Advertisement

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

07:13 PM Sep 26, 2020 | sudhir |

ಉಡುಪಿ: ರೈತ ವಿರೋಧಿ ಭೂಸುಧಾರಣಾ ಕಾಯ್ದೆ , ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್‌ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.28 ರಂದು ನಡೆಸಲು ಉದ್ದೇಶಿಸಿರುವ ಸ್ವಯಂಪ್ರೇರಿತ ಕರ್ನಾಟಕ ಬಂದ್‌ಗೆ ಜಿಲ್ಲೆಯ 14 ಸಂಘಟನೆಗಳು ಬೆಂಬಲ ಘೋಷಿಸಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಗೆ ಸೇರಿದ ಕಾಂಗ್ರೆಸ್‌ ಕಿಸಾನ್‌ ಘಟಕ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ಜೆಡಿಎಸ್‌, ದಲಿತ ಸಂಘರ್ಷ ಸಮಿತಿ, ಸಿಪಿಐಎಂ, ದಲಿತ ಸಂಘರ್ಷ ಸಮಿತಿ, ಸಹಬಾಳ್ವೆ ಉಡುಪಿ, ವೆಲ್ಫೆರ್‌ ಪಾರ್ಟಿ ಆಫ್ ಇಂಡಿಯಾ, ಜಿಲ್ಲಾ ಮುಸ್ಲಿಮ್‌ ಒಕ್ಕೂಟ, ಕರ್ನಾಟಕ ರಾಷ್ಟ್ರ ಸಮಿತಿ, ಸಿಐಟಿಯು, ಭಾರತೀಯ ಕ್ರಿಶ್ಚಿಯನ್‌ ಒಕ್ಕೂಟ, ಅಂಬೇಡ್ಕರ್‌ ಸೇನೆ ಸಂಘಟನೆಗಳು ಬಂದ್‌ ಬೆಂಬಲಿಸಲು ನಿರ್ಧರಿಸಿದೆ ಎಂದರು.

ಸರಕಾರದ ನೀತಿಗಳು ಜನಸಾಮಾನ್ಯರನ್ನು ಬಾಧಿಸುವುದರಿಂದ ಉಡುಪಿ ಜಿಲ್ಲೆಯ ರೈತರು, ಕಾರ್ಮಿಕರು, ವ್ಯಾಪಾರಿಗಳು, ಬಸ್‌ ಮಾಲಕರು ಮತ್ತು ನೌಕರರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ, ಸರಕಾರಕ್ಕೆ ಎಚ್ಚರಿಕೆ ನೀಡಬೇಕು. ಸೆ.28ರಂದು ಬೆಳಗ್ಗೆ 6ಗಂಟೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಈ ಸಂಘಟನೆಗಳ ಪದಾಧಿಕಾರಿಗಳು ಸೇರಿ ನಗರದಾದ್ಯಂತ ಮೆರವಣಿಗೆಯ ಮೂಲಕ ತೆರಳಿ ಬಂದ್‌ ಬೆಂಬಲ ನೀಡುವಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ಕೋರಲಾಗುವುದು ಎಂದು
ಕಾಯಿದೆಗಳ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರ ರೈತಾಪಿ ಕೃಷಿ ನಾಶ ಮಾಡಿ, ಕಂಪೆನಿ ಕೃಷಿಯನ್ನು ಜಾರಿಗೆ ತರಲು ಹೊರಟಿದೆ. ಖಾಸಗೀಕರಣಗೊಳಿಸುವ ಉದ್ದೇಶದಿಂದ ವಿದ್ಯುತ್‌ ಕಾಯಿದೆ ಜಾರಿಗೆ ತರ ಲಾಗುತ್ತಿದೆ. ಇದು ಜಾರಿಯಾದರೆ ನೀರಾವರಿ ಪಂಪ್‌ಸೆಟ್‌ಗಳಿಗೂ ಮೀಟರ್‌ ಕಡ್ಡಾಯ ಮಾಡಲಾಗುತ್ತದೆ ಮತ್ತು ಉಚಿತ ವಿದ್ಯುತನ್ನು ನಿಲ್ಲಿಸಲಾಗುತ್ತದೆ. ಸರಕಾರದ ಈ ನೀತಿಗಳು ದೇಶದ ಕೃಷಿ, ಆಹಾರ ಭದ್ರತೆ, ಸ್ವಾವಲಂಬನೆಯನ್ನು ನಾಶ ಮಾಡುತ್ತವೆ ಮತ್ತು ಇದರಿಂದ ಬಹುಸಂಖ್ಯಾಕರು ಹಸಿವು, ಬಡತನ, ನಿರುದ್ಯೋಗವನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕಿಸಾನ್‌ ಘಟಕದ ಶಶಿಧರ್‌ ಶೆಟ್ಟಿ ಎರ್ಮಾಳ್‌, ಪ್ರಾಂತ ರೈತ ಸಂಘದ ಶಶಿಧರ್‌ ಗೊಲ್ಲ, ಕಾಂಗ್ರೆಸ್‌ ಮುಖಂಡ ಕುಶಲ್‌ ಶೆಟ್ಟಿ, ಜೆಡಿಎಸ್‌ನ ಯೋಗೀಶ್‌ ಶೆಟ್ಟಿ, ದಸಂಸ ಮುಖಂಡ ಸುಂದರ್‌ ಮಾಸ್ಟರ್‌, ವೆಲ್ಫೆರ್‌ ಪಾರ್ಟಿಯ ಅಬ್ದುಲ್‌ ಅಝೀಝ್, ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಯಾಸೀನ್‌ ಮಲ್ಪೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನುತ ಕಿರಣ್‌, ಸಿಐಟಿಯು ಕವಿರಾಜ್‌, ಕ್ರಿಶ್ಚಿಯನ್‌ ಒಕ್ಕೂಟದ ಪ್ರಶಾಂತ್‌ ಜತ್ತನ್ನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next