Advertisement

ಬಂದ್‌ ಆಗುತ್ತಾ? ಚಿತ್ರರಂಗದ ಬೆಂಬಲ;ಹಲವು ಸಂಘಟನೆಗಳ ವಿರೋಧ

01:21 PM Jun 11, 2017 | |

ಬೆಂಗಳೂರು : ನಾಳೆ ಬಂದ್‌ ಮಾಡಿಯೇ ಮಾಡುತ್ತೇವೆ. ಬಂದ್‌ಗೆ 2000 ಕನ್ನಡ ಸಂಘಟನೆಗಳು ಬೆಂಬಲ ನೀಡಿವೆ ಎಂದು ಕನ್ನಡ ಚಳುವಳಿಯ ವಾಟಾಳ್‌ ನಾಗರಾಜ್‌ ಭಾನುವಾರ ಹೇಳಿದ್ದಾರೆ. 

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್‌ ನಾಗರಾಜ್‌ ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್‌ ನಡೆಯುತ್ತದೆ. ಬಯಲುಸೀಮೆಯಲ್ಲಿ ನೀರಿನ ಅಭಾವ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ಬಂದ್‌ ನಾವು ನಮ್ಮ ಸ್ವಹಿತಾಸಕ್ತಿಗೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು. 

ಚಿತ್ರರಂಗದ ಬೆಂಬಲ 
ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ ನೀಡಿದ್ದು, ನಾಳೆ ಯಾವುದೇ ಕನ್ನಡ ಚಿತ್ರ ಪ್ರದರ್ಶನ ಇರುವುದಿಲ್ಲ ಮತ್ತು ಚಲಚಿತ್ರಗಳ ಚಿತ್ರೀಕರಣ ಇರುವುದಿಲ್ಲ ಎಂದು ವಾಣಿಜ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

ರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಒಕ್ಕೂಟ ಹಾಗೂ ರೈತರ ಸಾಲ ಮನ್ನಾಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜೂನ್‌ 12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಕೆಲ ಸಂಘಟನೆಗಳು ಬಂದ್‌ಗೆ ಬೆಂಬಲವಿಲ್ಲ ಎಂದು ಪ್ರಕಟಿಸಿರುವುದರಿಂದ ಗೊಂದಲ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆ ಸದ್ಯದ ಮಟ್ಟಿಗೆ ಎಂದಿನಂತೆ ಇರಲಿವೆ ಎಂದು ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟಪಡಿಸಿವೆ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಓಲಾ  ಉಬರ್‌ ಕ್ಯಾಬ್‌ ಚಾಲಕರ ಸಂಘ ಬಂದ್‌ ಬೆಂಬಲಿಸಿ ಕ್ಯಾಬ್‌ ರಸ್ತೆಗಿಳಿಸದಿರುವುದಾಗಿ ಪ್ರಕಟಿಸಿವೆ. ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರೂ ವಾಹನ ಸೇವೆ ಎಂದಿನಂತೆ ಇರಲಿದೆ ಎಂದು ತಿಳಿಸಿದೆ. ಆಟೋ ಚಾಲಕರ ಸಂಘ ಬಂದ್‌ನಿಂದ ದೂರ ಉಳಿದಿದೆ. ಹೋಟೆಲ್‌ ಮಾಲೀಕರ ಸಂಘ ಪ್ರತಿಕ್ರಿಯೆ ನೀಡಿಲ್ಲ.

ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಯಾವ ಸಂಘಟನೆಯೂ ಮನವಿ ಮಾಡಿಲ್ಲ. ಹಾಗಾಗಿ ಜೂನ್‌ 12ರಂದು ಆಟೋ ಸಂಚಾರ ಎಂದಿನಂತೆ ಇರಲಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು.

ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲವಿದ್ದು, ಸೋಮವಾರ ಎಲ್ಲಿಯೂ ಕ್ಯಾಬ್‌ಗಳನ್ನು ರಸ್ತೆಗಿಳಿಸದಂತೆ ಮನವಿ ಮಾಡಲಾಗಿದೆ ಎಂದು ಓಲಾ  ಉಬರ್‌ ಚಾಲಕರ ಸಂಘದ ಪದಾಧಿಕಾರಿ ಪಾಷ ಹೇಳಿದರು.

ಈ ನಡುವೆ ಪದೇ ಪದೇ ಬಂದ್‌ಗೆ ಕರೆ ನೀಡುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ ಎಂದು ಕೆಲ ಕನ್ನಡ ಪರ ಸಂಘಟನೆಗಳು ಬಹಿರಂಗವಾಗಿ ಘೋಷಿಸಿವೆ. ಹಾಗಾಗಿ ಸೋಮವಾರ ಬಂದ್‌ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ.

ಇದುವರೆಗೆ ಶಾಲಾ ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿಲ್ಲ. 

ಉಪವಾಸ ಸತ್ಯಾಗ್ರಹ 
ಬೇಡಿಕೆಗಳ ಈಡೇರಿಕೆಗೆ ಬಂದ್‌ ಅಗತ್ಯವಿಲ್ಲ ಎಂದು ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಟೌನ್‌ ಹಾಲ್‌ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.

ಬಲವಂತ ಮಾಡಬೇಡಿ : ಪ್ರವೀಣ್‌ ಸೂದ್‌ ಎಚ್ಚರಿಕೆ 
ಎಲ್ಲಿಯಾದರು ಬಲವಂತವಾಗಿ ಬಂದ್‌ ಮಾಡಿಸುವುದು ಕಂಡು ಬಂದಲ್ಲಿ  ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸ್‌ಆಯುಕ್ತ ಪ್ರವೀಣ್‌ ಸೂದ್‌ ಎಚ್ಚರಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next