ಕೃತಜ್ಞತೆಗಳು’ ಎಂದರು.

“ಒಂದು ಕೋಟಿಗೂ ಮಿಕ್ಕಿದ ಸಂತೃಪ್ತ ಗ್ರಾಹಕರ ಆಶೀರ್ವಾದ, ಅಹರ್ನಿಶಿ ದುಡಿಯುವ 8,500ಕ್ಕೂ ಮಿಕ್ಕಿದ ನನ್ನ ಸಹೋದ್ಯೋಗಿಗಳ ಸಹಕಾರಕ್ಕಾಗಿ ನಾನು ಚಿರಋಣಿ. ಭಾರತೀಯ ರಿಸರ್ವ್‌ ಬ್ಯಾಂಕಿನ ಅನನ್ಯ ಬೆಂಬಲ, ಮಾರ್ಗ ದರ್ಶನ ಕ್ಕಾಗಿ ಅಭಿನಂದನೆ’ ಎಂದರು.

Advertisement

ಪ್ರಗತಿಗೆ ಒತ್ತು
ವಿಶ್ವವು ಹಿಂದೆಂದೂ ಕಂಡು ಕೇಳರಿಯದ ಕೋವಿಡ್‌-19 ಎಂಬ ಮಹಾಮಾರಿಗೆ ಸಿಕ್ಕಿ ನಲುಗುತ್ತಿದ್ದು, ಮುಂದೆ ಆರ್ಥಿಕ ಹಿಂಜರಿತಗಳು ವಿಶ್ವದ ಆರ್ಥಿಕತೆಗೆ ದೊಡ್ಡ ಸವಾಲಾಗುವ ಸಂಶಯಗಳು ವ್ಯಕ್ತ ವಾಗುತ್ತಲಿವೆ. ಇಂತಹ ಸಂಕಷ್ಟದ ಸ್ಥಿತಿಯನ್ನು ಎದುರಿಸಲು ಕರ್ಣಾಟಕ ಬ್ಯಾಂಕ್‌ ಸರ್ವ ಸನ್ನದ್ಧವಾಗಿದೆ.

ಉತ್ತಮ ಆಡಳಿತ ವನ್ನು ನೀಡುವುದು ಹಾಗೂ ಬ್ಯಾಂಕಿನ ಸರ್ವ ಪಾಲುದಾರರ ಮೌಲ್ಯ ಸಂವರ್ಧನೆಗೆ ಅವಿರತ ಶ್ರಮಿಸುವುದಲ್ಲದೆ ಬ್ಯಾಂಕನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಾವು ಕಟಿಬದ್ಧರಾಗಿದ್ದೇವೆ. ಮುಂಬರುವ ದಿನಗಳು ತುಂಬಾ ಫಲಪ್ರದ ವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿ, ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಿದ್ದೇವೆ’ ಎಂದು ಮಹಾಬಲೇಶ್ವರ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next