ಸುರತ್ಕಲ್: ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಕುಂದಾಪುರದಿಂದ ವಲಸೆ ಬಂದವರು. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯ ಮಾಹಿತಿಯಿಲ್ಲದೆ ಟೀಕಿಸುತ್ತಿದ್ದಾರೆ. ಶಾಸಕ ಮೊದಿನ್ ಬಾವಾ ಅವರ ಸಾಧನೆ ಇತರ ಕ್ಷೇತ್ರಗಳಿಗೂ ಮಾದರಿಯಾಗಿದೆ. ಆರೋಗ್ಯ ನಿಧಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯರಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಮೊದಲ ಐದು ವರ್ಷದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಚುನಾವಣಾ ಉಸ್ತುವಾರಿ ದೇವಿ ಪ್ರಸಾದ್ ಶೆಟ್ಟಿ ಹೇಳಿದರು.
ಸುರತ್ಕಲ್ ಬ್ಲಾಕ್ ಸಮಿತಿಯ ಕಾರ್ಪೊರೇಟರ್‌ಗಳು, ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಆದರೆ ಇದೆಲ್ಲ ಕೇಂದ್ರದ ಅನುದಾನದಿಂದ ಕೊಡುತ್ತಿದ್ದಾರೆ, ಕಾಂಗ್ರೆಸ್ಸಿಗರದು ಬಿಟ್ಟಿ ಪ್ರಚಾರ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿ ಆಡಳಿತವಿರುವ ಗುಜರಾತ್, ರಾಜಸ್ಥಾನ ಮತ್ತಿತರೆಡೆ ಇಂಥ ಯೋಜನೆ ಏಕೆ ಜಾರಿಯಾಗಿಲ್ಲ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಗೆ ಈಗ ಟೀಕಿಸಲು ವಿಚಾರಗಳು ಸಿಗುತ್ತಿಲ್ಲ. ಶಾಸಕ ಮೊದಿನ್ ಬಾವಾ ಅವರು ಯಾವುದೇ ಪಕ್ಷಭೇದವಿಲ್ಲದೆ ಅನುದಾನ ಹಂಚಿದ್ದಾರೆ. ದೈವ ದೇವಸ್ಥಾನಗಳಿಗೆ ಅನುದಾನ ನೀಡಿದ್ದಾರೆ. ರಸ್ತೆ ಕಾಂಕ್ರೀಟೀಕರಣವಾಗಿದೆ. ನೀರಿನ ಸೌಲಭ್ಯವನ್ನು ಹಳ್ಳಿಗಳಿಗೆ ನೀಡಲಾಗಿದೆ. ಕಾಂಗ್ರೆಸ್ ಜಾತಿ ಆಧಾರಿತವಾಗಿ ಆಡಳಿತ ನಡೆಸುವುದಿಲ್ಲ. ಜನತೆಗೆ ಶಾಂತಿ, ನೆಮ್ಮದಿಯ ಜತೆ ಅಭಿವೃದ್ಧಿಯ ಸುರತ್ಕಲ್ ಪಟ್ಟಣವನ್ನು ನೋಡ ಬಯಸುತ್ತಾರೆ ವಿನಾ ಜಾತಿ ಸಂಘರ್ಷವನ್ನಲ್ಲ. ಬಿಜೆಪಿ ಆಡಳಿತಕ್ಕೆ ಬಂದಲ್ಲಿ ನೆಮ್ಮದಿಯ ವಾತಾವರಣ ಕೆಡಲಿದೆ ಎಂದು ಎಚ್ಚರಿಸಿದರು.
ಶಾಸಕ ಬಾವಾ ಮಾತನಾಡಿ, ಬುದ್ಧಿವಂತ ಮತದಾರರು ಕಾಂಗ್ರೆಸ್ ಏನು ಮಾಡಿದೆ, ಬಿಜೆಪಿ ಏನು ಮಾಡಿದೆ ಎಂಬುದನ್ನು ತಿಳಿದಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ನಿಲುವು ಪ್ರದರ್ಶಿಸಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಸಂದರ್ಭ ತಲಾ 15 ಲ.ರೂ. ಹಾಕುವುದಾಗಿ ಭರವಸೆ ನೀಡಿದ್ದರೂ 1 ರೂ. ಕೂಡ ಬೀಳಲಿಲ್ಲ. ಬ್ಯಾಂಕು ವ್ಯವಹಾರಗಳು ಶ್ರೀಮಂತರ ಪಾಲಾಗುತ್ತಿವೆ ಎಂದು ಟೀಕಿಸಿದರು.
ಹರೀಶ್ ಕುಮಾರ್, ದೀಪಕ್ ಪೂಜಾರಿ, ಭಾಸ್ಕರ ಮೊಯಿಲಿ, ನವೀನ್ ಡಿ’ಸೋಜಾ, ಕೆ. ಸದಾಶಿವ ಶೆಟ್ಟಿ, ವೈ. ರಮಾನಂದ ರಾವ್, ಬಶೀರ್ ಕಾಟಿಪಳ್ಳ, ಮೊಹಮ್ಮದ್, ಪ್ರತಿಭಾ ಕುಳಾಯಿ, ಶಶಿಧರ ಹೆಗ್ಡೆ, ಮಲ್ಲಿಕಾರ್ಜುನ್, ಹಿಲ್ಡಾ ಆಳ್ವ, ಗುಲ್ಜಾರ್ ಬಾನು, ಗೋವರ್ಧನ್ ಶೆಟ್ಟಿಗಾರ್, ಮಂಗಳೂರು ಬಾವಾ, ಬಶೀರ್ ಬೈಕಂಪಾಡಿ, ಸಮಿತಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.