Advertisement

ಮರೆಯಾದ ಕರ್ಕಿ ಶೈಲಿ ಕೊಂಡಿ, ಯಕ್ಷರಂಗದ ಸಿಂಹ ಕೃಷ್ಣ ಹಾಸ್ಯಗಾರ

05:14 PM Jun 03, 2018 | |

ಯಕ್ಷಗಾನದ ಬಡಗು ತಿಟ್ಟಿನಲ್ಲಿ ನಡುತಿಟ್ಟು ಮತ್ತು ಬಡಾ ಬಡಗು ಎನ್ನುವ ಎರಡು ವಿಭಿನ್ನ ಶೈಲಿಗಳು ಜನಪ್ರಿಯ. ಬಡಾಬಡಗಿನಲ್ಲಿ ವಿಭಿನ್ನತೆ ಹೊಂದಿರುವ ಕರ್ಕಿ ಶೈಲಿ ತನ್ನದೇ ಆದ ಕೊಡುಗೆಗಳನ್ನು ರಂಗಕ್ಕೆ ನೀಡಿದೆ. ಆ ಪೈಕಿ ಕರ್ಕಿ ಶೈಲಿಯನ್ನು  ಜನಪ್ರಿಯ ಗೊಳಿಸಿದವರಲ್ಲಿ ಪರಮಯ್ಯ ಹಾಸ್ಯಗಾರರದ್ದು ಅಗ್ರ ಪಂಕ್ತಿಯ ಹೆಸರು. 

Advertisement

ಉತ್ತರ ಕನ್ನಡ ಕೆರೆ ಮನೆ ಪರಂಪರೆಯ ದಿಗ್ಗಜರು ಮೇಳೈಸುತ್ತಿದ್ದ ಕಾಲದಲ್ಲಿ ಕರ್ಕಿ ಶೈಲಿ ತನ್ನದೇ ಆದ ಹಲವು ಪರಂಪರೆಗಳನ್ನು ಯಕ್ಷರಂಗಕ್ಕೆ ನೀಡಿದೆ. 

ಇಂದಿನ ಯುವ ಕಲಾವಿದರಲ್ಲಿ ಕರ್ಕಿ ಶೈಲಿಯನ್ನು ಕಾಣುವುದು ಅಸಾಧ್ಯವಾಗಿದೆ. ನವ ನಾವಿನ್ಯತೆಗೆ ಒಗ್ಗಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ವಾಣಿಜ್ಯ ಉದ್ದೇಶದಿಂದ ಅಲ್ಲವಾದರೂ ಕಲೆಯ ಮಹತ್ವ ಎತ್ತಿ ಹಿಡಿಯಲು ಅಗತ್ಯವಾಗಿದೆ.

ಇದೀಗ ಕರ್ಕಿ ಪರಂಪರೆಯ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದ್ದು, 94ರ ಹರೆಯದ ಕೃಷ್ಣ ಹಾಸ್ಯಗಾರ ಅವರು ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.ಮಹಾರಾಷ್ಟ್ರದ ಬಲ್ಲಾರಪುರದಲ್ಲಿರುವ ಪುತ್ರನ ನಿವಾಸದಲ್ಲಿ ಅವರು 7 ದಶಕಗಳ ಸುಧೀರ್ಘ‌ ಕಲಾ ಯಾನವನ್ನು ಮುಗಿಸಿದ್ದಾರೆ.

Advertisement

ಕರ್ಕಿ ಶೈಲಿಯ ಪ್ರಖ್ಯಾತ ಮೇರು ಕಲಾವಿದರಾಗಿದ್ದ ಗುರು ಪರಮಯ್ಯ ಹಾಸ್ಯಗಾರರ  ಪುತ್ರನಾಗಿ ಅವರ ಗರಡಿಯಲ್ಲಿ ಗರಡಿಯಲ್ಲಿ ಕರ್ಕಿ ಶೈಲಿಯನ್ನು ಮೈಗೂಡಿಸಿಕೊಂಡ ಕೃಷ್ಣ ಹಾಸ್ಯಗಾರರು ಬೇರೆ ಯಾವುದೇ ಹೊಸ ಶೈಲಿಗೆ ಮಾರು ಹೋಗದೆ ತನ್ನ ಚೌಕಟ್ಟಿನಲ್ಲೇ ಪರಂಪರೆಯ ವಿಶಿಷ್ಠ ಶೈಲಿಯನ್ನು ಉಳಿಸಿ ಬೆಳೆಸಿದ್ದವರು.

ವೃತ್ತಿಯಿಂದ ಪ್ರೌಢಶಾಲಾ ನಿವೃತ್ತ ಕಲಾಶಿಕ್ಷಕರಾಗಿದ್ದ ಕೃಷ್ಣ ಹಾಸ್ಯಗಾರರು  ವಂಶಪಾರಂಪರ್ಯವಾಗಿ ಬಂದ ಯಕ್ಷಗಾನ ಮತ್ತು ಮಣ್ಣಿನಮೂರ್ತಿ ತಯಾರಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದರು. 

ವಿವಿಧ ಪ್ರಸಂಗಗಳಲ್ಲಿನ ಬಣ್ಣದ ವೇಷಗಳು, ಪ್ರೇತ ನೃತ್ಯ, ವಿಶಿಷ್ಠ ಸಿಂಹ ನೃತ್ಯ, ಶಬರಾರ್ಜುನ ಪ್ರಸಂಗದ ಶಬರನ ಪಾತ್ರ ವಿಶೇಷ ವೇಷಗಾರಿಕೆ ಮತ್ತು ನಾಟ್ಯ  ಕೃಷ್ಣ  ಹಾಸ್ಯಗಾರರ ಹೆಚ್ಚುಗಾರಿಕೆಯಾಗಿತ್ತು.ಸಿಂಹ ವೇಷಧಾರಿಯಾಗಿ ಮುಖವಾಡದಲ್ಲೂ ಅವರ ಕಣ್ಣಿನ ಚಲನೆ ಅದ್ಭುತವಾಗಿರುತ್ತಿತ್ತು.2,500 ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಿಂಹ ನೃತ್ಯ ಪ್ರದರ್ಶಿಸಿ ಅಪಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 

ಹಲವು ವರ್ಷಗಳ ಹಾಸ್ಯಗಾರ ಮನೆತನದ ಯಕ್ಷಗಾನ ಪರಂಪರೆಯನ್ನು ಕೃಷ್ಣ ಹಾಸ್ಯಗಾರರು, ಸಹೋದರ ನಾರಾಯಣ ಹಾಸ್ಯಗಾರರು ಮುಂದುವರಿಸಿಕೊಂಡು ಬಂದಿದ್ದರು. 
ಕೃಷ್ಣ ಹಾಸ್ಯಗಾರರ ಸಿಂಹನೃತ್ಯ, ಪ್ರೇತ ನೃತ್ಯ, ಶಬರ ನೃತ್ಯ, ಒಡ್ಡೋಲಗಗಳ ವಿಡಿಯೋಗಳು ದಾಖಲಾಗಿದ್ದು, ಅಂತರ್ಜಾಲದಲ್ಲೂ ಲಭ್ಯವಿವೆ. ಸಾಂಪ್ರದಾಯಿಕ ಯಕ್ಷಗಾನದ ಅಭಿಮಾನಿಗಳು ಕರ್ಕಿ ಶೈಲಿಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ. 

ಕರ್ಕಿ ಶೈಲಿಯ ಅಧ್ಯಯನ ನಡೆಸಿ ಆ ಬಗೆಗಿನ ಪುಸ್ತಕಗಳು ಹೊರ ಬಂದಿರುವುದು ವಿಶೇಷ . ಕೃಷ್ಣ ಹಾಸ್ಯಗಾರರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದರು. 

ಅವರಿಲ್ಲದ ಈ ಕಾಲದಲ್ಲಿ ಅವರು ಬೆಳಗಿದ್ದ ಕರ್ಕಿ ಶೈಲಿಯನ್ನು ಉಳಿಸಿ ಬೆಳೆಸುವತ್ತ ಯಕ್ಷಾಭಿಮಾನಿಗಳು ಮುತುವರ್ಜಿ ವಹಿಸಬೇಕಾಗಿದೆ.ಅವರ ಸಿಂಹ ಘರ್ಜನೆ ಯಕ್ಷರಂಗದಲ್ಲಿ ಮತ್ತೆ ಕೇಳಿಬರಬೇಕಿದೆ.  

ಕೊನೆ ಮಾತು.ಹಾಸ್ಯಗಾರ ಎನ್ನುವುದು ಯಕ್ಷಗಾನದಲ್ಲಿ ಹಾಸ್ಯಪಾತ್ರ ಮಾಡುವವರಿಗೆ ಕರೆಯುವುದು, ಆದರೆ ಕರ್ಕಿ ಪರಂಪರೆಯಲ್ಲಿ ಹಾಸ್ಯಗಾರ ಎನ್ನುವುದು ಅವರ ಉಪನಾಮ. 

Advertisement

Udayavani is now on Telegram. Click here to join our channel and stay updated with the latest news.

Next