Advertisement

ಗುರುದ್ವಾರದಲ್ಲಿ ಭಿಂದ್ರನ್‌ ವಾಲೆ ಫೋಟೋ: ಭೇಟಿ ನೀಡದ ಸಿಎಂ ಖಟ್ಟರ್‌

04:44 PM Sep 29, 2018 | udayavani editorial |

ಕರ್ನಾಲ್‌ : ತಮ್ಮ ವಿಧಾನಸಭಾ ಕ್ಷೇತ್ರದ 13 ತೀರ್ಥಸ್ಥಳಗಳಿಗೆ ಭೇಟಿಕೊಡುವ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಅವರು ಡಚಾರ್‌ನ ಗುರುದ್ವಾರಕ್ಕೆ ನೀಡಲಿದ್ದ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಪಡಿಸಿರುವುದು ಸ್ಥಳೀಯ ಸಿಕ್ಖ ಸಮುದಾಯದವರಲ್ಲಿ  ನಿರಾಶೆ ಉಂಟು ಮಾಡಿದ್ದು  ಇಡಿಯ ಪ್ರಹಸನ ಈಗ ವಿವಾದಕ್ಕೆ ಕಾರಣವಾಗಿದೆ ಮತ್ತು ಪ್ರತಿಭಟನೆಯನ್ನೂ ಹುಟ್ಟು ಹಾಕಿದೆ ಎಂದು ವರದಿಗಳು ತಿಳಿಸಿವೆ. 

Advertisement

ಡಚಾರ್‌ನಲ್ಲಿನ ಗುರುದ್ವಾರದಲ್ಲಿ  ತೂಗು ಹಾಕಲಾಗಿದ್ದ ಖಾಲಿಸ್ಥಾನ ಪ್ರತಿಪಾದಕ, ಉಗ್ರ, ಜರ್ನೈಲ್‌ ಸಿಂಗ್‌  ಭಿಂದ್ರನ್‌ವಾಲೆಯ ಫೋಟೋವನ್ನು ತೆರವು ಗೊಳಿಸಬೇಕೆಂದು ಗುರುದ್ವಾರದ ನಿರ್ವಾಹಕರಿಗೆ ತಿಳಿಸಲಾಗಿತ್ತು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ; ಫೋಟೋ ತೆಗೆದರೆ ಸ್ಥಳೀಯ ಸಿಕ್ಖ ಸಮುದಾಯದವರಲ್ಲಿ ಉದ್ವಿಗ್ನತೆ ತಲೆದೋರುವುದೆಂದು ಅವರು ಕಾರಣ ನೀಡಿದ್ದರು. 

1984ರ ಜೂನ್‌ 1ರಿಂದ 8ರ ತನಕದ ಅವಧಿಯಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ, ಪಂಜಾಬಿನ ವಿಶ್ವವಿಖ್ಯಾತ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆದಿದ್ದ ಆಪರೇಶನ್‌ ಬ್ಲೂ ಸ್ಟಾರ್‌ ನಲ್ಲಿ  ಖಾಲಿಸ್ಥಾನ್‌ ಪ್ರತಿಪಾದಕ ಉಗ್ರ ನಾಯಕ ಭಿಂದ್ರನ್‌ವಾಲೆ ಹತನಾಗಿದ್ದ. 

ಫೋಟೋ ತೆರವುಗೊಳಿಸದ ಕಾರಣಕ್ಕೆ ಸಿಎಂ ಗುರುದ್ವಾರಕ್ಕೆ ನೀಡಲಿದ್ದ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಪಡಿಸಿದರು. ಗುರುದ್ವಾರ ಭೇಟಿಗೆ ಮೊದಲು ಸಮೀಪದಲ್ಲೇ ಇದ್ದ ದೇವಳಕ್ಕೆ ಸಿಎಂ ಭೇಟಿ ನೀಡಿ ಅಲ್ಲಿಂದಲೇ ವಾಪಾಸಾಗಿದ್ದರು. ಇದರಿಂದ ಗುರುದ್ವಾರದ ಸಿಕ್ಖ ಸಮುದಾಯದವರಿಗೆ ನಿರಾಶೆ, ಕೋಪ ಉಂಟು ಮಾಡಿತ್ತು. ಹಾಗಾಗಿ ಅವರು ಪ್ರತಿಭಟನೆ ನಡೆಸಿದರು ಎಂದು ವರದಿಗಳು ತಿಳಿಸಿವೆ.  

ಪ್ರತಿಭಟನಕಾರರು ಅಗ್ನಿ ಶಾಮಕ ವಾಹನವನ್ನು ಧ್ವಂಸಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿದರುವ ಸಿಎಂ ಖಟ್ಟರ್‌ “ಕಾನೂನನ್ನು ಕೈಗೆ ತೆಗೆದುಕೊಂಡವರಿಗೆ ತಕ್ಕ ಶಿಕ್ಷೆಯಾಗಲಿದೆ’ ಎಂದು ಹೇಳಿದರು. 

Advertisement

ಸಿಎಂ ಖಟ್ಟರ್‌ ಮೂರು ದಿನಗಳ ತಮ್ಮ ಭೇಟಿಯಲ್ಲಿ  ಕರ್ನಾಲ್‌ ಕ್ಷೇತ್ರದಲ್ಲಿ 18.39 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next