ಬೆಂಗಳೂರು: ನಾಲ್ವರು ಐಎಎಸ್ ಅಧಿಕಾರಿಗಳ ವಿರುದ್ಧ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಅಧಿಕಾರ ದುರ್ಬಳಕೆ ಹಾಗೂ ಮಾನಸಿಕ ಕಿರುಕುಳ ಆರೋಪ ಸಂಬಂಧ ನಾಲ್ವರು ಐಎಎಸ್ ಅಧಿಕಾರಿ ಗಳ ವಿರುದ್ಧ ಕೆಎಎಸ್ ಅಧಿಕಾರಿ ಕೆ. ಮಥಾಯಿ ಲೋಕಾಯುಕ್ತಕ್ಕೆ ಬುಧವಾರ ದೂರು ನೀಡಿದ್ದಾರೆ. ಸಕಾಲ ಆಡಳಿತಾಧಿಕಾರಿಯಾಗಿರುವ ಮಥಾಯಿ, ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಟಿ.ಕೆ. ಅನಿಲ್‌ಕುಮಾರ್, ಸಕಾಲ ಮಿಷನ್ ಅಪರ ಕಾರ್ಯದರ್ಶಿ ಡಾ| ಕೆ. ಕಲ್ಪನಾ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸುವಂತೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ.
‘ಈ ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳು ನಾನು ಮಿಷನ್ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಕಳೆದ 8 ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ, ನನ್ನ ಮುಂಭಡ್ತಿಗೂ ತಡೆಯೊಡ್ಡಿ, ವೇತನ ಭಡ್ತಿ ತಡೆ ಹಿಡಿದಿದ್ದಾರೆ. ಅಲ್ಲದೆ ಪದೇ ಪದೇ ನೊಟೀಸ್ ಕಳುಹಿಸಿ ಮಾನಸಿಕ ಕಿರುಕುಳ ಹಾಗೂ ಒತ್ತಡ ಹೇರುತ್ತಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡುತ್ತಿಲ್ಲ’ ಎಂದು ದೂರಿದ್ದಾರೆ.
‘ಈ ಹಿಂದೆ ಬಿಬಿಎಂಪಿಯಲ್ಲಿ ಜಾಹೀರಾತು ವಿಭಾಗದ ಆಯುಕ್ತ ರಾಗಿದ್ದ ಸಂಧರ್ಭ 2,000 ಕೋಟಿ ರೂ.ಗಳ ಹಗರಣದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದ್ದೆ. ಈ ವರದಿಯಲ್ಲಿ ಅಂದಿನ ಬಿಬಿಎಂಪಿ ಆಯುಕ್ತ ಲಕ್ಷ್ಮೀ ನಾರಾಯಣ್ ಹೆಸರಿತ್ತು. ಅಲ್ಲದೆ ಬೇರೆ ಬೇರೆ ಪ್ರಕರಣಗಳಲ್ಲಿ ಐಎಎಸ್ ಅಧಿಕಾರಿಗಳ ಲೋಪವನ್ನು ಬಹಿರಂಗಗೊಳಿಸಿದ್ದೆ. ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಉತ್ತರಾಯಿತ್ವ ಪ್ರಾಧಿಕಾರ ರಚಿಸಬೇಕು ಇತ್ಯಾದಿ ವಿಚಾರಗಳ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದೆ. ಈ ವಿಚಾರಗಳನ್ನು ಮುಂದಿಟ್ಟುಕೊಂಡು ನಾಲ್ವರೂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ‘ನಾನು ಸಲ್ಲಿಸಿರುವ ದೂರಿಗೆ ಸಂಬಂಧಿಸಿ ಎಲ್ಲ ದಾಖಲೆಗಳನ್ನೂ ನೀಡಿದ್ದು, ಈ ಕುರಿತು ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಭರವಸೆ ನೀಡಿದ್ದಾರೆ’ ಎಂದು ಕೆ. ಮಥಾಯಿ ತಿಳಿಸಿದ್ದಾರೆ.