ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿದ್ದು, ಬೆಳಿಗ್ಗೆ ಕನ್ನಡಪರ ಸಂಘಟನೆಗಳು ರಸ್ತೆಗೆಳಿದು ಪ್ರತಿಭಟನೆ ನಡೆಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಕೃತಿ ದಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಬೆಳಿಗ್ಗೆ ಆಟೋ ಸಂಚಾರ ಸೇರಿದಂತೆ ಖಾಸಗಿ ಬಸ್, ಟ್ಯಾಕ್ಸಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಸಂಸದರ ಭಾವಚಿತ್ರ ಇರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಕೆಲ ಕನ್ನಡ ಪರ ಸಂಘಟನೆಗಳ ಮುಖಂಡರು ಖಾಲಿ ಕೊಡಗಳನ್ನು ಪ್ರದರ್ಶಿಸಿದರು.
ಬಂದ್ ಹಿನ್ನೆಲೆ ನಗರದ ಅಂಗಡಿ ಮುಂಗಟ್ಟು ಹೋಟೆಲ್ ಬಸ್ ಸಂಚಾರ ಸೇರಿದಂತೆ ಅಗತ್ಯ ವಸ್ತುಗಳು ವ್ಯಾಪಾರ ವಹಿವಾಟು ಸ್ತಬ್ಧಗೊಂಡಿದೆ.
ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದು ರಾಜ್ಯದಲ್ಲಿ ಬರದ ಛಾಯೆ ಎದುರಾಗಿದ್ದು ಇಲ್ಲಿನ ರೈತರ ವ್ಯವಸಾಯಕ್ಕೆ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು ಯಾವುದೇ ಕಾರಣಕ್ಕೂ ನೀರನ್ನು ಹರಿಸಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.