ಮಲ್ಪೆ: ಶಿವಮೊಗ್ಗದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ತಾಯಿ ಹಾಗೂ ಕುಟುಂಬಸ್ಥರನ್ನು ಸಂತೈಸಿದರು.
ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದಲ್ಲದೆ ಸಂಕಷ್ಟದ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಕುಟುಂಬದ ಜತೆ ನಿಲ್ಲುವ ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಹತ್ಯೆಯ ಹಿಂದೆ ಜೆಹಾದಿ ಸಂಘಟನೆಯ ಕೈವಾಡ ಇದ್ದು ನಾವು ಅವರದ್ದೇ ಭಾಷೆಯಲ್ಲಿ ಉತ್ತರ ನೀಡುತ್ತೇವೆ. ಹಿಜಾಬ್ ಗಲಾಟೆಯಲ್ಲೂ ಜೆಹಾದಿಗಳ ಹುನ್ನಾರವಿತ್ತು. ಅದರದ್ದೇ ಭಾಗ ವಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಅವರು ಹರ್ಷನ ಕುಟುಂಬಕ್ಕೆ ಮಗನ ಸ್ಥಾನದಲ್ಲಿ ನಿಂತು ನೆರವಾಗುತ್ತೇನೆ ಎಂದರು.
ಶಾಸಕರಿಂದಲೂ ನೆರವು
ಕರಾವಳಿ ಮಂಗಳೂರು/ಉಡುಪಿ: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಸಕರು ಸಾಂತ್ವನ ಹೇಳಿದ್ದಲ್ಲದೆ ನೆರವಿನ ಹಸ್ತ ಚಾಚಿದ್ದಾರೆ.
ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು 2 ಲ.ರೂ. ಘೋಷಿಸಿದ್ದಾರೆ. ಟ್ವೀಟ್ ಮಾಡಿರುವ ಶಾಸಕರು, “ವೈಯಕ್ತಿಕ ನೆಲೆಯಲ್ಲಿ 2 ಲ.ರೂ.ಗಳನ್ನು ನೀಡುತ್ತಿದ್ದೇನೆ. ಸಿದ್ಧಾಂತಕ್ಕಾಗಿ ಬಲಿದಾನಗೈದ ಹರ್ಷನ ಕುಟುಂಬದ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ. ಹಾಗಾಗಿ ನಮ್ಮಿಂದಾಗುವಷ್ಟು ಸಹಾಯ ಮಾಡೋಣ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ’ ಎಂದು ಹೇಳಿದ್ದಾರೆ.
ಹರ್ಷ ಹತ್ಯೆಯ ಹಿಂದೆ ರಾಷ್ಟ್ರ ವಿರೋಧಿ ಸಂಘಟನೆಗಳ ಕೈವಾಡವಿದ್ದು, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಗೃಹ ಸಚಿವರನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಹರ್ಷ ಅವರ ಕುಟುಂಬಕ್ಕೆ ಶಾಸಕರಾದ ಸುಕುಮಾರ ಶೆಟ್ಟಿ 1 ಲಕ್ಷ ರೂ. ಮತ್ತು ರಘುಪತಿ ಭಟ್ 1 ಲಕ್ಷ ರೂ. ಹಾಗೂ ಡಾ| ಭರತ್ ಶೆಟ್ಟಿ ವೈ. ತಮ್ಮ ಒಂದು ತಿಂಗಳ ಭತ್ತೆ ಸಹಿತ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.