Advertisement
ಮಂಗಳೂರು/ಉಡುಪಿ: ಒಂದು, ಎರಡು ಮುಗಿದಿದೆ. ಮೂರನೇ ಆವೃತ್ತಿ ಚಾಲ್ತಿಯಲ್ಲಿದೆ ! ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅದರ ಪ್ರಯುಕ್ತವೆಂಬಂತೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಆವೃತ್ತಿ ಒಂದು ಎಂಬಂತೆ ಬಿಜೆಪಿಯ “ಬೂತ್ ವಿಜಯ ಅಭಿಯಾನ’, ವಿಜಯ ಸಂಕಲ್ಪ ಅಭಿಯಾನ ನಡೆದಿದೆ. ಕಾಂಗ್ರೆಸ್‌ನ ಪ್ರಜಾಧ್ವನಿ, ಕರಾವಳಿ ಪ್ರಜಾಧ್ವನಿ ಯಾತ್ರೆಯೂ ಬಂದು ಹೋಗಿದೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯೂ ಘೋಷಣೆಯಾಗಿದೆ.
Related Articles
Advertisement
ಧಾರ್ಮಿಕ ಉತ್ಸವಗಳಿಗೂ ಕೊರತೆಯಿಲ್ಲ. ಎಂದೂ ದುಡ್ಡು ಬಿಚ್ಚದ ಜನಪ್ರತಿನಿಧಿಗಳೂ ಈಗ ಕೈ ತುಂಬಾ ಎನ್ನುವಂತೆ ದೇಣಿಗೆ ನೀಡಿ ಫ್ಲೆಕ್ಸ್‌ಗಳಲ್ಲಿ ರಾರಾಜಿಸ ತೊಡಗಿದ್ದಾರೆ. ಇನ್ನು ಕೆಲವರು ಊರಲ್ಲಿ ನಡೆಸುವ ಎಲ್ಲ ಉತ್ಸವಗಳಲ್ಲಿ ಮುಂಚೂಣಿಯಲ್ಲಿ ನಿಂತು ಶೋಭಿಸತೊಡಗಿದ್ದಾರೆ. ವಿಶೇಷವೆಂದರೆ ಎರಡು ತಿಂಗಳಿಂದ ಸಣ್ಣ ಉತ್ಸವಗಳ ಮಾತೇ ಇಲ್ಲ. ಎಲ್ಲ ಉತ್ಸವಗಳೂ ದೊಡ್ಡದೆಂಬಂತೆ ಬಿಂಬಿಸಿ ಅದರಲ್ಲಿ “ಮೈಲೇಜ್’ ಪಡೆಯಲು ಕೆಲವು ಹಾಲಿ, ಮಾಜಿ ಜನಪ್ರತಿನಿಧಿಗಳು, ಟಿಕೆಟ್ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಏನಕೇನ ಪ್ರಕಾರೇಣ ನಿತ್ಯವೂ ಮಾಧ್ಯಮಗಳಲ್ಲಿ ಪ್ರಸ್ತುತತೆ ಪಡೆಯಬೇಕೆಂಬುದು ಎಲ್ಲರ ಸದ್ಯದ ಲೆಕ್ಕಾಚಾರ.
ಕರಾವಳಿ ಜಿಲ್ಲೆಗಳ ಈ ಹಿಂದಿನ ಚುನಾವಣೆ ಫಲಿತಾಂಶಗಳನ್ನು ಗಮನಿಸಿದರೆ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಸಾಮಾನ್ಯ. ಜೆಡಿಎಸ್, ಎಡ ಪಕ್ಷಗಳು ಸ್ಪರ್ಧೆಯಲ್ಲಿದ್ದರೂ ಪ್ರಭಾವ ಕಡಿಮೆ. ಬಲವರ್ಧಿಸಿಕೊಳ್ಳುವ ಯತ್ನ ಎಸ್‌ಡಿಪಿಐ ನದ್ದು. ಕಾಪು, ಪುತ್ತೂರು ಮೊದಲಾದ ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರಚಾರ ಆರಂಭಿಸಿದೆ. ಮೂರನೇ ಆವೃತ್ತಿಯ ಬಳಿಕ ಬಿಜೆಪಿ ಸಾರ್ವಜನಿಕ ಸಮಾವೇಶಗಳಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಒಬಿಸಿ, ಮಹಿಳಾ, ಯುವ ಹಾಗೂ ಪರಿಶಿಷ್ಟ ಪಂಗಡಗಳ ಸಭೆಗಳನ್ನು ನಡೆಸುವ ಅಂದಾಜಿನಲ್ಲಿದೆ.
ಕಾಂಗ್ರೆಸ್ ಸಹ ಪ್ರಮುಖ ನಾಯಕರನ್ನು ಕರೆಸಿ ಕಾರ್ಯಕ್ರಮಗಳನ್ನು ಆಯೋಜಿಸುವತ್ತ ಯೋಚಿಸುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಕಣದಲ್ಲಿ ಮತ್ತಷ್ಟು ಬಿರುಸಿನ ಚಟುವಟಿಕೆಗಳು ಕಾಣಿಸಬಹುದು. ಸದ್ಯ ಯಾವುದೇ ಕ್ಷೇತ್ರದಲ್ಲಿ ಯಾವ ಜನಪ್ರತಿಯನ್ನು ಕೇಳಿದರೂ ನಾನೇ ಅಭ್ಯರ್ಥಿ. ವರಿಷ್ಠರು ಮುಂದುವರಿಯಲು ಸೂಚಿಸಿದ್ದಾರೆ. ಹೀಗಾಗಿ ಸುತ್ತಾಟ ಆರಂಭಿಸಿದ್ದೇವೆ ಎನ್ನುವ ಮಾತು ಸಾಮಾನ್ಯವಾಗಿಬಿಟ್ಟಿದೆ.
ಇನ್ನೂ ರಂಗೇರಬೇಕಿದೆ ಕರಾವಳಿ ಕಣಕರಾವಳಿಯಲ್ಲಿ ಚುನಾವಣೆ ಹವಾ ಬಿಸಿಯಾಗುವ ಮೊದಲೇ ಬಿಸಿಲಿನ ತಾಪ ನೆತ್ತಿಗೇರಿದೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ತಾಪಮಾನವಿದೆ. ಹಾಗೆ ನೋಡಿದರೆ ಕರಾವಳಿ ಕಣದಲ್ಲಿ ಈಗಾಗಲೇ ಚುನಾವಣೆಯ ತಾಪವೂ ಏರಬೇಕಿತ್ತು. ಆದರೆ ಇನ್ನೂ ಎಲ್ಲ ಪಕ್ಷಗಳಲ್ಲೂ ಟಿಕೆಟ್ ಘೋಷಣೆಯಾಗದ ಕಾರಣ ಕಣಕ್ಕೆ ರಂಗು ಬಂದಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಚುನಾವಣೆಯ ಕಾವೂ ತೀವ್ರತೆ ಪಡೆಯಲಿದೆ. ಆ ವೇಳೆಗೆ ಸೂರ್ಯನ ಪ್ರತಾಪವೂ ಕಡಿಮೆ ಇರದು. ಬಿಸಿಲಿನ ತಾಪ ಹಾಗೂ ಚುನಾವಣೆ ಪ್ರತಾಪ ಯಾವುದು ಹೆಚ್ಚಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.