Advertisement

ಆಳಿದವರ ಜತೆಗೆ ಉಳಿದವರೂ ಚುನಾವಣ ಅಖಾಡದಲ್ಲಿ

10:43 PM Feb 09, 2023 | Team Udayavani |

ರಾಜ್ಯದಲ್ಲಿ ಚುನಾವಣ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಅಖಾಡಕ್ಕೆ ಧುಮುಕಿ ಆಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಅಲ್ಲದೇ ಹತ್ತಾರು ಪಕ್ಷಗಳು ರಾಜ್ಯದಲ್ಲಿ ತಮ್ಮ ರಾಜಕೀಯ ಹಣೆಬರಹ “ಒರೆಗೆ’ ಹಚ್ಚಲು ಸಜ್ಜಾಗಿವೆ. ಪ್ರಮುಖ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೊರತಾಗಿ ಇತರ ಪಕ್ಷಗಳು, ರಾಜಕೀಯ ಸಂಘಟನೆಗಳು 2023ವಿಧಾನಸಭೆ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ, ಎಷ್ಟು ಕಡೆ ಸ್ಪರ್ಧೆ ಮಾಡಲಿವೆ, ಪಕ್ಷಗಳಿಗೆ ಚುನಾವಣ  ಅಜೆಂಡಾ ಏನು, ಕಾರ್ಯತಂತ್ರ ಹೇಗಿರಲಿದೆ ಎಂಬಿತ್ಯಾದಿ ಕುರಿತ ಕಿರುನೋಟ ಇಲ್ಲಿದೆ.

Advertisement

ಬೆಂಗಳೂರು: ಕಳೆದ ಬಾರಿ ರಾಷ್ಟ್ರೀಯ ಪಕ್ಷಗಳು, ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷಗಳು, ನೋಂದಾಯಿತ ಮಾನ್ಯತೆ ಹೊಂದಿಲ್ಲದ ಪಕ್ಷಗಳು ಸೇರಿ ಒಟ್ಟು 80ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಈ ಬಾರಿಯೂ ಬಹುತೇಕ ಇದೇ ಸಂಖ್ಯೆ ಆಗಬಹುದು. ಮುಖ್ಯವಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹೊರತುಪಡಿಸಿ ಆಮ್‌ ಆದ್ಮಿ, ಗಣಿಧಣಿ ಜನಾರ್ದನ ರೆಡ್ಡಿ ಸಾರಥ್ಯದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಶ್ರೀರಾಮಸೇನೆ, ಜೆಡಿಯು, ಸಿಪಿಐ, ಸಿಪಿಎಂ, ರೈತಸಂಘ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌), ಎಸ್‌ಡಿಪಿಐ, ವೆಲ್ಫೆàರ್‌ ಪಾರ್ಟಿ ಸದ್ಯಕ್ಕೆ ಮುಂಚೂಣಿಯಲ್ಲಿವೆ. ಚುನಾವಣೆ ಘೋಷಣೆ ಆಗುವ ವೇಳೆಗೆ ಈ ಪಟ್ಟಿ ಇನ್ನೂ ಬೆಳೆಯಬಹುದು.

ಪಂಜಾಬ್‌ ವಿಧಾನಸಭೆ ಚುನಾವಣೆ ಬಳಿಕ ರಾಷ್ಟ್ರೀಯ ಪಕ್ಷದ ಸ್ಥಾನ ಮಾನ ಪಡೆದುಕೊಂಡಿರುವ ಆಮ್‌ ಆದ್ಮಿ ಮತ್ತು ಜನಾರ್ದನ ರೆಡ್ಡಿ  ಅವರ ಕಾರಣಕ್ಕೆ ಕೆಆರ್‌ಪಿಪಿ ಸದ್ಯ ಹೆಚ್ಚು ಸದ್ದು ಮಾಡುತ್ತಿದ್ದು, ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಬಿಜೆಪಿ ವಿರುದ್ಧವೇ ಸೆಣಸಲು ಮುಂದಾಗಿರುವ ಶ್ರೀರಾಮಸೇನೆ ಚರ್ಚೆಯಲ್ಲಿದೆ. ಉಳಿದಂತೆ ಜೆಡಿಯು, ಎಡಪಕ್ಷಗಳು, ರೈತಸಂಘ, ಕೆಆರ್‌ಎಸ್‌, ಎಸ್‌ಡಿಪಿಐ ಮತ್ತಿತರ ಪಕ್ಷಗಳು ತಮ್ಮದೇ ರೀತಿಯಲ್ಲಿ ಸುದ್ದಿಯಾಗುತ್ತಿವೆ. ಈ ಎಲ್ಲ  ಪಕ್ಷಗಳು “ನಾವು ಗೆಲ್ಲಲು’ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ಮತ್ತೂಬ್ಬರನ್ನು ಗೆಲ್ಲಿಸಲು ಅಥವಾ ಸೋಲಿಸಲು ನಾವು ದಾಳ ಆಗುವುದಿಲ್ಲ ಎಂದು ಹೇಳಿಕೊಳ್ಳುತ್ತವೆ. ಆದರೆ ಈ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವುದಕ್ಕಿಂತ, ಇವರ ಸ್ಪರ್ಧೆಯಿಂದ ಯಾರಿಗೆ ಲಾಭ- ನಷ್ಟ ಆಗಲಿದೆ ಎಂಬ ಲೆಕ್ಕಚಾರಗಳೇ ಮುನ್ನೆಲೆ ಪಡೆದು  ಕೊಳ್ಳುತ್ತವೆ. ಪ್ರಮುಖ ರಾಜಕೀಯ ಪಕ್ಷಗಳು ಪ್ರಬಲ ಎದುರಾಳಿಗಳ ನಡುವೆ ಅಲ್ಪ ಮಟ್ಟಿನ “ಮತ ಅಂತರ’ ಈ ಪಕ್ಷಗಳಿಂದಾದರೂ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಎಸ್‌ಪಿ, ಬಿಎಸ್‌ಪಿ, ಎನ್‌ಸಿಪಿ, ಎಂಐಎಂ ಚಿತ್ರಣ ಇನ್ನೂ ಸ್ಪಷ್ಟವಾಗಬೇಕಿದೆ.

ಶ್ರೀರಾಮಸೇನೆ ಏಕಾಂಗಿ ಹೋರಾಟ :

ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಶ್ರೀರಾಮಸೇನೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದೆ. ವಿಶೇಷವೆಂದರೆ ಇಂಧನ ಸಚಿವ ಸುನಿಲ್‌ ಕುಮಾರ್‌ ವಿರುದ್ಧ ಕಾರ್ಕಳ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಮುತಾಲಿಕ್‌ ಘೋಷಿಸಿದ್ದಾರೆ. ಹಿಂದುತ್ವ ಮತ್ತು ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಪ್ರಾಮಾಣಿಕರು, ಹಿಂದುತ್ವ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವವರನ್ನು ಗುರುತಿಸಿ ಟಿಕೆಟ್‌ ನೀಡಲಾಗುವುದು. ರಾಜ್ಯದಲ್ಲಿ 10 ಕಡೆ ಶ್ರೀರಾಮಸೇನೆ ಸ್ಪರ್ಧಿಸಲಿದೆ. ಯಾರೊಂದಿಗೂ ಹೊಂದಾಣಿಕೆ ಇಲ್ಲ. ಏಕಾಂಗಿಯಾಗಿ ಶ್ರೀರಾಮಸೇನೆ ಚುನಾವಣೆ ಎದುರಿಸಲಿದೆ ಎಂದು ಹೇಳಲಾಗುತ್ತಿದೆ.

Advertisement

ಹಿಂದುತ್ವ-ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಕನಿಷ್ಠ 10 ಕ್ಷೇತ್ರಗಳಲ್ಲಿ ಶ್ರೀರಾಮಸೇನೆ ಚುನಾವಣೆಗೆ ಸ್ಪರ್ಧೆ ಮಾಡಲಿದೆ. -ಪ್ರಮೋದ್‌ ಮುತಾಲಿಕ್‌

ದಿಲ್ಲಿ ಮಾದರಿ ಆಮ್‌ ಆದ್ಮಿ ಬಂಡವಾಳ :

2018ರ ವಿಧಾನಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಆ ಎಲ್ಲ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದ ಆಮ್‌ ಆದ್ಮಿ ಪಕ್ಷ 2023ರ ಚುನಾವಣೆಗೂ ಅಖಾಡಕ್ಕೆ ಇಳಿಯುತ್ತಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿರುವುದರ ಜತೆಗೆ ದಿಲ್ಲಿಯಲ್ಲಿ ಕಳೆದ 8 ವರ್ಷಗಳಿಂದ ಮಾಡಿ ರುವ ಕೆಲಸ ಹಾಗೂ ದಿಲ್ಲಿ ಸಿಎಂ ಆಮ್‌ ಆದ್ಮಿ ಅರವಿಂದ ಕೇಜ್ರಿ ವಾಲ್‌ ಅವರ “ಚಹರೆ’ ಕರ್ನಾ ಟಕದಲ್ಲಿ ಆಪ್‌ಗೆ ಬಂಡವಾಳ. ಪಂಜಾಬ್‌, ಗೋವಾ ಹಾಗೂ ಗುಜರಾತಿನಲ್ಲಿ ಆದ ತಪ್ಪುಗಳನ್ನು ತಿದ್ದಿಕೊಂಡು ಕರ್ನಾಟಕದಲ್ಲಿ ಯೋಜನಾಬದ್ಧ ರೀತಿ ಯಲ್ಲಿ ಚುನಾವಣೆ ಅಖಾಡಕ್ಕಿಳಿಯಲು ಆಪ್‌ ರಣತಂತ್ರ ರೂಪಿಸಿಕೊಂಡಿದೆ. 224  ಕ್ಷೇತ್ರಗಳಲ್ಲಿ ಸ್ಪರ್ಧಿ ಸುವ ಇರಾದೆ ಹೊಂದಿದ್ದು, ಕನಿಷ್ಠ 80  ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಲಿದೆ. ಇದರಲ್ಲಿ ಎ,ಬಿ ಮತ್ತು ಸಿ ಕೆಟಗರಿಗಳನ್ನು ಮಾಡಿಕೊಂಡು ಪ್ರತ್ಯೇಕ ಕಾರ್ಯತಂತ್ರ ರೂಪಿಸಲಾಗಿದೆ. ಮಾರ್ಚ್‌ 4ರಂದು ದಾವಣ ಗೆರೆಯಲ್ಲಿ  ಕೇಜ್ರಿವಾಲ್‌ ಕಾರ್ಯಕ್ರಮ ನಿಗದಿ ಯಾಗಿದೆ. ಮಾರ್ಚ್‌-ಎಪ್ರಿಲ್‌ ತಿಂಗಳಲ್ಲಿ ಅರವಿಂದ ಕೇಜ್ರಿವಾಲ್‌ ಅವರ ಬೇರೆ-ಬೇರೆ ಕಡೆ ಏಳೆಂಟು ಚುನಾವಣ ಪ್ರಚಾರ ಸಭೆಗಳು ನಡೆಯಲಿದೆ. ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಹಾಗೂ ಉಳಿದ ನಾಯಕರ ಸಭೆಗಳು ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ, ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಮುಖಂಡ ಮುಖ್ಯಮಂತ್ರಿ  ಚಂದ್ರು ಅವರ  ನೇತೃತ್ವದಲ್ಲಿ  ಹೋಬಳಿ ಮಟ್ಟದ ಸಭೆಗಳನ್ನು ನಡೆಸಲು ಆಪ್‌ ಕಾರ್ಯಕ್ರಮ ರೂಪಿಸಿದೆ. ಬೇರೆ ಪಕ್ಷಗಳಿಂದ ಆಪ್‌ಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳ ವಲಸೆ ಆಗಲಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಅನೇಕರು ಆಪ್‌ ಸೇರಲು ಮುಂದಾಗಿದ್ದಾರೆ. ಆ ಪಕ್ಷಗಳ ಟಿಕೆಟ್‌ ಘೋಷಣೆ ಮುಗಿದ  ಬಳಿಕ ಆಪ್‌ಗೆ ಸೇರ್ಪಡೆ ಮತ್ತು ಅಭ್ಯರ್ಥಿಗಳ ಘೋಷಣೆ  ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ. ಈಗಾಗಲೇ ಅನೇಕ ಕಡೆ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ, ಪ್ರಾಮಾಣಿಕತೆ ಮತ್ತು ಬದ್ಧತೆ ಮಾನದಂಡ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬೇರೆ ಪಕ್ಷಗಳ ಜತೆಗೆ ಹೊಂದಾಣಿಕೆ, ಮೈತ್ರಿ ಪ್ರಸ್ತಾವ‌ ನಮ್ಮ ಮುಂದಿಲ್ಲ. –ಜಗದೀಶ್‌ ವಿ. ಸದಂ, ಎಎಪಿ ರಾಜ್ಯ ಮಾಧ್ಯಮ ಉಸ್ತುವಾರಿ.

ಜೆಡಿಎಸ್‌-ಜೆಡಿಯು ಮೈತ್ರಿ?:

ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಒಂದಾದ ಮೇಲೆ ಎರಡು ಪಕ್ಷಗಳಲ್ಲಿ ಹುರುಪು ಬಂದಿದೆ. ಆದರೆ ರಾಜ್ಯದಲ್ಲಿ ಜೆಡಿಯು ಮಾತ್ರ ನೆಲೆ ಹೊಂದಿದ್ದು, ಹಿಂದಿನ ಚುನಾವಣೆಗಳಲ್ಲೂ ಅದು ಸ್ವತಂತ್ರವಾಗಿ ಸ್ಪರ್ಧಿಸಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ 28 ಕಡೆ ಜೆಡಿಯು ಸ್ಪರ್ಧಿಸಿ ಎಲ್ಲ ಕಡೆ ಠೇವಣಿ ಕಳೆದುಕೊಂಡಿತ್ತು. ಆದರೆ ಮಹಿಮಾ ಪಟೇಲ್‌ ನೇತೃತ್ವ ವಹಿಸಿಕೊಂಡಿರುವುದರಿಂದ ಜೆಡಿಯುಗೆ ಈ ಬಾರಿ ಒಂದಿಷ್ಟು ಶಕ್ತಿ ಬಂದಿದೆ. ಕನಿಷ್ಠ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಯು ಚಿಂತನೆ ನಡೆಸಿದೆ. ಎಲ್ಲ 224 ಕ್ಷೇತ್ರಗಳಿಂದಲೂ ಅರ್ಜಿ ಆಹ್ವಾ ನಿಸಲಾಗಿದ್ದು, 100 ಶಾರ್ಟ್‌ಲಿಸ್ಟ್‌ ಮಾಡಲಾಗಿದ್ದು, ಅದರಲ್ಲಿ 50 ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗುವುದು. ಮತ್ತೂಂದಡೆ  ಜೆಡಿಎಸ್‌  ಜತೆಗೆ  ಮೈತ್ರಿ ಮಾತುಕತೆಯೂ ನಡೆದಿದೆ. ಈ ವಿಚಾರವಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಜೆಡಿಯು ಸಂಸದೀಯ ಮಂಡಳಿ ಮುಖಂಡರ ಜತೆಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಮೈತ್ರಿ ಸಾಧ್ಯವಾಗದಿದ್ದರೆ ಮಹಿಮಾ ಪಟೇಲ್‌ ಅವರನ್ನಾದರೂ ಜೆಡಿಎಸ್‌ಗೆ ಕರೆಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಕೆಆರ್‌ಎಸ್‌, ಆಪ್‌ ಜತೆಗೆ ಚುನಾವಣ ಹೊಂದಾಣಿಕೆಯ ಬಗ್ಗೆಯೂ ಮಾತುಕತೆ ನಡೆದಿತ್ತು. ಆದರೆ ಅದು ನಿರೀಕ್ಷಿತ ಫ‌ಲ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಕೆಲವು ಪ್ರಮುಖರು ಪಕ್ಷ ಸೇರುವ ನಿರೀಕ್ಷೆಯನ್ನು ಜೆಡಿಯು ಇಟ್ಟುಕೊಂಡಿದೆ.

ಜೆಡಿಯು ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕನಿಷ್ಠ 50 ಕಡೆ ಅಭ್ಯರ್ಥಿಗಳನ್ನು ಹಾಕಲಾಗುವುದು. ಮೂರು ಪಕ್ಷಗಳಲ್ಲಿ ಅವಕಾಶ ವಂಚಿತರು ನಮ್ಮ ಪಕ್ಷಕ್ಕೆ ಸೇರುವ ನಿರೀಕ್ಷೆಯಿದ್ದು, ಅದನ್ನು ಆಧರಿಸಿ  ಫೈನಲ್‌ ಮಾಡಲಾಗುವುದು. -ಶಿವಕುಮಾರ್‌, ಜೆಡಿಯು ರಾಜ್ಯ ಉಪಾಧ್ಯಕ್ಷ.

ಪರ್ಯಾಯ’ಕ್ಕಾಗಿ ಪ್ರಗತಿಪರರು! :

ಮುಖ್ಯಧಾರೆಯ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಸಿದ್ಧಾಂತಗಳನ್ನು ಒಪ್ಪಿಕೊಳ್ಳದ ಎಡಪಕ್ಷಗಳು ಸಹಿತ ಕೆಲ ರಾಜಕೀಯ ಪಕ್ಷಗಳು, ಪ್ರಗತಿಪರ ರಾಜಕೀಯ ಸಂಘಟನೆಗಳು ಚುನಾವಣೆಗೆ ಸಜ್ಜುಗೊಂಡಿವೆ. ಪ್ರಮುಖವಾಗಿ ಸಿಪಿಎಂ, ಸಿಪಿಐ, ಫಾರ್ವಡ್‌ ಬ್ಲಾಕ್‌, ಎಸ್‌ಯುಸಿಐ ಸಹಿತ 7 ಎಡಪಂಥೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲಿವೆ. ಆದರೆ ಎಲ್ಲ ಪಕ್ಷಗಳ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಳಿಸಲಿದ್ದಾರೆ. ಅದರಂತೆ ಕನಿಷ್ಠ 10 ಕಡೆ ಎಡಪಕ್ಷಗಳ ಒಮ್ಮತದ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆ ನಡೆದಿದೆ ಎಂದು  ಸಿಪಿಎಂ ಮುಖಂಡ ಬಸವರಾಜು ಹೇಳುತ್ತಾರೆ. ಜೆಡಿಎಸ್‌ ಜತೆಗೆ ಹೊಂದಾಣಿಕೆಯ ಪ್ರಯತ್ನವೂ ಸಿಪಿಎಂ ನಡೆಸಿದೆ ಎನ್ನಲಾಗಿದೆ. ಈ ವಿಚಾರವಾಗಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಪತ್ರ ಬರೆಯಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.  ಇದರ ಜತೆಗೆ ರೈತಸಂಘಟನೆಗಳು “ಸರ್ವೋದಯ ಪಕ್ಷದ’ಹೆಸರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಮೇಲುಕೋಟೆಯಿಂದ ದರ್ಶನ್‌ ಪುಟ್ಟಣ್ಣಯ್ಯ ಸೇರಿ 5 ಕಡೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದ್ದಾರೆ. ರವಿಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದರಲ್ಲಿ ಕನಿಷ್ಠ 80 ಕ್ಷೇತ್ರಗಳಲ್ಲಿ ಟಾರ್ಗೆಟ್‌ ಆಗಿ ಕೆಲಸ ಮಾಡುತ್ತೇವೆ ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾ ಜತೆಗೆ ಕೆಆರ್‌ಎಸ್‌ ಮೈತ್ರಿ ಆಗಿದೆ ಎಂದು ರವಿಕೃಷ್ಣಾ ರೆಡ್ಡಿ ಹೇಳುತ್ತಾರೆ. ಎಸ್‌ಡಿಪಿಐ ಈಗಾಗಲೇ 10 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಕೆಆರ್‌ಪಿಪಿ ಮಿಷನ್‌ ಕಲ್ಯಾಣ ಕರ್ನಾಟಕಕ್ಕೆ ರೆಡ್ಡಿ ರೆಡಿ : 

ಬಿಜೆಪಿಗೆ ಸಡ್ಡು ಹೊಡೆದು, ಸಹೋದರರನ್ನು ಎದುರು ಹಾಕಿಕೊಂಡು  ಗಣಿಧಣಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (ಕೆಆರ್‌ಪಿಪಿ) ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ, ಅದರದ್ದು “ಮಿಷನ್‌ ಕಲ್ಯಾಣ ಕರ್ನಾಟಕ’. ಡಿಸೆಂಬರ್‌ ಅಂತ್ಯದಲ್ಲಿ ಪಕ್ಷ ಘೋಷಿಸಿ ಬಹಳ ವೇಗದಲ್ಲಿ ಜನಾರ್ದನ ರೆಡ್ಡಿ ಮುನ್ನುಗ್ಗುತ್ತಿದ್ದಾರೆ. ಗಂಗಾವತಿ ಕ್ಷೇತ್ರದಿಂದ ಸ್ವತಃ ಜನಾರ್ದನ ರೆಡ್ಡಿ ಕಣಕ್ಕಿಳಿಯಲಿದ್ದು, ಬಳ್ಳಾರಿ ನಗರದಿಂದ ಪತ್ನಿ ಅರುಣಾ ಅವರನ್ನು ಸಹೋದರ ಸೋಮಶೇಖರ್‌ ರೆಡ್ಡಿ ವಿರುದ್ಧ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಇದು ದಾಯಾದಿ ಕಲಹಕ್ಕೂ ಕಾರಣವಾಗಿದೆ. ಮೊದಲ ಹಂತದಲ್ಲಿ 40 ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಇತ್ತೀಚಿಗಷ್ಟೇ ಜನಾರ್ದನ ರೆಡ್ಡಿ ಹೇಳಿಕೊಂಡಿದ್ದಾರೆ.

ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ  ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಅನ್ನುವುದು ರೆಡ್ಡಿಯವರ ಪ್ರತಿಪಾದನೆಯಾಗಿದ್ದರೂ ಕೆಆರ್‌ಪಿಪಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಸಿಮೀತವಾಗಲಿದೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಗಳ ವರ್ಚಸ್ಸು ಮತ್ತು ಗೆಲ್ಲುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಟಿಕೆಟ್‌ ನೀಡಲಾಗುವುದು. ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೆಆರ್‌ಪಿಪಿ ಅಭ್ಯರ್ಥಿಗಳು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳು ಎಲ್ಲೆಲ್ಲಿ ಗೆಲ್ಲಬಹುದು ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡು 40 ಅಭ್ಯರ್ಥಿಗಳನ್ನು ಘೋಷಿಸಲಾಗುವುದು.  ನಮ್ಮ ಉದ್ದೇಶ ಚುನಾವಣೆಯಲ್ಲಿ ಬೇರೆ ಪಕ್ಷಗಳನ್ನು ಸೋಲಿಸುವುದಲ್ಲ, ನಮ್ಮ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸುವುದಾಗಿದೆ. ಈಗಾಗಲೇ ರಾಜ್ಯದ 30ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಸಮೀಕ್ಷೆ ಮಾಡಿಸುತ್ತಿದ್ದೇವೆ. ಸಮೀಕ್ಷೆ ಫ‌ಲಿತಾಂಶ ನೋಡಿಕೊಂಡು ಟಿಕೆಟ್‌ ಘೋಷಣೆ ಮಾಡಲಿ ದ್ದೇವೆ ಎಂದು ಕೆಆರ್‌ಪಿಪಿ ಮೂಲಗಳು ಹೇಳುತ್ತವೆ. ಏನಿದ್ದರೂ, ಎಷ್ಟು ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಸ್ಪರ್ಧಿಸುತ್ತದೆ, ಯಾರೆಲ್ಲ ಅಭ್ಯರ್ಥಿಗಳಾಗ  ಲಿದ್ದಾರೆ, ಕಲ್ಯಾಣ ಕರ್ನಾಟಕ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಇವೆಲ್ಲದರ ಬಗ್ಗೆ ಇನ್ನೂ ಸ್ಪಷ್ಟತೆ ಬರಬೇಕಿದೆ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next