Advertisement

ಮಲೆನಾಡಲ್ಲಿ ಪ್ರೌಢ ಶಿಕ್ಷಣ ಕಲಿತ ಕಾರ್ನಾಡ

08:12 AM Jun 11, 2019 | Team Udayavani |

ಶಿರಸಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಯವದನದಂಥ ಶ್ರೇಷ್ಠ ನಾಟಕ ಕೃತಿಗಳನ್ನು ಕೊಟ್ಟ ಗಿರೀಶ ಕಾರ್ನಾಡ್‌ ಅವರಿಗೆ ರಂಗಭೂಮಿ, ನಟನೆಯ ಗೀಳು ಹಚ್ಚಿದ್ದು ಶಿರಸಿ. ಇಲ್ಲಿನ ಒಡನಾಟದ ಅನೇಕ ಸಂಗತಿಗಳನ್ನು ಪದೇ ಪದೇ ಮೆಲಕು ಹಾಕುತ್ತಿದ್ದ ಕಾರ್ನಾಡರಿಗೆ ಚಿಕ್ಕಂದಿನಿಂದಲೇ ನಾಟಕ, ಆಂಗ್ಲ ಭಾಷೆಯ ಸಾಹಿತ್ಯದ ಕುರಿತು ಆಸಕ್ತಿ ಇದ್ದರೂ ಅದಕ್ಕೆ ಆಸರೆಯಾಗಿದ್ದು ಶಿರಸಿ ಮಾರಿಕಾಂಬಾ ಪ್ರೌಢಶಾಲೆ!

Advertisement

ನಿಜ, ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದ ಅವರ ಗೆಳೆಯರೀಗ ಅವರ ಅಗಲಿಕೆಗೆ ನೋವು ಅನುಭವಿಸುತ್ತಿದ್ದಾರೆ. ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಅವರ ಜೊತೆಗೆ ನಾಲ್ಕು ವರ್ಷ ಓದಿದ್ದ ಅನೇಕ ಗೆಳೆಯರು ಗಿರೀಶ ಒಡನಾಟದ ನೆನಪನ್ನು ಬಿಚ್ಚಿಟ್ಟಿದ್ದಾರೆ.

ನಾಟಕದ ಗೀಳು ಹಚ್ಚಿದ್ದು ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಪ್ರತಿ ಶನಿವಾರ ಲಲಿತ ಕಲೆಗಳನ್ನು ಮಕ್ಕಳ ಮೂಲಕ ಹೊರ ಹಾಕಲು ‘ಅಸೆಂಬಲಿ’ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಎಲ್ಲ ಮಕ್ಕಳನ್ನೂ ಒಂದೇ ಕಡೆ ಸೇರಿಸಿ ಅವರಿಂದಲೇ ಪದ್ಯ, ಹಾಡು, ನಾಟಕದ ಸೀನ್‌ ಮಾಡಿಸುತ್ತಿದ್ದರು. ಕಾರ್ನಾಡ ಇಲ್ಲಿನ ನಿವೃತ್ತ ಪ್ರಾಧ್ಯಾಪಕ ಎಸ್‌.ಜಿ. ಪ್ರಾತಃಕಾಲರಿಗಿಂತ ಎರಡು ವರ್ಷ ಸಣ್ಣವರು. ಒಂದೇ ಶಾಲೆಯಲ್ಲಿ ಓದುವಾಗ ಹಿರಣ್ಯಕಶ್ಯಪ ನಾಟಕದ ಒಂದು ದೃಶ್ಯ ಮಾಡುವ ಸಂದರ್ಭ ಬಂತು. ಆಗ ಕಾರ್ನಾಡರದ್ದು ಸ್ತ್ರೀ ಪಾತ್ರ ಕಯಾದು. ನನ್ನದು ಹಿರಣ್ಯಕಶ್ಯಪು ಆಗಿತ್ತು. ಪಾತ್ರಕ್ಕೆ ಜೀವ ತುಂಬುವ ಕಲೆ ಆಗಲೇ ಇತ್ತು. ಅವರು ಎತ್ತರಕ್ಕೆ, ಕೆಂಪಗೆ ಸುಂದರವಾಗಿದ್ದರಿಂದಲೂ ಆ ಪಾತ್ರ ಒಪ್ಪುತ್ತಿತ್ತು ಎನ್ನುತ್ತಾರೆ ಪ್ರಾತಃಕಾಲ.

ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವಾಗಲೂ ಒಂದಾಗಿದ್ದ ಇಲ್ಲಿನ ಹಾಲೇರಿಕೊಪ್ಪದ ಎನ್‌.ಡಿ. ಹೆಗಡೆ ಹೇಳುವ ಪ್ರಕಾರ, ಯಾರ ಬಳಿ ಅಂತ ನೆನಪಿಲ್ಲ, ಕಾರ್ನಾಡರು ನೃತ್ಯ ತರಬೇತಿ ಪಡೆದದ್ದು ಕೂಡ ಶಿರಸಿಯಲ್ಲೇ. ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು, ಅನೇಕ ವಿಷಯ ಆಳವಾಗಿ ಅಭ್ಯಾಸಿಸುತ್ತಿದ್ದರು ಎಂದೂ ನೆನಪಿಸಿಕೊಂಡರು. ಪಂಡಿತ ಲೈಬ್ರರಿಯಲ್ಲಿ ಓದು: ಕಾರ್ನಾಡರು ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಗೆ 1947, ಜೂ.9ಕ್ಕೆ ಬಂದಿದ್ದರು. ಇಲ್ಲಿ ಎಸ್ಸೆಸ್ಸಿ ಮುಗಿಸಿ ಲಿವಿಂಗ್‌ ಸರ್ಟಿಫಿಕೇಟ್ ಪಡೆದದ್ದು ಏ.26, 1952. ಇಂದಿಗೂ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಈ ದಾಖಲೆ ಇದೆ. ಆದರೆ, ಒಂದೇ ಒಂದು ಫೋಟೊ ಇಲ್ಲ. ಹಳೆ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಕಾರ್ನಾಡರನ್ನು ಆಹ್ವಾನಿಸಿದ್ದರೂ ಅವರಿಗೆ ಆಗಮಿಸಲು ಆಗಿರಲಿಲ್ಲ. ಚಿಕ್ಕವರಿದ್ದಾಗಲೇ ತರಗತಿಯಲ್ಲಿ ಓದಿನಲ್ಲೂ ಮುಂದಿದ್ದ ಕಾರ್ನಾಡ, ಬಿಡುವಿನ ಸಮಯ ಕಳೆದದ್ದು ಸಮೀಪದ ಪಂಡಿತ್‌ ಲೈಬ್ರರಿಯಲ್ಲಿ. ಅಲ್ಲಿದ್ದ ಎಲ್ಲ ಆಂಗ್ಲ ಭಾಷೆಯ ಪುಸ್ತಕಗಳನ್ನೂ ಓದಿ ಮುಗಿಸಿದ್ದರು ಎನ್ನುತ್ತಾರೆ ಅವರ ಸಹಪಾಠಿ ಅಬ್ದುಲ್ ಜಬ್ಟಾರ್‌.

ನಾನು ಅವನು ಒಂದೇ ತರಗತಿ. ಕೆಲವೊಮ್ಮೆ ಒಟ್ಟಿಗೆ ಕುಳಿತು ಓದಿಕೊಂಡೆವು. ಇಲ್ಲಿಂದ ಹೋದ ಮೇಲೆ ಹಾವೇರಿಯಲ್ಲಿ ಸಿನಿಮಾ ಶೂಟಿಂಗ್‌ಗೆ ಬಂದಾಗ ಶಿರಸಿ ಪಂಚವಟಿಯಲ್ಲಿ ಉಳಿದು ನನಗೆ ಬರಲು ಹೇಳಿದ್ದರು. ನಾನು ಗಿರೀಶಾ ಎಂದಾಗ ಓಡಿ ಬಂದು ಅಪ್ಪಿಕೊಂಡಿದ್ದರು. ಗಿರೀಶನನ್ನು ಮರೆಯಲು ಸಾಧ್ಯವೇ ಇಲ್ಲ. ಎಷ್ಟೋ ಸಲ ಅವನ ಮನೆಗೇ ಹೋಗಿ ಇಂಗ್ಲಿಷ್‌, ಗಣಿತ ಬಿಡಿಸುತ್ತಿದ್ದೆವು ಎಂದೂ ನೆನಪಿಸಿಕೊಳ್ಳುತ್ತಾರೆ ಸಹಪಾಠಿ ವಿನಾಯಕ ಬಾರಕೂರ.

Advertisement

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next