Advertisement

Karnataka: ವರ್ಷಕ್ಕೆ ಸರಾಸರಿ 875 ರೈತರ ಆತ್ಮಹತ್ಯೆ

10:56 PM Dec 25, 2023 | Team Udayavani |

ರಾಮನಗರ: ಸಾಲಮನ್ನಾ, ಕೃಷಿಭಾಗ್ಯ, ಕಿಸಾನ್‌ ಸಮ್ಮಾನ್‌ನಂತಹ ಹಲವು ರೈತಪರ ಕಾರ್ಯಕ್ರಮಗಳನ್ನು ಸರಕಾರಗಳು ಜಾರಿಗೆ ತಂದರೂ ರೈತರ ಆತ್ಮಹತ್ಯೆಗೆ ತಡೆ ಬಿದ್ದಿಲ್ಲ. ಸರಕಾರದ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 875 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

Advertisement

ಬರ, ಅತಿವೃಷ್ಟಿ ಅನಾವೃಷ್ಟಿ, ಬೆಲೆ ಕುಸಿತ ಹೀಗೆ ಸಾಲು ಸಾಲು ಸಮಸ್ಯೆ ಗಳಿಂದ ಸಾಲದ ಸುಳಿಗೆ ಸಿಲುಕುತ್ತಿರುವ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ರಾಜ್ಯದಲ್ಲಿ 9,622 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 1,917 ಪ್ರಕರಣಗಳನ್ನು ಉಪವಿಭಾಗಾಧಿಕಾರಿ ಮಟ್ಟದ ಸಮಿತಿಯಲ್ಲಿ ತಿರಸ್ಕರಿಸಿದ್ದು, 7,805 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹವೆಂದು ತೀರ್ಮಾನಿಸಿದೆ.

2015-16ರಿಂದ 2019- 20ರ ವರೆಗೆ ಹೆಚ್ಚು ರೈತ ಆತ್ಮಹತ್ಯೆ ವರದಿಯಾಗಿದ್ದು, ಈ ಅವಧಿ ಯಲ್ಲಿ 4,696 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020- 21ರಿಂದ 2023-24(ನವೆಂಬರ್‌ ಅಂತ್ಯ)ರ ವರೆಗೆ 3,196 ರೈತ ಆತ್ಮಹತ್ಯೆ ವರದಿಯಾಗಿವೆ.

ಭರವಸೆ ಮೂಡಿಸದ ಘೋಷಣೆ
ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ರೈತರಿಗೆ ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತವೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳು ಪ್ರತಿ ಬಜೆಟ್‌ನಲ್ಲಿ ಹತ್ತಾರು ಸಾವಿರ ಕೋಟಿ ರೂ.ಯೋಜನೆಗಳನ್ನು ರೈತರಿಗೆ ನೀಡುತ್ತವೆಯಾದರೂ, ಇವು ರೈತರ ಜೀವನವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದಕ್ಕೆ ಆತ್ಮಹತ್ಯೆಯ ಅಂಕಿಅಂಶಗಳೇ ಸಾಕ್ಷಿ.

ಪದೇಪದೆ ಸಾಲದ ಸುಳಿಗೆ ಸಿಲುಕುತ್ತಿರುವ ರೈತ ಬೇಸಾಯದ ಬಗ್ಗೆ ಹತಾಶನಾಗುತ್ತಿದ್ದಾನೆ. ಇದಕ್ಕೆಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಗಳೇ ಕಾರಣ. ಕೃಷಿ ನೀತಿ ಸರಿ ಇಲ್ಲದಿರುವುದು, ವೈಜ್ಞಾನಿಕ ಬೆಲೆ ಇರಲಿ ಕನಿಷ್ಠ ಬೆಂಬಲ ಬೆಲೆ ಇಲ್ಲದಿರುವುದು ರೈತ ಸಂಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನಾದರೂ ಸರಕಾರಗಳು ಗಂಭೀರವಾಗಿ ರೈತರ ಬಗ್ಗೆ ಚಿಂತನೆ ಮಾಡಬೇಕು.
-ಕೆ.ಮಲ್ಲಯ್ಯ, ಉಪಾಧ್ಯಕ್ಷ, ರಾಜ್ಯ ರೈತಸಂಘ

Advertisement

ರಾಜ್ಯ ಸರಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ರೈತರ ಆತ್ಮಹತ್ಯೆ ತಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ರೈತ ಆತ್ಮಹತ್ಯೆ ಪ್ರಕರಣದಲ್ಲಿ ಬಾಕಿ ಇರುವ ಪರಿಹಾರದ ಹಣವನ್ನು ತತ್‌ಕ್ಷಣ ಬಿಡುಗಡೆ ಮಾಡಲಿದೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ (ಬೆಳಗಾವಿ ಅಧಿವೇಶನದಲ್ಲಿ)

ಹಾಲಿ-ಮಾಜಿ ಸಿಎಂಗಳ ಜಿಲ್ಲೆಯಲ್ಲೇ ಹೆಚ್ಚು
ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲೇ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ವರದಿ ಯಾಗಿವೆ. ನಾಲ್ಕು ವರ್ಷಗಳಲ್ಲಿ (2021-22ನೇ ಸಾಲಿನಿಂದ ಇಲ್ಲಿಯವರೆಗೆ) ಸಿದ್ದರಾಮಯ್ಯ ಅವರ ಮೈಸೂರಿನಲ್ಲಿ 221 ಮಂದಿ ಹಾಗೂ ಬಸವರಾಜ ಬೊಮ್ಮಾಯಿಯವರ ಹಾವೇರಿಯಲ್ಲಿ 235 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಶಿವಮೊಗ್ಗದಲ್ಲಿ 142 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 4 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಬೆಳಗಾವಿ, ಧಾರವಾಡ ಹಾಟ್‌ಸ್ಪಾಟ್‌
ರಾಜ್ಯದ ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯು ರೈತ ಆತ್ಮಹತ್ಯೆಯ ಹಾಟ್‌ಸ್ಪಾಟ್‌ ಆಗಿದೆ. ಕಳೆದ 2 ವರ್ಷಗಳಲ್ಲಿ ಬೆಳಗಾವಿಯಲ್ಲಿ 256 ಮಂದಿ ಧಾರವಾಡ ಜಿಲ್ಲೆಯಲ್ಲಿ 198 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next