Advertisement

12ರಂದು ಕರ್ನಾಟಕ ಬಂದ್‌

07:00 AM Apr 08, 2018 | Team Udayavani |

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆಗಬಾರದೆಂದು ಆಗ್ರಹಿಸಿ ಏ.12ರಂದು ಕನ್ನಡ ಒಕ್ಕೂಟ “ಕರ್ನಾಟಕ ಬಂದ್‌’ಗೆ ಕರೆ ನೀಡಿವೆ.

Advertisement

ಶನಿವಾರ ಕನ್ನಡಪರ ಸಂಘಟನೆಗಳ ಒಕ್ಕೂಟದ ಸಭೆಯ ನಂತರ ಮಾತನಾಡಿದ ವಾಟಾಳ್‌ ನಾಗರಾಜ್‌, ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣೆ ಮಂಡಳಿ ರಚನೆ ಆಗಬಾರದು. ಮಂಡಳಿ ರಚನೆ ಆದರೆ ರಾಜ್ಯಕ್ಕೆ ಭಾರಿ ನಷ್ಟವಾಗಲಿದೆ. ಕುಡಿಯುವ ನೀರಿಗೂ ಮಂಡಳಿಯ ಮುಂದೆ ಅಲೆಯಬೇಕಾಗುವ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ತಮಿಳು ನಾಡಿನ ಧೋರಣೆಯನ್ನು ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ತಮಿಳುನಾಡಿನ ರಾಜಕೀಯ ಮತ್ತು ಸಿನಿಮಾ ನಟರ ವಿರುದಟಛಿ ಹರಿಹಾಯ್ದ ಅವರು, ರಾಜಕೀಯ ಲಾಭಕ್ಕಾಗಿ ಡಿಎಂಕೆ ಮುಖಂಡ ಸ್ಟಾಲಿನ್‌, ನಟ ರಜನಿಕಾಂತ್‌, ಕಮಲ್‌ ಹಾಸನ್‌ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಧರಣಿ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ಗೆ ಕರೆ ನೀಡುವ ಉದ್ದೇಶವಿರಲಿಲ್ಲ. ಆದರೆ ತಮಿಳುನಾಡಿನ ರಾಜಕೀಯ ಮುಖಂಡರ ವರ್ತನೆಯನ್ನು ನೋಡಿ ಸುಮ್ಮನೆ ಕೂರುವ ಹಾಗಿಲ್ಲ. ರಾಜ್ಯದಲ್ಲಿ ನೆಲೆಸಿರುವ ತಮಿಳರು ಸೇರಿ ಎಲ್ಲ ಭಾಷಿಕರು ಬಂದ್‌ಗೆ ಬೆಂಬಲ ನೀಡಬೇಕು. ಏ.12 ರಂದು ಬೆಳಗ್ಗೆ 10 ಗಂಟೆಗೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಮತ್ತು ಜಯ ಕರ್ನಾಟಕ ವೇದಿಕೆಯ ಮುತ್ತಪ್ಪ ರೈ ಸೇರಿ ಕನ್ನಡಪರ
ನಾಯಕರು ಬಂದ್‌ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

Advertisement

ಇದಕ್ಕೂ ಮುನ್ನ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ಖಾಸಗಿ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಸಿ ಬಂದ್‌ ಪೂರ್ವಭಾವಿ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕೆ.ಆರ್‌.ಕುಮಾರ್‌, ಎಚ್‌.ವಿ.ಗಿರೀಶ್‌ ಗೌಡ,ಮಂಜುನಾಥ್‌ದೇವ್‌ ಪಾಲ್ಗೊಂಡಿದ್ದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡವೆಂದು ಒತ್ತಾಯಿಸಿ ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲ ನೀಡಿದೆ. ಅಂದು ಯಾವುದೇ ಚಿತ್ರಗಳು ಪ್ರದರ್ಶನಗೊಳ್ಳುವುದಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಚಿತ್ರ ನಟ ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ಕಾವೇರಿ ಕ್ಯಾತೆ ತೆಗೆದಿದ್ದಾರೆ. ಅವರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು. 
– ವಾಟಾಳ್‌ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next