Advertisement
ಗಿರೀಶ ಕಾರ್ನಾಡರು ನಿಸ್ಸಂಶಯವಾಗಿ ಕನ್ನಡದ ಶ್ರೇಷ್ಠ ನಾಟಕಕಾರ. ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮನೆಮಾತು ಕೊಂಕಣಿ, ಇಂಗ್ಲಿಷ್ ಭಾಷೆಯ ಮೇಲೆ ಅಖಂಡವಾದ ಪ್ರಭುತ್ವ. ಇಷ್ಟೆಲ್ಲ ಇದ್ದೂ ಅವರು ತಮ್ಮ ಅಭಿವ್ಯಕ್ತಿ ಭಾಷೆಯನ್ನಾಗಿ ಕನ್ನಡವನ್ನು ಆರಿಸಿಕೊಂಡದ್ದು ಅದು ಕನ್ನಡದ ಪುಣ್ಯ. ಆವರೆಗೂ ಸಾಹಿತ್ಯದ ಒಂದು ಪ್ರಕಾರವಾದ ನಾಟಕ ಸಾಹಿತ್ಯವನ್ನೇ, ಅದೊಂದನ್ನೇ ತಮ್ಮ ಮೂಲ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡು ಬರೆದದ್ದು, ಅದಕ್ಕೆ ಜ್ಞಾನಪೀಠ ಪುರಸ್ಕಾರ ಲಭಿಸಿದ್ದು, ಅದು ಕನ್ನಡ ಸಾಹಿತ್ಯದ ಪುಣ್ಯ ಹಾಗೂ ರಂಗಭೂಮಿಯ ಪುಣ್ಯ.
Related Articles
Advertisement
ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಬಂದ “ರಾಕ್ಷಸತಂಗಡಿ’ ಎಂಬ ನಾಟಕದ ಮೂಲಕ ಕಾರ್ನಾಡರು ವಿಜಯನಗರ ಸಾಮ್ರಾಜ್ಯದ ಪಥನದ ಕಾಲವನ್ನು, ಅಲ್ಲಿನ ಒಳರಾಜಕೀಯವನ್ನು ಬರೆಯುವ ಮೂಲಕ “ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಮರಳುವಂತೆ’ ತಮ್ಮ ಸಹಜ ನಾಟಕರಚನಾ ಲಹರಿಗೆ ಮರಳಿದ್ದರು. ಇನ್ನೂ ಅದೆಷ್ಟು ಹೊಳಹುಗಳು ಅವರಲ್ಲಿ ನಾಟಕವಾಗಲು ಸರದಿಯಲ್ಲಿ ಕಾಯುತ್ತ ನಿಂತಿದ್ದವೋ ಗೊತ್ತಿಲ್ಲ. ಕನ್ನಡ ಸಾಹಿತ್ಯದಲ್ಲಿ ಬಹುತೇಕ ಬರಹಗಾರರು ಕಥೆ, ಕಾದಂಬರಿ, ಪ್ರಬಂಧ, ನಾಟಕ, ಕಾವ್ಯ- ಹೀಗೆ ಎಲ್ಲ ಪ್ರಾಕಾರಗಳಲ್ಲೂ ಅಭಿವ್ಯಕ್ತಗೊಳಿಸಲು ಪ್ರಯತ್ನಿಸುತ್ತಾರೆ; ಆದರೆ, ಕಾರ್ನಾಡರು ಮಾತ್ರ ಆ ಯಾವ ಗೋಜಿಗೂ ಹೋಗದೆ ನಿಷ್ಠೆಯಿಂದ ನಾಟಕ ಪ್ರಕಾರವೊಂದರಲ್ಲೇ ತಮ್ಮ ಎಲ್ಲ ಒಳತೋಟಿಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ.
ಒಬ್ಬ ಸೃಜನಶೀಲ ಕಲಾವಿದನೋ, ಬರಹಗಾರನೋ ಸಮಕಾಲೀನ ತಲ್ಲಣಗಳಿಗೆ ರಸ್ತೆಗೆ ಇಳಿದು ಪ್ಲಕಾರ್ಡ್ ಹಿಡಿದು ಹೋರಾಟ ಮಾಡುವ ಮೂಲಕವೇ ತನ್ನಅಸಹಕಾರವನ್ನು ದಾಖಲಿಸಬೇಕು ಎಂದೇನಿಲ್ಲ; ಅವನು ತನ್ನ ಕೃತಿಗಳ ಮೂಲಕ ಹಾಗೂ ತನ್ನ ಬದುಕಿನ ಮೂಲಕ ಅಂಥ ಕೆಲಸವನ್ನು ಯಾವಾಗಲೂ ಮಾಡುತ್ತಲೇ ಇರಬಲ್ಲ ಎಂದು ನಾವು ಕಾರ್ನಾಡರ ಸಾವಿನಲ್ಲೂ ಕಾಣಬಹುದು-ಯಾವ ಮೆರವಣಿಗೆ, ಹಾಹಾಕಾರ, ಜಯಘೋಷ, ಮಂತ್ರಘೋಷ- ಹೀಗೆ ಯಾವ ಆಷಾಡಭೂತಿತನಗಳಿಲ್ಲದೆ ಧೀಮಂತರಾಗಿ ನಿರ್ಗಮಿಸಿದ ಕಾರ್ನಾಡರ ಕುರಿತು ಗೌರವ ಹೆಚ್ಚದೇ ಇರದು. ಅವರಿಗೆ ಒಂದು ಧೀಮಂತ ವಿದಾಯ.
* ಮೌನೇಶ್ ಬಡಿಗೇರ್, ರಂಗಕರ್ಮಿ- ನಿರ್ದೇಶಕ