Advertisement

ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರಕ್ಕೆ ಇವು ಬೇಡಿಕೆ

07:05 AM Apr 20, 2018 | Team Udayavani |

ಸುಳ್ಯ ಮೀಸಲು ಕ್ಷೇತ್ರವಾಗಿ ಆರು ದಶಕಗಳು ಸಂದಿವೆ. 1962ರಲ್ಲಿ ಸೃಷ್ಟಿಯಾದ ಸುಳ್ಯ ಇಲ್ಲಿಯವರೆಗೂ ಪ.ಜಾತಿಗೆ ಮೀಸಲಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ, ಅಡಿಕೆ, ತೆಂಗು, ಗೇರು ಇತ್ಯಾದಿ ತೋಟಗಾರಿಕೆ ಕೃಷಿಯೇ ಮುಖ್ಯವಾಗಿರುವ; ಶಿಕ್ಷಣ ಮತ್ತು ಆರೋಗ್ಯ ರಂಗಗಳಲ್ಲೂ ಗುರುತಿಸಿಕೊಂಡಿರುವ ಸುಳ್ಯದಲ್ಲಿ ಹಲವು ಬೇಡಿಕೆಗಳು ಈಡೇರಿಕೆಗಾಗಿ ಕಾಯುತ್ತಿವೆ.

Advertisement

1. 110 ಕೆ.ವಿ. ಸಬ್‌ ಸ್ಟೇಶನ್‌
ಸುಳ್ಯದ ವಿದ್ಯುತ್‌ ಸಮಸ್ಯೆ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿದೆ. ಪ್ರತಿ ಬೇಸಗೆಯಲ್ಲಿ ಜನರು ಹೈರಾಣಾಗಿದ್ದಾರೆ. 110 ಕೆ.ವಿ. ಸಬ್‌ಸ್ಟೇಶನ್‌ ಪ್ರಸ್ತಾವನೆಗೆ 20 ವರ್ಷ ಸಮೀಪಿಸುತ್ತಿದ್ದು, ಈ ಬಾರಿಯಾದರೂ ಅನುಷ್ಠಾನ ಆಗಬೇಕು.

2. ವೆಂಟೆಡ್‌ ಡ್ಯಾಂ
ನಗರದ ಮಧ್ಯ ಭಾಗದಲ್ಲಿ ಪಯಸ್ವಿನಿ ನದಿ ಹರಿಯುತ್ತಿದ್ದರೂ ಬೇಸಗೆ ಕಾಲದಲ್ಲಿ ನೀರಿನ ಬವಣೆ ತಪ್ಪಿಲ್ಲ. ಹಾಗಾಗಿ ಪ್ರಸ್ತಾವನೆ ಹಂತ ದಲ್ಲಿರುವ ವೆಂಟೆಡ್‌ ಡ್ಯಾಂ ನಿರ್ಮಾಣ ಅನುಷ್ಠಾನಗೊಳ್ಳಬೇಕು.

3. ಸಂಚಾರ ಠಾಣೆ
ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುತ್ತಿರುವ ತಾಲೂಕಿನಲ್ಲಿ ವಾಹನ ದಟ್ಟಣೆ ನಿತ್ಯ ಸಮಸ್ಯೆ ಆಗಿದ್ದು, ನಿಯಂತ್ರಣಕ್ಕೆ ಸಂಚಾರ ಠಾಣೆ ಅತ್ಯಗತ್ಯವಾಗಿದೆ. ಇಡೀ ತಾಲೂಕಿನಲ್ಲಿ ಸಂಚಾರ ಪೊಲೀಸ್‌ ಠಾಣೆಯೇ ಇಲ್ಲ.

4. ಆನೆ ದಾಳಿಗೆ ಪರಿಹಾರ
ಅರಣ್ಯ ಭಾಗ ಆವೃತ್ತಗೊಂಡಿರುವ ಸುಳ್ಯ ತಾಲೂಕಿನಲ್ಲಿ ಆನೆ ದಾಳಿಯಿಂದ ಕೃಷಿಕರು ಬಸವಳಿದಿದ್ದಾರೆ. ಆನೆ ಬಾಧಿತ ಪ್ರದೇಶಗಳಲ್ಲಿ ಆಧುನಿಕ ಪರಿಕರ ಬಳಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.

Advertisement

5. ರೈಲು ಮಾರ್ಗ
ಕಾಣಿಯೂರು-ಕಾಂಞಂಗಾಡು ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಅರ್ಧದಲ್ಲೇ ಮೊಟಕಾಗಿದೆ. ಸುಳ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ನೀಡಬೇಕಿದೆ.

6. ಸೇತುವೆ
ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ಸೇತುವೆ ಬೇಡಿಕೆ ಇದ್ದು, ಪ್ರತಿ ಚುನಾವಣೆ ಸಂದರ್ಭದಲ್ಲಿ ನೆನಪಿಸುತ್ತಾ ಇದ್ದಾರೆ. ಕೊಲ್ಲಮೊಗ್ರು, ಕಲ್ಮಕಾರು ಮೊದಲಾದೆಡೆ ಸೇತುವೆ ಇಲ್ಲದೆ ಜನ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದಾರೆ.

7. ಹಳದಿ ರೋಗಕ್ಕೆ ಪರಿಹಾರ
ಅಡಿಕೆ ಬೆಳೆಗಾರರು ಅತ್ಯಧಿಕ ಪ್ರಮಾಣ ದಲ್ಲಿರುವ ಇಲ್ಲಿ 15 ವರ್ಷಗಳಿಂದ ಅಡಿಕೆಗೆ ಹಳದಿ ರೋಗ ಸಮಸ್ಯೆ ಇದೆ. ನಿಯಂತ್ರಣಕ್ಕೆ ಸೂಕ್ತ ಕ್ರಮಗಳಿಲ್ಲ. ರೋಗ ನಿಯಂತ್ರಣಕ್ಕೆ ಔಷಧ, ನಷ್ಟ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್‌ನ ಅಗತ್ಯವಿದೆ.

8. ಕಸ ವಿಲೇವಾರಿಗೆ ವ್ಯವಸ್ಥೆ
ಕಲ್ಚೆರ್ಪೆಯ ಡಂಪಿಂಗ್‌ ಯಾರ್ಡ್‌ ಅವೈ ಜ್ಞಾನಿಕವಾಗಿದ್ದು, ಒಟ್ಟಾರೆಯಾಗಿ ತ್ಯಾಜ್ಯ ಬಿದ್ದಿರುವುದರಿಂದ ರೋಗ ಭೀತಿ ಉಂಟಾಗಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಕಸ ವಿಂಗಡನೆ, ಸಂಸ್ಕರಣೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

9. ತಾಲೂಕು ಕ್ರೀಡಾಂಗಣ
2006-07ನೇ ಸಾಲಿನಲ್ಲಿ ಮಂಜೂರುಗೊಂಡು ಸಮತಟ್ಟು ಹಂತದಲ್ಲೇ ಮೊಟಕಾಗಿರುವ ತಾಲೂಕು ಕ್ರೀಡಾಂಗಣ ಪೂರ್ಣಗೊಂಡು, ಕ್ರೀಡಾಪಟುಗಳ ಉಪಯೋಗಕ್ಕೆ ಲಭ್ಯವಾಗಬೇಕು.

10. ಅಂಬೇಡ್ಕರ್‌ ಭವನ
ಕಳೆದ 50 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಅದು ಪೂರ್ಣಗೊಳ್ಳಬೇಕು.

11. ರಸ್ತೆ ಸಮಸ್ಯೆ
ಗ್ರಾಮಾಂತರ ಭಾಗದಲ್ಲಿ ಅನೇಕ ರಸ್ತೆಗಳು ನಾದುರಸ್ತಿಯಲ್ಲಿದ್ದು ಜನ-ವಾಹನ ಸಂಚಾರ ದುಸ್ತರವಾಗಿದೆ. ಈಗಾಗಲೇ ರಸ್ತೆ ಸಮಸ್ಯೆ ಇರುವ ಕಡೆಗಳಲ್ಲಿ ನೋಟಾ ಮತ ಚಲಾವಣೆ, ಪ್ರತಿಭಟನೆಗಳ ಕೂಗು ಕೇಳಿ ಬಂದಿವೆ.

12. ಸಂಚಾರ
ಸುಳ್ಯ ನಗರದಿಂದ ಗ್ರಾಮಾಂತರ ಪ್ರದೇಶ ಗಳ ಎಲ್ಲ ಜನವಸತಿ ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಅದಕ್ಕೆ ಸ್ಪಂದನೆ ಅತ್ಯಗತ್ಯ ಸಿಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next