Advertisement

Karnataka: ರಾಜ್ಯದಲ್ಲಿ ಮತ್ತಷ್ಟು ಭ್ರೂಣಹತ್ಯೆ ಪ್ರಕರಣ ಆತಂಕಕಾರಿ

02:38 AM Jul 25, 2024 | Team Udayavani |

ಕೇಂದ್ರ ಸರಕಾರದ 10ಕ್ಕೂ ಹೆಚ್ಚು ಅಧಿಕಾರಿಗಳ ವಿಶೇಷ ತಂಡ (ಪಿಸಿ ಮತ್ತು ಪಿಎನ್‌ಡಿಟಿ)ವೊಂದು ಬುಧವಾರ ಬಾಗಲಕೋಟೆ ಜಿಲ್ಲೆಗೆ ಆಗಮಿಸಿ, ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ವಿವಿಧಡೆ ಶೋಧ ನಡೆಸಿದೆ. ಈ ವೇಳೆ, ಸರಕಾರಿ ವೈದ್ಯರೊಬ್ಬರು ಭ್ರೂಣಹತ್ಯೆ ಕಾನೂನು ಬಾಹಿರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವು ಆತಂಕ ಸೃಷ್ಟಿಸಿದೆ. ಒಂದು ವೇಳೆ ಈ ಆರೋಪ ನಿಜವಾದರೆ, ಲಿಂಗ ಭ್ರೂಣ ಪತ್ತೆ, ಹತ್ಯೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದ ಸರಕಾರಿ ವೈದ್ಯರೇ ಕಾನೂನು ಮುರಿಯುತ್ತಿರುವುದು “ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ’! ಕೇಂದ್ರ ಸರಕಾರದ “ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ’ (ಪಿಸಿ ಮತ್ತು ಪಿಎನ್‌ಡಿಟಿ) ಅನುಸಾರ ಕೇಂದ್ರದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

Advertisement

ಕೇಂದ್ರ ತಂಡ ನಡೆಸಿದ ದಾಳಿ ವೇಳೆ ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ವೈದ್ಯರಾಗಿರುವ ಡಾ| ಕವಿತಾ ಶಿವನಾಯ್ಕರ ಒಡೆತನದ ರೇಣುಕಾ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಸಾಮಗ್ರಿಗಳು ಪತ್ತೆಯಾಗಿವೆ. ಆಸ್ಪತ್ರೆಯಲ್ಲಿ ಹಲವು ಭ್ರೂಣಲಿಂಗ ಪತ್ತೆ ಮಾಡಿರುವುದು ಖಚಿತಪಟ್ಟಿದ್ದು, ಅವರೂ ಸೇರಿದಂತೆ ಆಸ್ಪತ್ರೆ ಒಡೆತನ ಹೊಂದಿರುವ ಮೂವರ ವಿರುದ್ಧ ಈಗ ಆರೋಗ್ಯ ಇಲಾಖೆ ದೂರು ನೀಡಲು ಸಜ್ಜಾಗಿದೆ.

ಕಳೆದ ವರ್ಷವೂ ಕರ್ನಾಟಕದಲ್ಲಿ ಭ್ರೂಣ ಹತ್ಯೆಗಳ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಮಂಡ್ಯದಲ್ಲಿ ಇಂಥ ಬೃಹತ್‌ ಜಾಲವೊಂದು ಬಯಲಾಗಿತ್ತು. ಆದರೆ, ಈಗ ವರದಿಯಾಗಿರುವ ಬಾಗಲಕೋಟೆ ಜಿಲ್ಲೆಯ ಪ್ರಕರಣವು ಇನ್ನೂ ಗಂಭೀರವಾಗಿದೆ. ಯಾಕೆಂದರೆ, ಸರಕಾರಿ ವೈದ್ಯರೊಬ್ಬರು ಭ್ರೂಣ ಹತ್ಯೆಯಂಥ ಹೀನ ಕೃತ್ಯವನ್ನು ನಡೆಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಭಾರತದಲ್ಲಿ 1990ರ ದಶಕದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಪ್ರವೃತ್ತಿಯು ಹೆಚ್ಚಾಯಿತು.

ಅಲ್ಟ್ರಾ ಸ್ಕ್ಯಾನಿಂಗ್‌ ತಂತ್ರಜ್ಞಾನ ವ್ಯವಸ್ಥೆಯ ದುರ್ಬಳಕೆಯೇ ಇದಕ್ಕೆ ಮೂಲ ಕಾರಣ. ಮೊದಲು ನಗರಗಳಲ್ಲಿ ಶುರುವಾದ ಈ ಪ್ರವೃತ್ತಿ ನಿಧಾನವಾಗಿ ಇಡೀ ದೇಶವನ್ನು ಆವರಿಸಿಕೊಂಡಿತು. ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ, ವರ್ಷಕ್ಕೆ 5 ಲಕ್ಷ ಭ್ರೂಣ ಹತ್ಯೆ ನಡೆಯುತ್ತಿದೆ. ಆದರೆ, ವಾಸ್ತವದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿರುವ ಸಾಧ್ಯತೆಗಳಿವೆ. ಇದರಿಂದಾಗಿ ಲಿಂಗಾನುಪಾತ ಕುಸಿತ ಕಾಣುತ್ತಿದೆ. 2011ರ ಜನಗಣತಿಯ ಪ್ರಕಾರ, 1000 ಗಂಡು ಮಕ್ಕಳಿಗೆ ಕೇವಲ 914 ಹೆಣ್ಣು ಮಕ್ಕಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಈ ಪ್ರಮಾಣ 943 ಇದೆ. ಕೆಲವು ರಾಜ್ಯಗಳಲ್ಲಂತೂ ಹೆಣ್ಣು ಮಕ್ಕಳ ಸಂಖ್ಯೆ 900ಕ್ಕಿಂತಲೂ ಕೆಳಗಿದೆ. ಇದರಿಂದ ಸಾಮಾಜಿಕ ಅಸಮತೋಲನ ಸೃಷ್ಟಿಯಾಗಿದೆ. ಲಿಂಗ ಭ್ರೂಣ ಪತ್ತೆ ಮತ್ತು ಭ್ರೂಣ ಹತ್ಯೆ ತಡೆಗೆ ಕರ್ನಾಟಕದಲ್ಲೂ ಕಠಿನ ಕಾನೂನುಗಳು ಜಾರಿಯಲ್ಲಿವೆ. ಆದರೆ ಕಾನೂನು ಅನುಷ್ಠಾನದ ಕೊರತೆಯಿಂದಾಗಿ ಭ್ರೂಣ ಹತ್ಯೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕಾಯ್ದೆಗೆ ತಿದ್ದುಪಡಿ ತಂದು ಹೆಚ್ಚಿನ ಶಿಕ್ಷೆ, ದಂಡ ವಿಧಿಸುವ ಬಗ್ಗೆ ಸರ್ಕಾರ ಮುಂದಾಗಬೇಕು.

Advertisement

ಭ್ರೂಣ ಹತ್ಯೆಯನ್ನು ಕೇವಲ ಕಾನೂನು ಬಲದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲೂ ಸರಕಾರ ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಿದೆ. ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ, ಹೆಚ್ಚಿನ ತಂದೆ- ತಾಯಿಗಳು ಹೆಣ್ಣು ಎಂದರೆ “ಭಾರ’ ಎಂದೇ ಭಾವಿಸುತ್ತಾರೆ. ಆದರೆ, ಹೆಣ್ಣು ಮಗು ಭಾರವಲ್ಲ, ಕುಟುಂಬದ “ಆಧಾರ’ ಎಂಬ ಮನೋಭಾವನೆಯನ್ನು ಸರಕಾರ ಬೆಳೆಸುವುದು ಈ ಕಾಲದ ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next