Advertisement
ಈ ಬಾರಿ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳನ್ನು ಯಾದೃಚ್ಛೀಕರಿಸಿ (ರ್‍ಯಾಂಡಮ್) ನಡೆಸುವ ಮತ್ತು ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆ ಹೊರಡಿ ಸಿದ್ದ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಎಸ್‌ಇಎಬಿಯು ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಅದರಂತೆ ಗ್ರಾಮೀಣ ಭಾಗದಲ್ಲಿ ಒಂದೇ ಪಿಯು ಕಾಲೇಜು ಇದ್ದರೆ ಅದರ ವಿದ್ಯಾರ್ಥಿಗಳಿಗೆ ತಮ್ಮದೇ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
Related Articles
ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಸಂಯೋಜನೆಯಾಗಿರುವ ಕಾಲೇಜುಗಳ ವಿದ್ಯಾರ್ಥಿಗಳು ಈಗಾಗಲೇ ತಮ್ಮದಲ್ಲದ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಈ ಹಿಂದಿನಿಂದಲೂ ಉತ್ತರಿಸುತ್ತ ಬಂದಿದ್ದಾರೆ. ಆದ್ದರಿಂದ ಪ್ರಾಯೋಗಿಕ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಸಮೀಪದ ಕಾಲೇಜಿಗೆ ಸಂಯೋಜಿಸಬೇಕು. ಇದರಿಂದ ಹೊಸ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ವಿದ್ಯಾರ್ಥಿಗಳು ಏಕರೂಪದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತೆ ಆಗುತ್ತದೆ ಎಂದು ಸೂಚನೆ ನೀಡಲಾಗಿದೆ.
Advertisement
ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಕಾಲೇಜಿನ ಉಪನ್ಯಾಸಕರು ಆಂತರಿಕ ಪರೀಕ್ಷಕರಾಗಿರುತ್ತಾರೆ. ಆದ್ದರಿಂದ ಹೊಸ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಉಂಟಾಗದಂತೆ ಉಪನ್ಯಾಸಕರು ಗಮನ ಹರಿಸಬೇಕು.
ಪ್ರಾಯೋಗಿಕ ಪರೀಕ್ಷಾ ಕೇಂದ್ರವಾಗಿರುವ ಕಾಲೇಜುಗಳಲ್ಲಿ ಪ್ರಯೋಗಾಲಯಗಳನ್ನು ಸುಸಜ್ಜಿತವಾಗಿಡಬೇಕು. ಈ ಸಂಬಂಧ ಈಗಿನಿಂದಲೇ ಪ್ರಾಂಶುಪಾಲರು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಲಾಗಿದ್ದು, ಪ್ರಯೋಗದ ಉಪಕರಣಗಳು ಮತ್ತು ಮೂಲ ಸೌಕರ್ಯ ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಪ್ರಾಂಶುಪಾಲರ ಹೆಗಲಿಗೆ ಹೊರಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಯು ಉತ್ತರಿಸುವ ಪ್ರತೀ ವಿಷಯಕ್ಕೆ 9.60 ರೂ. ವೆಚ್ಚವನ್ನು ಮಂಡಳಿ ವತಿಯಿಂದ ಭರಿಸಲಾಗುತ್ತದೆ. ಆದ್ದರಿಂದ ಪ್ರಯೋಗಾಲಯಗಳಿಗೆ ಬೇಕಾಗುವ ಪರಿಕರಗಳನ್ನು ಈ ಮೊತ್ತದಿಂದ ಖರೀದಿಸಬಹುದು ಎಂದು ಕೆಎಸ್‌ಇಎಬಿ ಸೂಚನೆ ನೀಡಿದೆ.
ಉಪನ್ಯಾಸಕರ ಕಡ್ಡಾಯ ನೋಂದಣಿಪ್ರತೀ ಉಪನ್ಯಾಸಕರು ಗರಿಷ್ಠ 4 ದಿನ ಮಾತ್ರ ಆಂತರಿಕ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಈಗಾಗಲೇ ಉಪನ್ಯಾಸಕರ ನೋಂದಣಿಗೆ ಪಿಯು ಎಕ್ಸಾಂ ಪೋರ್ಟಲ್‌ನಲ್ಲಿ ಲಾಗಿನ್ ಚಾಲ್ತಿಯಲ್ಲಿದ್ದು, ಉಪನ್ಯಾಸಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾಗದ ಉಪನ್ಯಾಸಕರು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿಲ್ಲ ಎಂದು ಮಂಡಳಿಯ ಅಧ್ಯಕ್ಷರು ತಮ್ಮ ಪರಿಷ್ಕೃತ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.