Advertisement

ಜೈನಕಾಶಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಹಲವು ಬೇಡಿಕೆ

09:00 AM Apr 25, 2018 | Karthik A |

ದ.ಕ. ಜಿಲ್ಲೆಯಲ್ಲಿಯೇ ಅತಿವೇಗದ ಬೆಳವಣಿಗೆಯನ್ನು ದಾಖಲಿಸುತ್ತಿರುವ, ಭೌಗೋಳಿಕವಾಗಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಅತ್ತ ಪಶ್ಚಿಮ ಘಟ್ಟ – ಕಡಲು ನಡುವೆ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವ ವಿಶಿಷ್ಟ ಪ್ರದೇಶ. ಐತಿಹಾಸಿಕ, ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಯೊಂದಿಗೆ ಕೃಷಿ, ನಿಧಾನವಾಗಿ ಉದ್ಯಮರಂಗದಲ್ಲೂ ಬೆಳವಣಿಗೆ ಕಾಣಿಸುತ್ತ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ವಿಶೇಷವಾಗಿ ಪ್ರವಾಸೋದ್ಯಮದ ಬೆಳವಣಿಗೆಗೂ ಅವಕಾಶವಿದೆ. ಈ ಶಿಕ್ಷಣಕಾಶಿಯಲ್ಲಿ ಬಡವರ ಉನ್ನತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಬೇಕಾಗಿದೆ. ಜನರ ಇತರ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸಬೇಕಾಗಿದೆ.

Advertisement

1. ಒಳಚರಂಡಿ ಯೋಜನೆ
ಅತಿವೇಗದ ಬೆಳವಣಿಗೆ ಕಾಣುತ್ತಿರುವ ಮೂಡಬಿದಿರೆಯಲ್ಲಿ ಒಳಚರಂಡಿ ಯೋಜನೆ ಚುರುಕುಗೊಳಿಸುವುದು ಅಗತ್ಯ. ಮುಂದೆ ಎದುರಾಗಬಹುದಾದ ಆರೋಗ್ಯ ಸಮಸ್ಯೆ ನಿವಾರಣೆಗೆ ಇದು ಅಗತ್ಯ.

2. ಬೈಪಾಸ್‌ ನಿರ್ಮಾಣ
ಬೈಪಾಸ್‌ ಯೋಜನೆಯನ್ನು ಕೂಡಲೇ ಸ್ಪಷ್ಟ ಮಾರ್ಗದೊಂದಿಗೆ ಕೈಗೆತ್ತಿಕೊಳ್ಳುವ ಮೂಲಕ ವಾಹನ ದಟ್ಟಣೆಗೆ ಪರಿಹಾರ ಕೈಗೊಳ್ಳ ಬೇಕು. ಪೇಟೆಯ ನಡುವೆ ಕನಿಷ್ಠ ದ್ವಿಪಥ ಮಾರ್ಗವನ್ನಾದರೂ ನಿರ್ಮಿಸಬೇಕು.

3. ಶಿಕ್ಷಣ
ಮೂಡಬಿದಿರೆ, ಅಳಿಯೂರಿಗೆ ಸರಕಾರಿ ಪದವಿಪೂರ್ವ, ಪದವಿ ಕಾಲೇಜು, ಮಾರ್ಪಾಡಿ ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ. ಆರ್ಥಿಕ ದುರ್ಬಲರಿಗೆ ಸರಕಾರಿ ವಿದ್ಯಾ ಸಂಸ್ಥೆಗಳ ಮೂಲಕ ಹೆಚ್ಚಿನ ಶಿಕ್ಷಣಾವಕಾಶ ಸಾಧ್ಯ.

4. ಗ್ರಂಥಾಲಯ
ಸರಕಾರಿ ಗ್ರಂಥಾಲಯಗಳ ಡಿಜಿಟಲೀಕರಣ ಸಹಿತ ಮೇಲ್ದರ್ಜೆಗೇರಿಸುವುದು. ಅಪೇಕ್ಷಿತರಿಗೆ ಮಾಹಿತಿಗಳ ಮುದ್ರಣ ವ್ಯವಸ್ಥೆ ಕಲ್ಪಿಸುವುದು. ಗ್ರಂಥಾಲಯದತ್ತ ಓದುಗರನ್ನು ಸೆಳೆಯುವ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುವುದು.

Advertisement

5. ವಸತಿ ಸೌಲಭ್ಯ
ವಸತಿ ರಹಿತರ ಸಮರ್ಪಕ ಸಮೀಕ್ಷೆ- ನಿಜವಾದ ಫಲಾನುಭವಿಗಳಿಗೆ ಮನೆ/ಮನೆ ನಿವೇಶನ. ವೈಯಕ್ತಿಕ ಮನೆ ನಿರ್ಮಾಣಕ್ಕಿಂತ ವಸತಿ ಸಂಕೀರ್ಣಗಳನ್ನು ರಚಿಸಿ ಹಂಚುವುದು ಮತ್ತು ಮಾರುವ, ಪರಭಾರೆ ಕ್ರಮವನ್ನು ನಿಷೇಧಿಸುವುದು. 

6. ಆರೋಗ್ಯ
ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು  ಮೇಲ್ದರ್ಜೆಗೇರಿಸುವುದು, 24 ತಾಸೂ ವೈದ್ಯಕೀಯ ಸವಲತ್ತು ಇರುವಂತೆ ನೋಡಿಕೊಳ್ಳುವುದು. ವಿಶೇಷವಾಗಿ ಹೆರಿಗೆ ಪ್ರಕರಣಗಳನ್ನು ಸ್ಥಳೀಯವಾಗಿ ನಿರ್ವಹಿಸುವಂತಾಗಬೇಕು.

7. ಕಂದಾಯ
ಮೂಡಬಿದಿರೆ ತಾಲೂಕು ಕಚೇರಿ ಸಿಬಂದಿಯನ್ನು ನಿಯಮಾನುಸಾರ ನಿಯೋಜಿಸುವ ಮೂಲಕ ಈಗ ನಿಧಾನಗತಿಯಲ್ಲಿರುವ ಕಾರ್ಯವಾಹಿನಿಗೆ ಚುರುಕು ಮುಟ್ಟಿಸುವುದು ಅಗತ್ಯ. ಪಂಚಾಯತ್‌ ಮಟ್ಟದಲ್ಲೇ ಪಹಣಿ ಪತ್ರ ವಿತರಿಸುವುದು.

8. ಕುಡಿಯುವ ನೀರು
ಅಸಮರ್ಪಕವಾಗಿರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಸರಿಪಡಿಸಿ ಸಮರ್ಥವಾಗಿಸುವುದು. ಕಳಪೆ ಕಾಮಗಾರಿಯ ಬಗ್ಗೆ ನಿಗಾವಹಿಸುವುದು ನಿರ್ವ ಹಣೆಗಾಗಿ ಸ್ಥಳೀಯ ಸಮಿತಿಗಳನ್ನು ರೂಪಿಸುವುದು.  

9. ಬಿಪಿಎಲ್‌ ಕಾರ್ಡ್‌
ಬಿಪಿಎಲ್‌ ಕಾರ್ಡುದಾರರ ನೈಜ ಅರ್ಹತೆಯನ್ನು ಎನ್‌ಜಿಒ ಮೂಲಕ ಖಚಿತಪಡಿಸಿ ಕ್ರಮಕೈಗೊಳ್ಳುವುದು. ಬಡವರಿಗೆ ನೀಡುತ್ತಿರುವ ಸವಲತ್ತುಗಳು ಉಳ್ಳವರ ಪಾಲಾಗುವುದಕ್ಕೆ ಕಡಿವಾಣ ಹಾಕುವುದು.

10. ಅಕ್ಷರ ದಾಸೋಹ
ಸರಕಾರಿ/ಅನುದಾನಿತ/ ಅನುದಾನ ರಹಿತ ಶಾಲೆಗಳಿಗೆ ಅಕ್ಷರ ದಾಸೋಹದ ಸೌಲಭ್ಯ (ಅಪೇಕ್ಷೆ ಇಲ್ಲದ ಶಾಲೆಗಳನ್ನು ಹೊರತು ಪಡಿಸಿ). ವರ್ಗಭೇದವಿಲ್ಲದೆ ಆಹಾರ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ.

11. ಪ್ರವಾಸೋದ್ಯಮ
ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ಜಾಗೃತಿ ಮತ್ತು ಇಲಾಖಾ ಪರಿವೀಕ್ಷಣೆ, ಪ್ರೋತ್ಸಾಹ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಮಾರ್ಗದರ್ಶಕ ಹುದ್ದೆ ನೀಡಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ.

12. ಕೃಷಿ 
ಪಟ್ಲ ಗದ್ದೆಗಳ (ಮಳೆಗಾಲದಲ್ಲಿ  ಕನಿಷ್ಠ 2 ಅಡಿ ನೀರು ನಿಲ್ಲುವ ಹೊಲಗಳು) ಕನ್ವರ್ಷನ್‌ ನಿಷೇಧ, ತನ್ಮೂಲಕ ಜಲಮೂಲಗಳ ವೃದ್ಧಿಗೆ ಕ್ರಮ, ಭತ್ತ ಬೆಳೆಯುವವರಿಗೆ ಪ್ರೋತ್ಸಾಹ (ಕೇರಳ ಮಾದರಿ) ನೀಡುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next