Advertisement

ಕರ್ನಾಟಕ ಬಂದ್‌ ಬಿಸಿ ತಟ್ಟಲೇ ಇಲ್ಲ..

12:10 PM May 29, 2018 | Team Udayavani |

ಬಳ್ಳಾರಿ: ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ಅಹಿತಕರ ಘಟನೆ, ಕಲ್ಲು ತೂರಾಟಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

Advertisement

ಬಂದ್‌ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆಯಿಂದ ಚಿತ್ರಮಂದಿರ ಹೊರತುಪಡಿಸಿ, ಪೆಟ್ರೋಲ್‌ಬಂಕ್‌, ಸಾರಿಗೆ ಬಸ್‌ಗಳು, ವಿವಿಧ ವಾಣಿಜ್ಯ ಮಳಿಗೆಗಳು ಎಂದಿನಂತೆ ಚಾಲನೆ ಪಡೆದುಕೊಂಡಿದ್ದವು. ನಂತರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಂದ್‌ ನಡೆಸಲು ಹಸಿರುಶಾಲು ಹಾಕಿಕೊಂಡು ರಸ್ತೆಗಿಳಿಸಿದ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮತ್ತು ಬಿಜೆಪಿ ಕಾರ್ಯಕರ್ತರು, ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಕಾಲ್ನಡಿಗೆ ಮೂಲಕ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ನಗರದ ಬೆಂಗಳೂರು ರಸ್ತೆ, ಎಪಿಎಂಸಿ, ಹೊಸ ಬಸ್‌ನಿಲ್ದಾಣ, ಗಡಗಿಚನ್ನಪ್ಪ ವೃತ್ತ, ಎಸ್‌ಪಿ ವೃತ್ತದಲ್ಲಿನ ವಾಣಿಜ್ಯ ಮಳಿಗೆಗಳನ್ನು ಒತ್ತಾಯವಾಗಿ ಮುಚ್ಚಿಸುವ ಮೂಲಕ ಬಂದ್‌ಗೆ ಸಹಕರಿಸುವಂತೆ ಕೋರಿದರು.

ತಾತ್ಕಾಲಿಕವಾಗಿ ಮುಚ್ಚಿಕೊಂಡ ಮಳಿಗೆಗಳ ಮಾಲೀಕರು, ಪ್ರತಿಭಟನಾಕಾರರು ಸ್ವಲ್ಪ ಮುಂದಕ್ಕೆ ತೆರಳುತ್ತಿದ್ದಂತೆ ಪುನಃ ತಮ್ಮ ಮಳಿಗೆಗಳನ್ನು ತೆರೆದರು. ಇನ್ನು ಪ್ರತಿಭಟನಾಕಾರರು ಆಗಮಿಸುವ ಮುನ್ಸೂಚನೆ ಅರಿತ ಹೊಸ ಬಸ್‌ ನಿಲ್ದಾಣದ ಅಧಿಕಾರಿಗಳು, ಕೆಲಹೊತ್ತು ಯಾವುದೇ ಬಸ್‌ ಗಳನ್ನು ರಸ್ತೆಗಳಿಗಿಯದಂತೆ ತಡೆ ಹಿಡಿದರು. ಇದರಿಂದ ಕೆಲಹೊತ್ತು ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಬಂದ್‌ಗೆ ತುಂಗಭದ್ರಾ ರೈತ ಸಂಘ ಬೆಂಬಲ ಸೂಚಿಸಿದ್ದು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಗಡಗಿ ಚನ್ನಪ್ಪ ವೃತ್ತದಲ್ಲಿ ಆಗಮಿಸಿದ್ದ ಆಂಧ್ರ ಪ್ರದೇಶದ ಬಸ್‌ ವೊಂದನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿ ಬಳಿ ಕೆಲಹೊತ್ತು ಧರಣಿ ನಡೆಸಿದರು.

Advertisement

ಶಾಸಕ ಜಿ.ಸೋಮಶೇಖರ್‌ರೆಡ್ಡಿ, ಮಾಜಿ ಸಂಸದರಾದ ಜೆ.ಶಾಂತ, ಸಣ್ಣ ಫಕ್ಕೀರಪ್ಪ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಬಿಜೆಪಿ ರೈತ ಘಟಕದ ಎಸ್‌.ಗುರುಲಿಂಗನಗೌಡ, ಪಾಲಿಕೆ ಮಾಜಿ
ಸದಸ್ಯೆ ಶಶಿಕಲಾ, ಜಿಪಂ ಮಾಜಿ ಸದಸ್ಯ ಕೆ.ಎ.ರಾಮಲಿಂಗಪ್ಪ, ಎಚ್‌.ಹನುಮಂತಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಜಿ.ವಿರೂಪಾಕ್ಷಗೌಡ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಲವಂತವಾಗಿ ಮುಚ್ಚಿದ ವಾಣಿಜ್ಯ ಮಳಿಗೆ
ಬಿಜೆಪಿ ಬಂದ್‌ ಹಿನ್ನೆಲೆ ನಗರದಲ್ಲಿ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ
ಮುಚ್ಚಿಸಿದರು. ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಶಾಸಕ ಸೋಮಶೇಖರ್‌ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಮೆರವಣಿಗೆ ತೆರಳಿ ಬೆಳಗ್ಗೆ ಅಲ್ಲಲ್ಲಿ ತೆರೆದಿದ್ದ ಖಾಸಗಿ ಬ್ಯಾಂಕ್‌, ವ್ಯಾಪಾರ ಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸುವ ಮೂಲಕ ಬಂದ್‌ ಆಚರಿಸಿದರು. ಇನ್ನೂ ಎಂದಿನಂತೆ ಸಂಚರಿಸುತ್ತಿದ್ದ ಸರ್ಕಾರಿ ಬಸ್‌ಗಳನ್ನು ಮಧ್ಯಾಹ್ನದವರೆಗೆ ರಸ್ತೆಗೆ ಇಳಿಯದಂತೆ ತಡೆಯಲಾಯಿತು.

ಇದರಿಂದ ದೂರದೂರಿಗೆ ತೆರಳುವ, ಗ್ರಾಮೀಣ ಭಾಗದಿಂದ ಆಗಮಿಸಿದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು. ಇನ್ನು ಆಟೋ ಸೇರಿ ಇತರೆ ಪ್ರಯಾಣಿಕ ವಾಹನಗಳು ಎಂದಿನಂತೆ ಚಾಲನೆ ಪಡೆದುಕೊಂಡಿದ್ದವು.

ಎಂದಿನಂತೆ ವ್ಯಾಪಾರ ವಹಿವಾಟು
ನಗರದಲ್ಲಿ ಬಿಜೆಪಿಯಿಂದ ಕರೆ ನೀಡಿದ ಬಂದ್‌ ವ್ಯಾಪಾರ ವಹಿವಾಟಿನ ಮೇಲೆ ಅಷ್ಟೇನು ಪ್ರಭಾವ ಬೀರಲಿಲ್ಲ. ಬೆಳಗ್ಗೆ ಎಂದಿನಂತೆ ಅಂಗಡಿ, ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಕೆಲವೆಡೆ ವ್ಯಾಪಾರ ಮಳಿಗೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಯಿತು. ಬಳಿಕ ಮಧ್ಯಾಹ್ನದ ವೇಳೆ ಎಂದಿನಂತೆ ವ್ಯಾಪಾರ ವಹಿವಾಟು ಆರಂಭಿಸಲಾಯಿತು.

ಟ್ರಾಫಿಕ್‌ ಜಾಮ್‌…
ಬಂದ್‌ ಹಿನ್ನೆಲೆಯಲ್ಲಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಹಳೆಯ ಬಸ್‌ ನಿಲ್ದಾಣದ ಎದುರಿನ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಯಿತು. ಇದರಿಂದ ವಾಹನ ಸವಾರರು ಟ್ರಾಫಿಕ್‌ ಜಾಮ್‌ನಿಂದ ಹೊರ ಬರಲು ಹರಸಾಹಸ ಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next