Advertisement

2ನೇ ಹಂತ;14 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ; ಮತ್ತೆ ಸರ್ಕಾರ ಪತನದ ಗುಮ್ಮ!

09:05 AM Apr 25, 2019 | Nagendra Trasi |

ಬೆಂಗಳೂರು/ಉತ್ತರಕರ್ನಾಟಕ:ರಾಜ್ಯದ 2ನೇ ಹಂತದಲ್ಲಿ ಮಂಗಳವಾರ 14 ಲೋಕಸಭಾ ಕ್ಷೇತ್ರಗಳಲ್ಲಿ ಸಣ್ಣ, ಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಸಂಜೆ 6ಗಂಟೆವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.61.29ರಷ್ಟು ಮತದಾನವಾಗಿದೆ.

Advertisement

ಬೆಳಗ್ಗೆ 7ಗಂಟೆಯಿಂದ 14 ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿತ್ತು. ಯಾದಗಿರಿ ಜಿಲ್ಲೆ ಸೇರಿದಂತೆ ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು. ಇದರಿಂದಾಗಿ ಮತದಾನ ವಿಳಂಬವಾಗಿತ್ತು. ದಾವಣಗೆರೆ, ರಾಯಚೂರು ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.

ಬಿಎಸ್ ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಬಿವೈ ರಾಘವೇಂದ್ರ, ಮಧು ಬಂಗಾರಪ್ಪ, ಉಮೇಶ್ ಜಾಧವ್, ಸಿದ್ದೇಶ್ವರ್, ಪ್ರಹ್ಲಾದ್ ಜೋಶಿ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ, ಕೆಎಸ್ ಈಶ್ವರಪ್ಪ, ಶಿವಕುಮಾರ ಉದಾಸಿ, ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಅರುಣಾ, ಪುತ್ರಿ ಬ್ರಹ್ಮಿಣಿ, ಪುತ್ರ ಕಿರೀಟಿ..ಹೀಗೆ ಅಭ್ಯರ್ಥಿಗಳು, ಗಣ್ಯರು ಮತದಾನ ಮಾಡಿದ್ದಾರೆ.

ಸರ್ಕಾರ ಪತನದ ಬಾಂಬ್:

Advertisement

ಎರಡನೇ ಹಂತದ ಮತದಾನದ ಸಂದರ್ಭದಲ್ಲಿಯೇ ಮತ್ತೆ ಸರ್ಕಾರದ ಪತನದ ಕೂಗು ಕೇಳತೊಡಗಿತ್ತು. ತಾಂತ್ರಿಕವಾಗಿ ನಾನು ಈಗಲೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ಕಾಂಗ್ರೆಸ್ ಗೆ ಯಾವಾಗ ರಾಜೀನಾಮೆ ನೀಡುವೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ, ಲಖನ್ ಜಾರಕಿಹೊಳಿ ಚುನಾವಣೆಗೆ ನಿಂತರೆ ಬೆಂಬಲಿಸುವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಸುದ್ದಿಗಾರರ ಜೊತೆ ಮಾತನಾಡುತ್ತ, ಮೇ 23ರ ನಂತರ ಏನಾಗುತ್ತದೋ ಎಂದು ಹೇಳಲು ಬರುವುದಿಲ್ಲ. ಅತೃಪ್ತರ ಸಂಖ್ಯೆ ಹೆಚ್ಚಾಗಬಹುದು.ಅದಕ್ಕೆಲ್ಲಾ ಮುಹೂರ್ತ ಕೂಡಿ ಬರಬೇಕು ಎಂದು ಹೇಳಿದರು. ಅಷ್ಟೇ ಅಲ್ಲ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡುತ್ತ, ಫಲಿತಾಂಶ ಬಂದ ನಂತರ ಈ ಸರ್ಕಾರ ಕಿತ್ತೊಗೆಯಬೇಕು. ಬಹುತೇಕ ಶಾಸಕರು ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ಆಪರೇಶನ್ ಕಮಲಕ್ಕೆ ಚಾಲನೆ ಸಿಕ್ಕಂತಾಗಿದೆ ಎಂದು ವರದಿಗಳು ವಿಶ್ಲೇಷಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next