Advertisement

ಕಾರ್ನಾಡು ಕೈಗಾರಿಕಾ ವಲಯ: ಹತ್ತು ವರ್ಷವಾದರೂ ದುರಸ್ತಿಯಾಗದ ಟ್ಯಾಂಕ್‌

12:12 AM Aug 26, 2022 | Team Udayavani |

ಮಂಗಳೂರು: ಉಡುಪಿ-ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡದ್ದು ಕಾರ್ನಾಡು ಕೈಗಾರಿಕಾ ವಲಯ. ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಕೊಲ್ನಾಡು ಮತ್ತು ಸುತ್ತಲಿನ ಸುಮಾರು 69 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿದೆ.

Advertisement

ಹಲವು ಅಡ್ಡಿ, ಸವಾಲುಗಳ ಮಧ್ಯೆ ಇಲ್ಲಿ ಸುಮಾರು 80 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದು, ಬಹುತೇಕ ಭರ್ತಿಯಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ.

1983-84ರಲ್ಲಿ ಆರಂಭಗೊಂಡ ಈ ವಲಯದ ವ್ಯಾಪ್ತಿ ಸಣ್ಣದಿರಬಹುದು. ಇಲ್ಲಿನ ಉದ್ಯಮಗಳು ವಾರ್ಷಿಕ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿವೆ. ಏರು ತಗ್ಗುಗಳಿಂದ ಕೂಡಿದ ಈ ಜಾಗವನ್ನು ಸಾಧ್ಯವಾದಷ್ಟು ಸಮತಟ್ಟು ಗೊಳಿಸಿ ಉದ್ದಿಮೆಗಳನ್ನು ಸ್ಥಾಪಿಸಲಾಗಿತ್ತು. ಇಲ್ಲೀಗ ಮೂಲ ಸೌಕರ್ಯಗಳ ಕೊರತೆ ಉದ್ಯಮಗಳ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸುತ್ತಿದೆ.

ನೀರಿಗೆ ಪರದಾಟ:

ಇಲ್ಲಿ ನೀರಿನ ಸಮಸ್ಯೆ ದೊಡ್ಡದು. 1984ರಲ್ಲಿ ಅಳವಡಿಸಿದ ಪೈಪ್‌ಲೈನ್‌ ಕೆಸರು ತುಂಬಿ ಸರಾಗವಾಗಿ ನೀರು ಹರಿಯದಂತಾಗಿದೆ. ಕೊಳವೆಯಲ್ಲಿ ಕೆಸರು ಮಿಶ್ರಿತ ನೀರು ಬರುತ್ತದೆ. ಇದರಿಂದಾಗಿ ಕೈಗಾರಿಕೆ ಮತ್ತು ಕಾರ್ಮಿಕರು ಯೋಗ್ಯ ನೀರಿಗೆ ಪರದಾಡುವಂತಾಗಿದೆ. ಜತೆಗೆ ಎತ್ತರದ ಪ್ರದೇಶಗಳಿಗೆ ನೀರು ತಲುಪದಿರುವುದು ಮತ್ತೂಂದು ಸಮಸ್ಯೆ. ಬೇಸಗೆಯಲ್ಲಿ ಟ್ಯಾಂಕರ್‌ನಲ್ಲಿ ನೀರು ತರಿಸಬೇಕಾದ ಸ್ಥಿತಿ ಇದೆ. ಇರುವುದೂ ಒಂದೇ ನೀರಿನ ಟ್ಯಾಂಕ್‌. ಅದೂ ಹಾನಿಯಾಗಿ 10 ವರ್ಷಗಳಾಗಿದ್ದು, ಇನ್ನೂ ದುರಸ್ತಿಯಾಗಿಲ್ಲ. ಈಗಿನ ಟ್ಯಾಂಕ್‌ನ ದುರಸ್ತಿಯೊಂದಿಗೆ ಹೆಚ್ಚುವರಿ ನೀರಿನ ಟ್ಯಾಂಕ್‌ ನಿರ್ಮಾಣ ಆಗಬೇಕಿದೆ. ನೀರಿನ ಕೊಳವೆಯೂ ಬದಲಾಗಬೇಕು. ಅವೆಲ್ಲವೂ ಕಾಲಮಿತಿಯೊಳಗೆ ಸಾಧ್ಯವಾದರೆ ನೀರಿನ ಸಮಸ್ಯೆ ನೀಗಬಹುದು ಎಂಬುದು ಇಲ್ಲಿನ ಉದ್ದಿಮೆದಾರರ ವಿಶ್ವಾಸ.

Advertisement

ರಸ್ತೆಯಲ್ಲೇ ತ್ಯಾಜ್ಯ ನೀರು:

ಈ ಪ್ರದೇಶವು ಎತ್ತರ ತಗ್ಗಿನಿಂದ ಕೂಡಿರುವುದರಿಂದ ಇಲ್ಲಿನ ಕೆಲವು ಕೈಗಾರಿಕೆಗಳ ಪ್ರಾಂಗಣಕ್ಕೆ ಮಳೆ ನೀರು ನುಗ್ಗುತ್ತದೆ. ಚರಂಡಿ ಇಲ್ಲದಿರುವುದರಿಂದ ಸಮಸ್ಯೆ ತಪ್ಪಿದ್ದಲ್ಲ. ಮಳೆ ನೀರು ರಸ್ತೆಯಲ್ಲೇ ಹರಿದು ಎಲ್ಲೆಂದರಲ್ಲಿ ಸಂಗ್ರಹವಾಗುತ್ತದೆ. ಈ ಸಮಸ್ಯೆಗೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ.

ಕಾಂಕ್ರೀಟ್‌ ರಸ್ತೆಗೆ 9 ವರ್ಷ ಹೋರಾಟ:

ಮುಖ್ಯರಸ್ತೆಗೆ ಕಾಂಕ್ರಿಟ್‌ ಆಗಬೇಕು ಎಂದು ಇಲ್ಲಿನ ಉದ್ದಿಮೆದಾರರು ಸುಮಾರು 9 ವರ್ಷಗಳ ಕಾಲ ಹೋರಾಟ ನಡೆಸಿದರು. ಕೊನೆಗೂ ಮುಖ್ಯರಸ್ತೆ ಕಾಂಕ್ರೀಟ್‌ ಆಗಿದೆ. ಆದರೆ ಒಳರಸ್ತೆಗಳಿಗೆ ಇನ್ನೂ ಕಾಂಕ್ರೀಟ್‌ ಭಾಗ್ಯ ದೊರೆತಿಲ್ಲ. ರಸ್ತೆ ಬದಿ ಹುಲ್ಲು, ಗಿಡಗಂಟಿಗಳಿಂದಾಗಿ ವಾಹನ, ಜನರ ಓಡಾಟಕ್ಕೂ ತೊಡಕಾಗಿದೆ. ಇವೆಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುವ ವ್ಯವಸ್ಥೆ ಇಲ್ಲಿ ಇಲ್ಲದಾಗಿದೆ.

ಅಗ್ನಿಶಾಮಕ ಠಾಣೆ ಬೇಕು:

ಅಗ್ನಿಶಾಮಕ ಠಾಣೆಗೆ ಕೈಗಾರಿಕಾ ವಲಯದಲ್ಲಿ 1 ಎಕ್ರೆ ಜಾಗ ಹಸ್ತಾಂತರಿಸಿ 3 ವರ್ಷಗಳು ಕಳೆದಿವೆ. ಆದರೆ ಇನ್ನೂ ಆರಂಭವಾಗಿಲ್ಲ. ಏನಾದರೂ ಅವಘಡ ಸಂಭವಿಸಿದರೆ ದೂರದ ಮೂಡುಬಿದಿರೆ, ಪಣಂಬೂರು, ಕಾಪುವಿನಿಂದ ಅಗ್ನಿಶಾಮಕ ವಾಹನಗಳು ಬರಬೇಕು. ಅಷ್ಟರಲ್ಲಿ ನಷ್ಟ ಸಂಭವಿಸಿರುತ್ತದೆ ಎಂಬುದು ಉದ್ದಿಮೆದಾರರ ಆತಂಕ.

ರೈಲು ನಿಲ್ದಾಣ ಸಂಪರ್ಕ ರಸ್ತೆ ದುಸ್ಥಿತಿ :

ಈ ಕೈಗಾರಿಕಾ ವಲಯದಲ್ಲಿ ಸುಮಾರು 1,000 ಕಾರ್ಮಿಕರಿದ್ದಾರೆ. ಹೊರ ರಾಜ್ಯದವರೂ ಇದ್ದಾರೆ. ಇಲ್ಲಿಂದ ಜನ ಸಂಚಾರ ಮತ್ತು ಸರಕುಗಳ ಸಾಗಾಟಕ್ಕೆ ರೈಲ್ವೇಯನ್ನು ಕೂಡ ಗರಿಷ್ಠವಾಗಿ ಬಳಸಿಕೊಳ್ಳಲು ಅವಕಾಶವಿದೆ. ಆದರೆ ಕೈಗಾರಿಕಾ ವಲಯ-ಮೂಲ್ಕಿ ರೈಲು ನಿಲ್ದಾಣ ನಡುವಿನ ರಸ್ತೆ ಹೊಂಡಗುಂಡಿಯಿಂದ ಕೂಡಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿ ಸಂಚರಿಸುವುದೇ ಅಸಾಧ್ಯವಾಗುತ್ತಿದೆ. ಇದೂ ಕೂಡ ದುರಸ್ತಿಯಾಗಬೇಕಿದೆ.

ವಾರ್ಷಿಕ 15 ಲ.ರೂ. ಆಸ್ತಿ ತೆರಿಗೆ ಪಾವತಿ :

ಕೆಐಎಡಿಬಿಗೆ ಒಂದು ಎಕ್ರೆಗೆ ವಾರ್ಷಿಕ 5,500 ರೂ. ನಿರ್ವಹಣ ವೆಚ್ಚ ಪಾವತಿಸಲಾಗುತ್ತದೆ. ನ.ಪಂ.ಗೆ 3,500  ಚದರ ಅಡಿಗೆ ಸುಮಾರು 8,000 ರೂ. ಆಸ್ತಿ ತೆರಿಗೆ ಪಾವತಿಸಬೇಕು. ಕೆಲವು ಕೈಗಾರಿಕೆಗಳು 1 ಲ.ರೂ. ವರೆಗೂ ಪಾವತಿಸುತ್ತವೆ. ಅದರ  ಶೇ. 1ನ್ನೂ ಮೂಲಸೌಕರ್ಯಕ್ಕೆ  ವಿನಿಯೋಗಿಸುತ್ತಿಲ್ಲ. ವರ್ಷಕ್ಕೆ 15 ಲ.ರೂ. ಗಳಿಗಿಂತಲೂ ಅಧಿಕ ಆಸ್ತಿ ತೆರಿಗೆಯನ್ನು ಇಲ್ಲಿನ ಕೈಗಾರಿಕೆಗಳು ಪಾವತಿಸುತ್ತವೆ. ಪಾವತಿಸದಿದ್ದರೆ ಬಡ್ಡಿ ಸಹಿತ ವಸೂಲಿ ಮಾಡಲಾಗುತ್ತದೆ ಎನ್ನುತ್ತಾರೆ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು.

ಅಕ್ರಮ ಚಟುವಟಿಕೆಯ ತಾಣ :

ಕೈಗಾರಿಕಾ ವಲಯದ ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕೃತ್ಯ ನಡೆಸುವವರು ವಿದ್ಯುತ್‌ ಸಂಪರ್ಕ ಕೂಡ ಕಡಿತಗೊಳಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಇದರ ಬಗ್ಗೆ ಪೊಲೀಸರು ನಿಗಾ ವಹಿಸಬೇಕಾಗಿದೆ.

ವಿದ್ಯುತ್‌ ವ್ಯತ್ಯಯ :

ವಿದ್ಯುತ್‌ ವ್ಯತ್ಯಯ ಇಲ್ಲಿನ ಇನ್ನೊಂದು ಸಮಸ್ಯೆ. ಸ್ವಲ್ಪ ಮಳೆ ಬಂದರೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ವೋಲ್ಟೆàಜ್‌ ಸಮಸ್ಯೆ ಪರಿಹಾರಕ್ಕಾಗಿ 110 ಕೆವಿ ಸಬ್‌ಸ್ಟೇಷನ್‌ ಸ್ಥಾಪನೆಗೆ 9 ವರ್ಷ ಹೋರಾಟ ನಡೆಸಲಾಗಿತ್ತು. ಆದರೀಗ ಹಳೆಯ ತಂತಿಗಳಿಂದಾಗಿ ಸಮಸ್ಯೆಯಾಗಿದೆ. ಇಲ್ಲಿ ಮಳೆ-ಗಾಳಿ ಹೆಚ್ಚು. ಅಲ್ಲದೆ ತಂತಿ ಮತ್ತು ಇತರ ವಿದ್ಯುತ್‌ ಉಪಕರಣಗಳು ಬೇಗನೆ ತುಕ್ಕು ಹಿಡಿಯುತ್ತವೆ. ಹಾಗಾಗಿ ಸ್ಟೈರಲಿಂಗ್‌ ಕೇಬಲ್‌ ಹಾಕಿದರೆ ಸಮಸ್ಯೆ ಪರಿಹಾರವಾಗಬಹುದು. ಎಸ್‌ಇಝಡ್‌ನ‌ಲ್ಲಿ ಅಳವಡಿಸಿರುವಂತೆ ಈ ವಲಯದಲ್ಲಿಯೂ ಸ್ಟೈರಲಿಂಗ್‌ ಕೇಬಲ್‌ ಹಾಕಬೇಕು ಎಂದು ಆಗ್ರಹಿಸುತ್ತಾರೆ ಇಲ್ಲಿನ ಉದ್ದಿಮೆದಾರರು.

ಕೈಗಾರಿಕೆಗಳಿಂದ ವಸೂಲಿ ಮಾಡುವ ತೆರಿಗೆ ಹಣದಲ್ಲಿ ಶೇ. 10ನ್ನು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮವಿದೆ. ಕಾರ್ನಾಡು ಕೈಗಾರಿಕಾ ವಲಯದಿಂದ ವರ್ಷಕ್ಕೆ 500 ರಿಂದ 600 ಕೋ.ರೂ.ಗಳಿಗೂ ಅಧಿಕ ವ್ಯವಹಾರ ನಡೆಯುತ್ತದೆ. ಶೇ. 18ರಂತೆ ಜಿಎಸ್‌ಟಿ ಪಾವತಿಸಿದರೂ 90 ಕೋ.ರೂ. ಆಗುತ್ತದೆ. ಅದರ ಶೇ. 10 ಅಂದರೆ 9 ಕೋ.ರೂ. ಮೂಲ ಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಿದರೆ ಇಲ್ಲಿ ಗರಿಷ್ಠ ಸೌಲಭ್ಯ ಒದಗಿಸಬಹುದು. ಈ ಬಗ್ಗೆ ನಗರ ಪಂಚಾಯತ್‌ ಮತ್ತು ಕೆಐ ಎಡಿಬಿ ಗಮನ ಹರಿಸಬೇಕು.– ಪ್ರಶಾಂತ್‌ ಕಾಂಚನ್‌, ಕಾರ್ಯದರ್ಶಿ, ಕಾರ್ನಾಡ್‌ ಸಣ್ಣ ಕೈಗಾರಿಕೆಗಳ ಸಂಘ

ಕಾರ್ನಾಡು ಕೈಗಾರಿಕಾ ವಲಯ ನೂರಾರು ಮಂದಿಗೆ ಉದ್ಯೋಗ ಒದಗಿಸುತ್ತಿದೆ. ಆರ್ಥಿಕ ಚಟುವಟಿಕೆಗೆ ಕೊಡುಗೆ ನೀಡುತ್ತಿದೆ. ಆದರೆ ದಾರಿದೀಪ, ಚರಂಡಿ, ರಸ್ತೆ, ವಿದ್ಯುತ್‌ ಮೊದಲಾದ ಅಗತ್ಯ ಸೌಕರ್ಯಗಳು ಸಮರ್ಪಕವಾಗಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ನೀಡಿದರೆ ಇಲ್ಲಿನ ಕೈಗಾರಿಕೆಗಳು ಇನ್ನಷ್ಟು ಬೆಳೆಯಲು ಅವಕಾಶವಿದೆ.– ಶೇಖರ್‌ ಆರ್‌. ಸಾಲ್ಯಾನ್‌, ದಿವ್ಯಾ ಕೆಮಿಕಲ್‌ ಮ್ಯಾನುಫ್ಯಾಕ್ಚರರ್‌

ಯೋಜನಾಬದ್ಧವಾಗಿ ಈ ಕೈಗಾರಿಕಾ ವಲಯವನ್ನು ಮಾಡಿಲ್ಲ. ಹಾಗಾಗಿ ಸಮಸ್ಯೆಗಳು ಉಂಟಾಗಿವೆ. ಸರಕಾರ ಇತರ ಕ್ಷೇತ್ರಗಳಂತೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಪ್ರೋತ್ಸಾಹ ದೊರೆಯದಿದ್ದರೆ ಉದ್ದಿಮೆದಾರರು ಸಂಕಷ್ಟಕ್ಕೀಡಾಗಿ ಆರ್ಥಿಕ ವ್ಯವಸ್ಥೆಗೆ ನಷ್ಟವಾಗುತ್ತದೆ.– ಚೇತನ್‌ ಜೆ. ಶೆಟ್ಟಿ  ಮಂಜುನಾಥ್‌ ಫ‌ುಡ್‌ ಆ್ಯಂಡ್‌ ಪ್ಯಾಕೇಜಿಂಗ್‌ 

 

-ಸಂತೋಷ್‌ ಬೆಳ್ಳಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next