Advertisement

ಪ್ರತಿಷ್ಠೆಗೆ ಬಂದ್ ವಿಫಲ, ವಾಟಾಳ್ &ಟೀಮ್ ಸೆರೆ; ಏಟು-ತಿರುಗೇಟು

01:31 PM Jun 12, 2017 | Team Udayavani |

ಬೆಂಗಳೂರು: ಕರ್ನಾಟಕ ಬಂದ್ ಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ  ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ..ರಾ.ಗೋವಿಂದು ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಸೋಮವಾರ ಕಾರ್ಪೋರೇಶನ್ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಬಂದ್ ವಿಫಲಕ್ಕೆ ರಾಜ್ಯ ಸರ್ಕಾರವೇ ಹೊಣೆ:ವಾಟಾಳ್
ರಾಜ್ಯದ ನೆಲ, ಜಲದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿ ಇಲ್ಲ. ಹಾಗಾಗಿ ಕೋಲಾರ, ಚಿಕ್ಕಬಳ್ಳಾಪುರ ಜನರ ಬೇಡಿಕೆ ಈಡೇರಿಸುವಂತೆ, ಕಳಸಾ ಬಂಡೂರಿ ಹೋರಾಟಕ್ಕೆ ಕೇಂದ್ರ ಸರ್ಕಾರ ಪರಿಹಾರ ಒದಗಿಸುವಂತೆ, ರೈತರ ಸಾಲ ಮನ್ನಾ ಆಗ್ರಹಿಸಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದೇವೆ. ಆದರೆ ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಿದೆ.

ಬೆಂಗಳೂರಿನಾದ್ಯಂತ ಪೊಲೀಸ್ ಸರ್ಪಗಾವಲು ಹಾಕಿ ಬಂದ್ ಅನ್ನು ವಿಫಲಗೊಳಿಸಿದೆ. ಮೂರು ದಿನದ ಮೊದಲೇ ಸೆಕ್ಷನ್ 107ರ ಪ್ರಕಾರ ಸುಮಾರು 500 ಕನ್ನಡ ಪರ ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಿದ್ದರು. 2 ಸಾವಿರಕ್ಕೂ ಅಧಿಕ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದರು ಎಂದು ಟೌನ್ ಹಾಲ್ ಬಳಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಬಂದ್ ವಿಫಲತೆಗೆ ಮಾಧ್ಯಮದವ್ರು ಕಾರಣ, ನಾರಾಯಣ ಗೌಡರಿಗೆ ಬೆಂಗಳೂರು ಗುತ್ತಿಗೆ ಕೊಟ್ಟಿದ್ದೇವೆ:

ವಾಟಾಳ್ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಟಾಳ್ ಅವರಲ್ಲಿ ಸುದ್ದಿಗಾರರು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಬೆಂಬಲ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದಾಗ, ಅವರು ಯಾವತ್ತೂ ಬೆಂಬಲ ಕೊಟ್ಟಿಲ್ಲ. ಅವರ ಬೆಂಬಲಕ್ಕೂ ಬಂದ್ ಗೂ ಸಂಬಂಧವಿಲ್ಲ. ಪೊಲೀಸರು ನಮ್ಮ ಬಂದ್ ಹತ್ತಿಕ್ಕಿರುವುದಾಗಿ ಹೇಳಿದರು.

Advertisement

ಏತನ್ಮಧ್ಯೆ ಕರ್ನಾಟಕವನ್ನು ನಿಮಗೆ ಬರೆದುಕೊಟ್ಟಿಲ್ಲ ಎಂದು ಆರೋಪಿಸಿದಾಗ, ಹೌದು ನಾಳೆಯಿಂದ ಬೆಂಗಳೂರನ್ನು ನಾರಾಯಣ ಗೌಡರಿಗೆ ಗುತ್ತಿಗೆ ಕೊಡ್ತಿದ್ದೇವೆ. ಅವರೇ ಬಂದ್ ಗೆ ಕರೆ ಕೊಡಲಿ. ಆಗ ನಾವೇನು ಮಾಡಬೇಕು ಅಂತ ಯೋಚಿಸುತ್ತೇವೆ ಎಂದು ಟಾಂಗ್ ನೀಡಿದರು. ಇದೇನ್ ನನ್ನ ಮನೆ ಮದುವೆಯೇ, ಇದು ಕನ್ನಡ ಪರ ಹೋರಾಟ ಎಂದು ಆಕ್ರೋಶಿತರಾಗಿ ಮಾತನಾಡಿದ ವಾಟಾಳ್, ನಿಮ್ಮಿಂದ(ಮಾಧ್ಯಮ) ಬಂದ್ ವಿಫಲವಾಗಿದ್ದು ಎಂದು ಗೂಬೆ ಕೂರಿಸಿದರು. ನಾರಾಯಣ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂಬ ಪ್ರಶ್ನೆಗೆ, ನನಗೆ ಗೊತ್ತು
ಏನ್ ವಿಶ್ವಾಸ ಅಂತ. ನೀವು ಹೋಗಿ ಹೇಳಿ, ನೀವು ಮಾತನಾಡಿಸಿ ಅಂತ ವಾಗ್ದಾಳಿ ನಡೆಸಿದ ಘಟನೆ ನಡೆಯಿತು.

(ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖವಾಣಿ ನ್ಯಾಶನಲ್ ಹೆರಾಲ್ಡ್ ಮತ್ತೆ ಶುರು)

ಪ್ರವೀಣ್ ಶೆಟ್ಟಿ ಪೊಲೀಸರ ವಶಕ್ಕೆ;
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ತಮ್ಮ ಕಾರ್ಯಕರ್ತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಮೇಖ್ರಿ ಸರ್ಕಲ್ ಬಳಿ ಪೊಲೀಸರು ಪ್ರವೀಣ್ ಶೆಟ್ಟಿ ಹಾಗೂ ಕರವೇ ಮುಖಂಡರನ್ನು ಪೊಲೀಸರು ಬಂಧಿಸಿದರು.

ಬಂದ್ ಗೆ ನಮ್ಮ ವಿರೋಧ: ನಾರಾಯಣ ಗೌಡ

ರಾಜ್ಯದ ನೆಲ, ಜಲದ ವಿಚಾರದಲ್ಲಿ ನಮಗೆ ಕಾಳಜಿ ಇದೆ. ವಾಟಾಳ್ ನಾಗರಾಜ್ ಅವರು ನಮಗಿಂತ ಹಿರಿಯರು. ನಾನು ಕೂಡಾ ಕಳೆದ 25 ವರ್ಷಗಳಿಂದ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಶ್ರೀಸಾಮಾನ್ಯರಿಗೆ ತೊಂದರೆ ಕೊಡುವ ಬಂದ್ ಗೆ ನಮ್ಮ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಬಂದ್ ನಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲ. ಹಾಗಾಗಿ ವಾಟಾಳ್ ನಾಗರಾಜ್ ಅವರು ನಮಗೆ ಬೆಂಗಳೂರನ್ನು ಗುತ್ತಿಗೆ ಕೊಡಲು ಅದು ನಮ್ಮಪ್ಪನ ಆಸ್ತಿಯೂ ಅಲ್ಲ, ವಾಟಾಳ್ ನಾಗರಾಜ್ ಅವರ ಆಸ್ತಿಯೂ ಅಲ್ಲ. ಇದು ಹೋರಾಟದ ವಿಚಾರ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ಈ ಟಾಂಗ್ ನೀಡಿದ್ದಾರೆ.

ವಾಟಾಳ್ ನಾಗರಾಜ್ ತುಂಬ ಹಿರಿಯರು, ಬುದ್ದಿವಂತರು. ಅವರಿಗೆ ಹೇಳುವಷ್ಟು ದೊಡ್ಡವರು ನಾವಲ್ಲ. ಅವರು ಒಂದು ಬಾರಿ ಬಂದ್ ಎಂದು ಹೇಳಿದ ಮೇಲೆ ಮುಗಿಯಿತು. ಹಾಗಂತ ನಮ್ಮ ಕನ್ನಡ ಸಂಘಟನೆಗಳ ನಡುವೆ ಬಿರುಕು ಇದೆ ಎಂದು ಅರ್ಥ ಅಲ್ಲ. ನಮ್ಮ ಸಂಘಟನೆ ಒಗ್ಗಟ್ಟಿನಲ್ಲೇ ಇದೆ. ನಮ್ಮ ಸಂಘಟನೆ ಯಾವುದೇ ಕರೆ ಕೊಟ್ಟಿಲ್ಲ. ನಮ್ಮ ಸಂಘಟನೆಯಿಂದ ಬಂದ್ ಗೆ ಬೆಂಬಲ ಇಲ್ಲ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next