ಬೆಂಗಳೂರು:ಚುನಾವಣೆಗೆ ಪಕ್ಷದ ಆಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾದ ಮೇಲೆ ತಕ್ಷಣಕ್ಕೆ ಕೇಳಿ ಬರುವುದು ಬಿ ಫಾರಂ ಹಂಚಿಕೆ ವಿಚಾರ. ಟಿಕೆಟ್ ಗಿಟ್ಟಿಸಿಕೊಂಡು ತಕ್ಷಣಕ್ಕೆ ನಿರಾಳರಾಗುವ ಆಕಾಂಕ್ಷಿಗಳಿಗೆ ಬಿ ಫಾರಂ ದುಗುಡ ಆರಂಭವಾಗುತ್ತದೆ. ಒಮ್ಮೊಮ್ಮೆ ಈ ಬಿ ಫಾರಂ ಪಡೆದುಕೊಳ್ಳುವುದು ಆಕಾಂಕ್ಷಿಗಳ ಪಾಲಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕಿಂತ ಕಷ್ಟ ಕೆಲಸ ಆಗಿರುತ್ತದೆ.
ಏಕೆಂದರೆ, ಟಿಕೆಟ್ ಅಂತಿಮವಲ್ಲ. ಬಿ ಫಾರಂ ಸಿಕ್ಕರೆ ಮಾತ್ರ ಟಿಕೆಟ್‌ಗೆ ಬೆಲೆ ಬರುತ್ತದೆ. ಟಿಕೆಟ್ ಯಾರಿಗೇ ಸಿಗಲಿ, ಚುನಾವಣಾಧಿಕಾರಿಗಳಿಗೆ ಯಾರು ಬಿ ಫಾರಂ ಸಲ್ಲಿಸುತ್ತಾರೋ ಅವರೇ ಪಕ್ಷದ ಅಧೀಕೃತ ಅಭ್ಯರ್ಥಿಯಾಗುತ್ತಾರೆ. ಅನೇಕ ಸಂದರ್ಭಗಳಲ್ಲಿ ಟಿಕೆಟ್ ಯಾರಿಗೂ ಸಿಕ್ಕಿರುತ್ತೆ, ಅಂತಿಮ ಕ್ಷಣದಲ್ಲಿ ಇನ್ನಾರೂ ಬಿ ಫಾರಂ ಸಲ್ಲಿಸುತ್ತಾರೆ. ಈ ಬಿ ಫಾರಂ ಸಲ್ಲಿಸಲು ರಾಜಕೀಯ ಪಕ್ಷಗಳು ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಹಾಗದರೆ, ಈ ಬಿ ಫಾರಂ ಯಾಕಿಷ್ಟು ಮಹತ್ವ ಈ ಬಗ್ಗೆ ಒಂದಿಷ್ಟು ಮಾಹಿತಿ.
ರಾಜಕೀಯ ಪಕ್ಷಗಳಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಅಥವಾ ಗುರುತಿಸಲ್ಪಟ್ಟ ಅಭ್ಯರ್ಥಿಯು ತನ್ನ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಹಲವು ಅರ್ಜಿ ನಮೂನೆಗಳಲ್ಲಿ ಬಿ ಫಾರಂ ಸಹ ಒಂದು. ಇದರಲ್ಲಿ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ವಿಶೇಷ ಅಧಿಕಾರ ನೀಡಲ್ಪಟ್ಟ ಪದಾಧಿಕಾರಿಯ ಸಹಿ ಇರುತ್ತದೆ. ಆ ಸಹಿ ಇದ್ದಾಗ ಮಾತ್ರ ಅದು ಅಧಿಕೃತವೆನಿಸಿಕೊಳ್ಳುತ್ತದೆ. ಬಿ ಫಾರಂ ಮೂಲಕ ರಾಜಕೀಯ ಪಕ್ಷವೊಂದು ಇವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಚುನಾವಣಾಧಿಕಾರಿಗಳಿಗೆ ದೃಢೀಕರಣ ಕೊಡುತ್ತದೆ.
ಬಿ ಫಾರಂನಲ್ಲಿ ಐದು ಭಾಗಗಳಿದ್ದು, ಅದೆಲ್ಲವನ್ನೂ ಭರ್ತಿ ಮಾಡಬೇಕು. ಜೊತೆಗೆ ಯಾವ ಕ್ಷೇತ್ರದ ಚುನಾವಣೆಯ ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸಲಾಗಿರುತ್ತದೂ, ಆ ಕ್ಷೇತ್ರದ 10 ಮಂದಿ ಮತದಾರರು ಸೂಚಕರಾಗಿರಬೇಕು. ಒಂದು ಪಕ್ಷದಿಂದ ಕೆಲವು ಸಂದರ್ಭಗಳಲ್ಲಿ ಒಂದೇ ಬಿ ಫಾರಂನಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ನಮೂದು ಮಾಡಲಾಗಿರುತ್ತದೆ. ಒಂದನೇ ಅಭ್ಯರ್ಥಿ ಅಧಿಕೃತ, ಎರಡನೇ ಅಭ್ಯರ್ಥಿಯನ್ನು “ಡಮ್ಮಿ ಕ್ಯಾಂಡಿಡೆಟ್’ ಎಂದು ಕರೆಯಲಾಗುತ್ತದೆ. ಒಂದು ವೇಳೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಯಾವುದೂ ಕಾರಣಕ್ಕೆ ತಿರಸ್ಕೃತವಾದರೆ, ಡಮ್ಮಿ ಅಭ್ಯರ್ಥಿ ಅಧಿಕೃತ ಅಭ್ಯರ್ಥಿ ಆಗುತ್ತಾನೆ. ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಬಹುದು. ಆದರೆ, ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ದಿನಾಂಕದ 3 ಗಂಟೆಯೊಳಗೆ ಬಿ ಫಾರಂ ಸಲ್ಲಿಸಬೇಕು. ಬಿ ಫಾರಂ ಸಲ್ಲಿಸದೇ ಇದ್ದಾಗ, ಹತ್ತು ಮಂದಿ ಸೂಚಕರು ಇಲ್ಲದಿದ್ದಾಗ, ನಾಮಪತ್ರ ಅಪೂರ್ಣ ಆದಾಗ ನಾಮಪತ್ರ ತಿರಸ್ಕೃತಗೊಳ್ಳುತ್ತದೆ.