ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮದ ಕಂಚಗೋಡು ಎಂಬಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು ಕರಪತ್ರ ಹಂಚಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ. ಬೈಂದೂರು ಕ್ಷೇತ್ರ ಚುನಾವಣಾಧಿಕಾರಿಗೆ ವಾಟ್ಸಪ್ ಮೂಲಕ ದೂರು ಬಂದಿದ್ದು, ಅದರನ್ವಯ ಬೈಂದೂರು ವಿಧಾನ ಸಭಾ ಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಮಧುಸೂದನ್ ಪ್ರಸಾದ್ ಅವರಿಗೆ ಸೂಚನೆ ನೀಡಿದ್ದರು. ಕರಪತ್ರದಲ್ಲಿ ಅನ್ಯ ಪಕ್ಷದ ಬಗ್ಗೆ ಟೀಕೆ ಮತ್ತು ಸ್ವಪಕ್ಷದ ಪರವಾಗಿ ಜನರು ಪ್ರಭಾವಕ್ಕೊಳಗಾಗುವಂಥ ಮಾಹಿತಿ ಮುದ್ರಿಸಿರುವುದು ಕಂಡು ಬಂದಿದೆ. ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕರಪತ್ರ ಪ್ರಕಟಿಸಿದ ಉಡುಪಿ ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಕರಪತ್ರ ಹಂಚಿದ ಮಹಿಳಾ ಮೋರ್ಚಾ ಅಧ್ಯಕ್ಷೆ, ಕರಪತ್ರ ಮುದ್ರಿಸಿದ ಮುದ್ರಣ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಧುಸೂದನ್ ಪ್ರಸಾದ್ ಅವರು ದೂರು ನೀಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕಾಪು ಕ್ಷೇತ್ರ: 2 ಪ್ರಕರಣ ದಾಖಲು ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಎರಡು ಪ್ರಕರಣ ದಾಖಲಾಗಿವೆ. ಬೆಳಪುವಿನಲ್ಲಿ ಕಾಂಗ್ರೆಸ್‌ನವರು ಆಯೋಜಿಸಿದ ಸಭೆಯಲ್ಲಿ ಊಟ ಸರಬರಾಜು ಮಾಡಿದ್ದು ವೀಡಿಯೋ ಕ್ಲಿಪ್ಪಿಂಗ್ಸ್ ನಲ್ಲಿ ಕಂಡುಬಂದಿರುವುದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿಯವರ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಟಪಾಡಿಯಲ್ಲಿ ಏರ್ಪಡಿಸಿದ ಬಿಜೆಪಿ ಮಹಿಳಾ ಸಮಾವೇಶದ ಸಭೆಯಲ್ಲಿ ಊಟ ಸರಬರಾಜು ಮಾಡಿರುವುದಕ್ಕೆ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಹಿರಿಯಡಕ ಸಮೀಪದ ಅಂಜಾರಿನಲ್ಲಿ ಶನಿವಾರ ರಾತ್ರಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಾಟವಾಗುತ್ತಿದ್ದ 93,100 ರೂ. ನಗದನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರೀಡಾ ನೀತಿ ಗಜೆಟ್ ನೋಟಿಫಿಕೇಶನ್ ಆಗದ ಕಾರಣ ಸಚಿವರ ವಿರುದ್ಧ ಕೇಸು
ಉಡುಪಿ: ರಾಜ್ಯದ ಕ್ರೀಡಾ ನೀತಿಯು ಗಜೆಟ್ ನೋಟಿಫಿಕೇಶನ್ ಆಗದೆ ಕ್ರೀಡಾಪಟುವಿಗೆ ಬಹುಮಾನ ಹಾಗೂ ಉದ್ಯೋಗದ ಭರವಸೆ ನೀಡುವಂತಹ ಹೇಳಿಕೆ ನೀಡಿರುವ ಕಾರಣ ಕ್ರೀಡಾ ಸಚಿವರ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
Related Articles
Advertisement
ತಹಶೀಲ್ದಾರ್ ಕಚೇರಿಯಲ್ಲೇ ಸಂಹಿತೆ ಉಲ್ಲಂಘನೆ?ಬೆಳ್ತಂಗಡಿ: ನಗರದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಪ್ರಧಾನಿ ಭಾವಚಿತ್ರ ಇರುವ ಕ್ಯಾಲೆಂಡರೊಂದು ತೂಗುತ್ತಿದ್ದರೂ ತಹಶೀಲ್ದಾರ್ ಸೇರಿದಂತೆ ಯಾರ ಗಮನಕ್ಕೂ ಬಂದಿಲ್ಲ. ಚುನಾವಣಾ ಅಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರ ಗಮನಕ್ಕೆ ಇದು ಬಂದಿಲ್ಲವೇ, ತಹಶೀಲ್ದಾರ್ ಕಚೇರಿ ಪ್ರವೇಶ ದ್ವಾರಕ್ಕೆ ಎದುರಾಗಿ, ತಹಶೀಲ್ದಾರ್ ಕುಳಿತುಕೊಳ್ಳುವ ಜಾಗದ ಬಲಭಾಗದ ಗೋಡೆಯಲ್ಲಿದ್ದರೂ ಗೋಚರಿಸಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿ ವಾರವೇ ಕಳೆದಿದ್ದರೂ ತಾಲೂಕು ಕಚೇರಿಯಲ್ಲಿ ಮಾತ್ರ ಪ್ರಧಾನಿ ಭಾವಚಿತ್ರ ತೆರವಾಗಿಲ್ಲ. ಎ. 1ರಂದು ಬೆಳ್ತಂಗಡಿ ತಹಶೀಲ್ದಾರ್ ಆಗಿ ಆಧಿಕಾರಿ ವಹಿಸಿಕೊಂಡಿರುವ ತಮ್ಮಣ್ಣ ಚಿನ್ನಪ್ಪ ಹಾದಿಮನಿ ಒಂದು ವಾರದಿಂದ ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಭಾವಚಿತ್ರದ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಆಗಿರುವ ವಿಚಾರ ತಿಳಿದಿಲ್ಲವೇ ಎಂಬ ಪ್ರಶ್ನೆ ಕಾಡಿದೆ. ಯಾರ ಫೋಟೊ ಬಳಸಬಹುದು?
ರಾಷ್ಟ್ರನಾಯಕರಾದ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಮೊದಲಾದವರ ಭಾವಚಿತ್ರ ಇರಿಸಬಹುದು. ಉಳಿದಂತೆ ರಾಜಕೀಯ ನಾಯಕರ ಭಾವಚಿತ್ರ ಬಳಸುವಂತಿಲ್ಲ. ಹಿರಿಯ ರಾಜಕೀಯ ನಾಯಕರ ಭಾವಚಿತ್ರಗಳನ್ನೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಇದ್ದರೆ ಪರದೆಯಿಂದ ಮುಚ್ಚಬಹುದು. ಅದರೆ ಇಲ್ಲಿ ಪ್ರಧಾನಿ ಭಾವಚಿತ್ರ ಇರುವ ಕೊಠಡಿ ಹೊಸದಾಗಿರುವುದರಿಂದ ಭಾವಚಿತ್ರ ಮುಚ್ಚಲು ಯತ್ನಿಸಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ. ಡಾ| ಭಟ್ ವಿರುದ್ಧ ಪ್ರಕರಣ
ಉಳ್ಳಾಲ: ಅಮೃತಾಧಾರಾ ಗೋಶಾಲೆಯಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಕೋಮುಪ್ರಚೋದಕ ಭಾಷಣ ಮಾಡಿದ ಆರೋಪದಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಟ್ ಅವರು ಉದ್ರೇಕಕಾರಿ ಭಾಷಣದ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನಿಂದ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಜಿಲ್ಲಾ ಕಾಂಗ್ರೆಸ್ ವತಿಯಿಂದಲೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಈಗ ಜಿಲ್ಲಾ ಚುನಾವಣಾಧಿಕಾರಿ ಸೂಚನೆಯ ಮೇರೆಗೆ ಮಂಗಳೂರು ಕ್ಷೇತ್ರದ ಚುನಾವಣಾಧಿಕಾರಿಗಳು ಡಾ| ಪ್ರಭಾಕರ ಭಟ್ ಮಾಡಿದ ಭಾಷಣದ ಸಿಡಿಯನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.