Advertisement

ನ್ಯಾಯದಾನ ವ್ಯವಸ್ಥೆ ಕರ್ನಾಟಕಕ್ಕೆ ಅಗ್ರಸ್ಥಾನ: 18 ದೊಡ್ಡ ರಾಜ್ಯಗಳ ಪೈಕಿ ವಿಶೇಷ ಸಾಧನೆ

12:58 AM Apr 05, 2023 | Team Udayavani |

ಹೊಸದಿಲ್ಲಿ: ಬಂಡವಾಳ ಹೂಡಿಕೆ, ಕೈಗಾರಿಕ ಕ್ಷೇತ್ರ ಸಹಿತ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕರ್ನಾಟಕ ಮತ್ತೊಂದು ಹೆಗ್ಗಳಿಕೆಯ ಸಾಧನೆ ಮಾಡಿದೆ.

Advertisement

ಪೊಲೀಸ್‌, ಕಾನೂನು ನೆರವು, ನ್ಯಾಯಾಂಗ ವ್ಯವಸ್ಥೆ, ಕಾರಾಗೃಹ ವ್ಯವಸ್ಥೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರ ರಾಜ್ಯಗಳ ವ್ಯಾಪ್ತಿಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಮಂಗಳವಾರ ಪ್ರಕಟಗೊಂಡ 2022ನೇ ಸಾಲಿನ “ಇಂಡಿಯಾ ಜ್ಯುಡಿಶಿಯಲ್‌ ರಿಪೋರ್ಟ್‌’ನಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ.

ಇದರ ಜತೆಗೆ ರಾಜ್ಯದ ಕಾರಾಗೃಹಗಳ ಒಟ್ಟು ಸಿಬಂದಿ ಪೈಕಿ ಶೇ.32 ಮಂದಿ ಮಹಿಳೆಯರೇ ಆಗಿದ್ದಾರೆ. ಬೇರೆ ಯಾವ ರಾಜ್ಯದಲ್ಲಿಯೂ ಕೂಡ ಇಂಥ ಸಾಧನೆ ಮಾಡಿಲ್ಲ ಎಂದು ಪ್ರಶಂಸಿಸಲಾಗಿದೆ.

ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಒಟ್ಟು ಸಿಬಂದಿಯ ಪೈಕಿ ಮಹಿಳೆಯ ಸಂಖ್ಯೆ ಶೇ.10ನ್ನು ಮೀರುವುದಿಲ್ಲ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. ತಮಿಳುನಾಡು, ತೆಲಂಗಾಣ ಈ ವ್ಯಾಪ್ತಿಯಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ.

Advertisement

ಶೇ.77 ವಿಚಾರಣಾಧೀನ ಕೈದಿಗಳು: ದೇಶದ ಹೆಚ್ಚಿನ ಕಾರಾಗೃಹಗಳಲ್ಲಿ ಬಂದಿಗಳಾಗಿ ಇರುವವರ ಪೈಕಿ ಶೇ.77 ಮಂದಿ ವಿಚಾರಣಾಧೀನ ಕೈದಿಗಳು. ಶೇ.22 ಮಂದಿ ಮಾತ್ರ ಅಪರಾಧಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಆತಂಕ ಪಡಲಾಗಿದೆ. 2010ರ ಬಳಿಕ ದೇಶದ ಜೈಲುಗಳಲ್ಲಿ 2.4 ಲಕ್ಷ ಮಂದಿ ಇದ್ದ ವಿಚಾರಣಾಧೀನ ಕೈದಿಗಳ ಸಂಖ್ಯೆ 2021ರ ವೇಳೆಗೆ 4.3 ಲಕ್ಷ ಮಂದಿಗೆ ಏರಿಕೆಯಾಗಿದೆ. ಅಂದರೆ ಶೇ.78 ಹೆಚ್ಚಳವಾಗಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾ ಮತ್ತು ಮಧ್ಯ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಚಾರಣಾಧೀನ ಕೈದಿಗಳ ಪ್ರಮಾಣವೇ ಶೇ.60ನ್ನು ಮೀರಿಸಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಹರಿಯಾಣದಲ್ಲಿ ಹೆಚ್ಚು: 18 ದೊಡ್ಡ ಮತ್ತು ಮಧ್ಯಮ ಗಾತ್ರ ರಾಜ್ಯಗಳ ಪೈಕಿ ಹರಿಯಾಣದ ಜೈಲುಗಳಲ್ಲಿ ಅತ್ಯಂತ ಹೆಚ್ಚಿನ ಕೈದಿಗಳಿದ್ದಾರೆ. ತಮಿಳುನಾಡಿನ 139 ಜೈಲುಗಳಲ್ಲಿ 15ರಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿದ್ದಾರೆ. ಸಣ್ಣ ರಾಜ್ಯಗಳ ಪೈಕಿ ಮೇಘಾಲಯದಲ್ಲಿ 5ರ ಪೈಕಿ 4ರಲ್ಲಿ ಮಿತಿಗಿಂತ ಹೆಚ್ಚಿನ ಕೈದಿಗಳಿದ್ದಾರೆ. ಅನಂತರದ ಸ್ಥಾನದಲ್ಲಿ ಹಿಮಾಚಲ ಪ್ರದೇಶ ಇದೆ. ಆ ರಾಜ್ಯದ 23ರ ಪೈಕಿ 14ರಲ್ಲಿ ಮಿತಿಗಿಂತ ಹೆಚ್ಚಿನ ಬಂದಿಗಳು ಇದ್ದಾರೆ.

ವರದಿಯ ಅಂಶಗಳು
-ಬೇಕಾಗಿರುವ 1,391 ಜೈಲು ಸಿಬಂದಿಯ ಪೈಕಿ ಇರುವುದು 886 ಮಾತ್ರ
-ಪ್ರತೀ 625 ಕೈದಿಗಳಿಗೆ ಒಬ್ಬ ಸಿಬಂದಿ ಇದ್ದಾನೆ.
-2019ರಲ್ಲಿ ದೇಶದ ಜೈಲುಗಳಲ್ಲಿ ತೆರವಾಗಿದ್ದ ಹುದ್ದೆಗಳ ಪ್ರಮಾಣ ಶೇ.42
-23 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೈಲುಗಳಲ್ಲಿ ಬಂದಿಗಳ ಸಂಖ್ಯೆ ಮಿತಿಗಿಂತ ಹೆಚ್ಚು

Advertisement

Udayavani is now on Telegram. Click here to join our channel and stay updated with the latest news.

Next