ಧಾರವಾಡ: ಕಳಸಾ-ಬಂಡೂರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆ 7:00 ಗಂಟೆಯಿಂದಲೇ ಜ್ಯುಬಲಿ ವೃತ್ತದಲ್ಲಿ ಟಯರ್‌ಗಳನ್ನು ಸುಟ್ಟು ಘೋಷಣೆ ಕೂಗಿದರು.
ಉಳಿದಂತೆ ಕೆಲ ಶಾಲಾ- ಕಾಲೇಜುಗಳು, ಬ್ಯಾಂಕ್‌ಗಳು ರಜೆ ಘೋಷಿಸಿದರೆ ಕೆಲವು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಿಟಿ ಬಸ್‌ಗಳು ಮಾತ್ರ ನಗರದಲ್ಲಿ ಸಂಚಾರ ನಡೆಸಿದವು. ಹು-ಧಾ ಅವಳಿನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ ಗಳ ಸಂಚಾರ ರದ್ದಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಮಧ್ಯಾಹ್ನದ ನಂತರದಲ್ಲಿ ಅವಳಿ ನಗರದ ಸೇರಿದಂತೆ ಎಲ್ಲ ಬಸ್‌ಗಳು ನಿತ್ಯದಂತೆ ಸುಗಮ ಸಂಚಾರ ನಡೆಸಿದವು. ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಳಗ), ರೈತ ಸೇನಾ ರಾಜ್ಯ ಸಮಿತಿ, ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ಜನ ರಕ್ಷಣಾ ವೇದಿಕೆ, ವಕೀಲರ ಸಂಘ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳು ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಬಹುತೇಕ ಹೋಟೆಲ್, ದಿನಸಿ ಅಂಗಡಿ-ತರಕಾರಿ ಅಂಗಡಿ, ಬ್ಯಾಂಕ್, ಪೆಟ್ರೋಲ್ ಪಂಪ್ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಲ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರೆ, ಇನ್ನು ಕೆಲವರು ಯಥಾ ಪ್ರಕಾರ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಆದರೆ, ನಗರದ ಸುಭಾಷ ರಸ್ತೆ, ವಿವೇಕಾನಂದ ವೃತ್ತ, ಗಾಂಧಿಚೌಕ್ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಕೆಲ ಅಂಗಡಿಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು. ಬಂದ್‌ಗೆ ಬೆಂಬಲ ನೀಡಿರುವ ವಕೀಲರ ಸಂಘದ ಪದಾಧಿಕಾರಿಗಳು ಕೋರ್ಟ್ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ಪಕ್ಷದ ಜಿಲ್ಲಾ ಘಟಕ, ಜೆಡಿಯು ಪಕ್ಷದ ಜಿಲ್ಲಾ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು. ಕರವೇ ಜಿಲ್ಲಾಧ್ಯಕ್ಷ ಪಾಪು ಧಾರೆ, ರಮೇಶ ಅಸುಂಡಿ, ರಾಬಿನ್ ಶರ್ಮಾ, ಸಯ್ಯದ ಗೋಡನಬಿ, ಮಂಜುನಾಥ ಚವ್ಹಾಣ, ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಪೊಲೀಸ್ ಪಾಟೀಲ, ಉಪಾಧ್ಯಕ್ಷ ಪಿ.ಎಸ್. ಉಡಕೇರಿ, ಜಂಟಿ ಕಾರ್ಯದರ್ಶಿ ಎಸ್.ಎಸ್. ಬನ್ನೂರ, ರಾಜ್ಯ ರೈತ ಸಂಘ ಹಾಗೂ
-ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿಲ್ಲೇದಾರ, ಉಪಾಧ್ಯಕ್ಷ ಬಸವರಾಜ ಮಳಲಿ, ಸಂಚಾಲಕ ರವಿರಾಜ ಕಂಬಳಿ, ಕರ್ನಾಟಕ ಜನ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರಕಾಶ ದೊಡ್ಡವಾಡ, ಕಾರ್ಯದರ್ಶಿ ಕುಮಾರ ಒಕ್ಕುಂದ, ಜಿಲ್ಲಾಧ್ಯಕ್ಷ ಪ್ರಕಾಶ ಹಿರೇಮಠ, ರೈತ ಮುಖಂಡರಾದ ಶಂಕರಪ್ಪ ಅಂಬಲಿ, ಗಂಗಾಧರ ಪಾಟೀಲ ಕುಲಕರ್ಣಿ, ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ಸೇರಿದಂತೆ ಹಲವರು ಇದ್ದರು.