ಬಳ್ಳಾರಿ: ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕರ್ನಾಟಕ ಬಂದ್ ಗೆ ಗಣಿನಾಡು ಬಳ್ಳಾರಿಯಲ್ಲೂ ಬೆಂಬಲ ವ್ಯಕ್ತವಾಗಿದೆ. ರೈತ, ಕನ್ನಡಪರ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡುವ ಮೂಲಕ ಬಂದ್ ಆಚರಿಸಿದರು.
ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ, ಸಾರಿಗೆ ಬಸ್ ಗಳನ್ನು ತಡೆದು ಬಂದ್ ಗೆ ಚಾಲನೆ ನೀಡಿದರು. ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗಡಿಗಿಚನ್ನಪ್ಪ ವೃತ್ತದಲ್ಲೂ ಟೈಯರ್ ಗೆ ಬೆಂಕಿ ಹಚ್ಚಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ವಾಹನ ತಡೆದು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಬಂದ್ ಆಚರಿಸಿದರು. ಬೆಳಗ್ಗೆಯಾಗಿದ್ದರಿಂದ ನಗರದ ವಾಣಿಜ್ಯ ಮಳಿಗೆಗಳು ಬಂದ್ ಆಗಿವೆ. ಪ್ರಯಾಣಿಕ ಆಟೊಗಳು ಅಲ್ಲೊಂದು ಇಲ್ಲೊಂದು ಸಂಚರಿಸುತ್ತಿವೆ.
Related Articles
ಬಂದ್ ಗೆ ಕಾಂಗ್ರೆಸ್ ಮುಖಂಡರ ನೇತೃತ್ವದ ಆಟೋ ಸಂಘಟನೆಗಳು ಬೆಂಬಲಿಸಿದರೆ, ಬಿಜೆಪಿ ನೇತೃತ್ವದ ಮುಖಂಡರ ಸಂಘಟನೆಗಳು ಬೆಂಬಲ ನೀಡಿಲ್ಲ ಎನ್ನಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ, ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆ, ಜನರ ಓಡಾಟ ಎಂದಿನಂತೆ ಇದೆ. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವಿ.ಎಸ್.ಶಿವಶಂಕರ್, ದರೂರು ಪುರುಷೋತ್ತಮ ಗೌಡ, ಸಂಗನಕಲ್ಲು ಕೃಷ್ಣಾ, ಕನ್ನಡಪರ ಸಂಘಟನೆಗಳ ಚಾನಾಳ್ ಶೇಖರ್, ಎರ್ರಿಸ್ವಾಮಿ ಸೇರಿದಂತೆ ಹಲವರು ಇದ್ದರು.