Advertisement

ಭಾವಿಯೋಧರ ಕರ್ಮಭೂಮಿ

12:11 PM Jan 18, 2018 | |

ಬೆಂಗಳೂರು: ಮೊದಲ ನೋಟಕ್ಕೆ ಅಲ್ಲಿ ಅಸಲಿ ಯುದ್ಧವೇ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಯೋಧರ ವೀರಾವೇಷ, ಶ್ರಮ, ಹೋರಾಟದ ವಾಸ್ತವ ಚಿತ್ರಣ ಒಂದು ಕ್ಷಣ ಕಣ್ಣಮುಂದೆ ಬಂದುಹೋಗುತ್ತದೆ. ಆದರದು ಅಸಲಿ ಯುದ್ಧ ಭೂಮಿಯಲ್ಲ. ಬದಲಿಗೆ ಯುದ್ಧ ಭೂಮಿಯಲ್ಲಿ ಹೋರಾಡುವ, ಆಪತ್‌ ಸಂದರ್ಭಗಳಲ್ಲಿ ಜನರನ್ನು ರಕ್ಷಿಸುವ ವೀರ ಯೋಧರನ್ನು ಅಚ್ಚುಕಟ್ಟಾಗಿ ರೂಪಿಸುವ ತರಬೇತಿ ಸ್ಥಳ.

Advertisement

ಪ್ರವಾಹ, ಅಗ್ನಿ ದುರಂತ ಸೇರಿ ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶದಲ್ಲಿ ಭಾರತೀಯ ಸೈನಿಕರು ಕೈಗೊಳ್ಳುವ ರಕ್ಷಣಾ ಕಾರ್ಯ ಹೇಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸಾಮಾನ್ಯ ವ್ಯಕ್ತಿಯೊಬ್ಬ ಸೈನಿಕನಾಗಿ ರೂಪುಗೊಳ್ಳಲು ಪಡೆಯುವ ಕಠಿಣ ತರಬೇತಿಯ ಮಾಹಿತಿ ಬಹುತೇಕರಿಗಿಲ್ಲ. ಆದರೆ ನಗರದ ಹಲಸೂರು ಕೆರೆಯ ಸಮೀಪದ ಮದ್ರಾಸ್‌ ಎಂಜಿನಿಯರ್‌ ಗ್ರೂಪ್‌ನ ತರಬೇತಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದವರಿಗೆ ಆ ಎಲ್ಲ ಮಾಹಿತಿ ದೊರೆತದ್ದು ಸುಳ್ಳಲ್ಲ.
 
ಭಾರತೀಯ ಸೇನೆಯ ಅತ್ಯಂತ ಹಳೆಯ “ರೆಜಿಮೆಂಟ್‌’ ಎಂಬ ಖ್ಯಾತಿಯ “ದಿ ಮದ್ರಾಸ್‌ ಎಂಜಿನಿಯರ್‌ ಗ್ರೂಪ್‌’ನಲ್ಲಿ ಸೈನ್ಯಕ್ಕೆ ಆಯ್ಕೆಯಾದ ವ್ಯಕ್ತಿಗೆ ಎರಡು ವರ್ಷ ದೈಹಿಕ, ಮಾನಸಿಕ ಹಾಗೂ ತಾಂತ್ರಿಕ ತರಬೇತಿಯನ್ನು ಮೂರು ಆಯಾಮಗಳಲ್ಲಿ ನೀಡಿ ಪರಿಪೂರ್ಣ ಸೈನಿಕನನ್ನಾಗಿ ರೂಪಿಸುತ್ತಾರೆ. ಹಲಸೂರು ಕರೆ ಸಮೀಪದ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು ಸಾವಿರ ಅಭ್ಯರ್ಥಿಗಳು ಸೈನಿಕ ತರಬೇತಿ ಪಡೆಯುತ್ತಿದ್ದಾರೆ.

ದೈಹಿಕ ಕಸರತ್ತು: ಸಾಮಾನ್ಯ ವ್ಯಕ್ತಿಯನ್ನು ಸೈನಿಕನನ್ನಾಗಿಸುವ ಮೊದಲು 6 ತಿಂಗಳು ದೈಹಿಕ ಕಸರತ್ತಿನ ಕಠಿಣ ತರಬೇತಿ ನೀಡಲಾಗುತ್ತದೆ. ಫ್ಲಾಟ್‌ಫ‌ೂಟ್‌ ವಾಕ್‌, ಹಗ್ಗ ಹಿಡಿದು ಹತ್ತುವುದು, ಕಾಲಿಗೆ ವ್ಯಾಯಾಮ ನೀಡುವ 5 ಮೀಟರ್‌ ಶುಟ್ಲೆ, ಸ್ಪ್ರೀಟ್‌ ಆ್ಯಕ್ಷನ್‌, ಚೈನ್‌ ಅಪ್‌ ಬಾರ್‌, ರೋಪ್‌ ಮೂಲಕ ಮಾಡುವ ವ್ಯಾಯಾಮ, ಗೋಡೆ ಹತ್ತುವುದು, ಮರಳಿನ ಮೇಲೆ ಓಡುವುದು ಸೇರಿ 18 ರೀತಿಯ ವ್ಯಾಯಾಮವನ್ನು ನಿತ್ಯ ಮಾಡಿಸುವ ಮೂಲಕ ಅಭ್ಯರ್ಥಿಗಳನ್ನು ದೈಹಿಕವಾಗಿ ಸದೃಢ ಗೊಳಿಸಲಾಗುತ್ತದೆ.

ನೀರಿನಲ್ಲಿ ಸಾಹಸ: ಪ್ರವಾಹದ ಸಂದರ್ಭದಲ್ಲಿ ನೀಡುವ ತುರ್ತು ಸೇವೆಯ ತರಬೇತಿಯನ್ನು ಹಲಸೂರು ಕೆರೆಯಲ್ಲಿ ನೀಡಲಾಗುತ್ತದೆ. ಬೃಹಧಾಕಾರದ ಗಾಳಿ ತುಂಬಿದ ಟ್ಯೂಬ್‌ಗಳನ್ನು ಬಳಿಸಿ ತೇಲುವ ಬ್ರಿಡ್ಜ್ ಸಿದ್ಧಪಡಿಸುತ್ತಾರೆ. 250 ಮೀ. ಉದ್ಧವಾದ ತೇಲುವ ಸೇತುವೆಯನ್ನು ಕೇವಲ 6 ಗಂಟೆಯಲ್ಲಿ ಸಿದ್ಧಪಡಿಸುತ್ತಾರೆ. ಎರಡು ಬೋಟುಗಳನ್ನು ಜೋಡಿಸಿ, ಜೀಪ್‌ ಮೊದಲಾದ ವಾಹನವನ್ನು ಕೊಂಡೊಯ್ಯಲು ಬೇಕಾದ ವ್ಯವಸ್ಥೆಯನ್ನು ಐದಾರು ನಿಮಿಷದೊಳಗೆ ಸಜ್ಜುಗೊಳಿಸುತ್ತಾರೆ. ಸೈನ್ಯದ ಲಾರಿ ಸೇರಿದಂತೆ 25ರಿಂದ 50 ಟನ್‌ ತೂಕದ ಸಾಮಗ್ರಿಗಳನ್ನು ಸಾಗಿಸುವ ಫೇರ್ರಿಯನ್ನು ಕ್ಷಣಾರ್ಧದಲ್ಲೇ ಸಜ್ಜುಗೊಳಿಸುವ ತರಬೇತಿಯನ್ನು ಇಲ್ಲಿ ವ್ಯವಸ್ಥಿತವಾಗಿ ನೀಡುತ್ತಾರೆ.

ಶೂಟಿಂಗ್‌, ಇತರೆ ತುರ್ತು ಸೇವೆ: ಶತ್ರುಗಳ ವಿರುದ್ಧ ಹೋರಾಟ ಮಾಡುವಾಗ ಶೂಟಿಂಗ್‌ ಪ್ರಮುಖ ಅಂಶವಾಗುತ್ತದೆ. ಎಷ್ಟು ದೂರದಲ್ಲಿದ್ದು ಶೂಟ್‌ ಮಾಡಬೇಕು, ಗನ್‌ ಹಿಡಿಯುವ ಬಗೆ, ಬುಲೆಟ್‌ ಲೋಡಿಂಗ್‌, ಶೂಟಿಂಗ್‌ನ ಸೂಕ್ಷ್ಮತೆಗಳನ್ನು ಕಲಿಸಿಕೊಡಲಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭವಿಸಿದಾಗ ನಡೆಸುವ ಶೀಘ್ರ ಕಾರ್ಯಚರಣೆಯ ತರಬೇತಿಯನ್ನು ಹಂತಹಂತವಾಗಿ ನೀಡಲಾಗುತ್ತದೆ. ಗುಡ್ಡ ಹತ್ತುವುದು ಮತ್ತು ಇಳಿಯುವುದು, ಹಗ್ಗದ ಮೇಲೆ ಸಾಗುವುದು, ವೇಗವಾಗಿ ಓಡುವುದು, ಜಂಪ್‌ ಮಾಡುವುದು, ಎತ್ತರಕ್ಕೆ ಜಿಗಿಯುವುದು ಸೇರಿ ಕಠಿಣ ತರಬೇತಿ ನೀಡಲಾಗುತ್ತದೆ. ಇದಾದ ನಂತರ ಎಂಜಿನಿಯರಿಂಗ್‌ ಕೌಶಲತೆಗೆ ಪೂರಕವಾಗುವ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಸೈನೆಗೆ ಸುಸಜ್ಜಿತ ಎಂಜಿನಿಯರ್‌ಗಳನ್ನು ಒದಗಿಸುವ ಕೆಲಸ ಇಲ್ಲಿಂದ ಮಾಡಲಾಗುತ್ತಿದೆ. 

Advertisement

ಸಾಮಾನ್ಯ ವ್ಯಕ್ತಿಯನ್ನು ಸೈನಿಕನಾಗಿಸಲು 2 ವರ್ಷ ಕಠಿಣ ತರಬೇತಿ ನೀಡುತ್ತೇವೆ. ಇದರ ಜತೆಗೆ ನಿವೃತ್ತ ಸೈನಿಕರಿಗಾಗಿ ಉದ್ಯೋಗ ಮಾಹಿತಿ ಕೇಂದ್ರ, ವೀರಮರಣ ಹೊಂದಿದ ಸೈನಿಕರ ಕುಟುಂಬಕ್ಕೂ ಬೇಕಾದ ಸಹಾಯ ಮಾಡುತ್ತಿದ್ದೇವೆ. ನಮ್ಮ ಗ್ರೂಪ್‌ಗೆ ಒಂದು ಪದ್ಮಶ್ರೀ, ನಾಲ್ಕು  ಣಾಚಾರ್ಯ, 10 ಅರ್ಜುನ ಪ್ರಶಸ್ತಿಸೇರಿ ಹಲವು ಪ್ರಶಸ್ತಿ ದೊರೆತಿದೆ. 
  ಬ್ರಿಗೇಡಿಯರ್‌ ಆಕ್‌.ಕೆ.ಸಚ್‌ದೇವ, ಮದ್ರಾಸ್‌ ಎಂಜಿನಿಯರ್‌ ಗ್ರೂಪ್‌ ಕಮಾಂಡೆಂಟ್‌

ಕಮಾಂಡೆಂಟ್‌ ಗ್ಯಾಲರಿ ಮದ್ರಾಸ್‌ ಎಂಜಿನಿಯರ್‌ ಗ್ರೂಪ್‌ನ ಆವರಣದಲ್ಲಿ ಸುಂದರವಾದ ಕಮಾಂಡೆಂಟ್‌ ಗ್ಯಾಲರಿ ಇದೆ. ಮದ್ರಾಸ್‌ ರೆಜಿಮೆಂಟ್‌ ಹಾಗೂ ಕಮಾಂಡೆಂಟ್‌ಗಳ ಇತಿಹಾಸ ಮತ್ತು ಸಾಧನೆ, ಯುದ್ಧದ ಮಾಹಿತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೊತ್ತರ ಭಾರತದ ಸೈನ್ಯದಲ್ಲಿ ಬಳಸುತ್ತಿದ್ದ ಟ್ಯಾಂಕರ್‌, ಗನ್‌ ಹಾಗೂ ಇತರೆ ಯುದ್ಧ ಪರಿಕರಗಳ ಮಾಹಿತಿ, ಮದ್ರಾಸ್‌ ರೆಜಿಮೆಂಟ್‌ನ ವಿವಿಧ ಕಡತಗಳು, ಕ್ರೀಡಾ ಪಟುಗಳ ಸಾಧನೆ, ಸೈನಿಕರು ಬಳಸುತ್ತಿದ್ದ ಡ್ರೆಸ್‌ ಹಾಗೂ ಯುದ್ಧದಲ್ಲಿ ಸೈನಿಕರಂತೆ ಸೇವೆ ಸಲ್ಲಿಸಿದ ಸಾಮಾನ್ಯರ ಮಾಹಿತಿಯೂ ಇಲ್ಲಿದೆ. ಇದರ ಹೊರ ಭಾಗದಲ್ಲಿ ಹಿಂದಿನ ಕಾಲದಲ್ಲಿ ಸೈನ್ಯಕ್ಕೆ ಬಳಸುತ್ತಿದ್ದ ಎಂಜಿನ್‌ಗಳ ಡೆಮೊ ವ್ಯವಸ್ಥೆ ಮಾಡಲಾಗಿದೆ. 

ಕ್ರೀಡಾಪಟುಗಳೂ ಸಮರಕ್ಕೆ ಸಿದ್ಧ 
ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೈನಿಕರು ಮಾತ್ರವಲ್ಲ ದೇಶದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಕ್ರೀಡಪಟುಗಳು ಸಿದ್ಧವಾಗುತ್ತಿದ್ದಾರೆ. ಈಜು, ಕಬ್ಬಡಿ, ಹಾಕಿ, ರೋಯಿಂಗ್‌ ಸೇರಿದಂತೆ ವಿವಿಧ ಕ್ರೀಡೆಯ ತರಬೇತಿ ನೀಡಲಾಗುತ್ತದೆ. ಈ ಎಲ್ಲಾ ಕ್ರೀಡೆಯ ಭಾರತೀಯ ತಂಡದಲ್ಲಿ ಇವರ ಪ್ರಾತಿನಿಧ್ಯ ಇದೆ. ಈಗಾಗಲೇ ಒಲಂಪಿಕ್‌ ಸೇರಿ ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹಲವು ಪದಕ ಜಯಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next