ಕರ್ಕಿ’ ಚಿತ್ರದ ಟೀಸರ್ ಹಾಗೂ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಯಾಗಿದೆ. ಈ ವೇಳೆ “ಕರ್ಕಿ’ ಸಿನೆಮಾದ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಮೊದಲಿಗೆ “ಕರ್ಕಿ’ ಸಿನೆಮಾದ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್ “ಕರ್ಕಿ’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆಯಲು ಅವಕಾಶ ಸಿಕ್ಕಿದೆ. ಪವಿತ್ರನ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಲು “ಕರ್ಕಿ’ ಸಿನೆಮಾದಲ್ಲಿ ಅವಕಾಶ ಸಿಕ್ಕಿದ್ದು, ನನಗೂ ಹೊಸ ಅನುಭವ ನೀಡಿದೆ. ಪ್ರತಿ ಹಾಡಿನ ಒಂದೊಂದು ಪದವನ್ನೂ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ಕರ್ಕಿ’ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನೆಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ “ಕರ್ಕಿ’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಸಿನೆಮಾದ ಬಗ್ಗೆ ಮಾತನಾಡಿದ ಪ್ರಕಾಶ್ ಪಳನಿ, ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ. ಮೊದಲು ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನೆಮಾವನ್ನು ನಿರ್ದೇಶಿಸಿದರು. ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ, ಈಗಾಗಲೇ ವಾಟ್ಸಾಪ್ ಲವ್, ರಾಜರಾಣಿ ಸೇರಿದಂತೆ ಕೆಲ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಜಯಪ್ರಕಾಶ್ (ಜೆ.ಪಿ) ರೆಡ್ಡಿ “ಕರ್ಕಿ’ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಕಾನೂನು ಪದವಿಧರನಾಗಬೇಕು ಎಂಬ ಕನಸು ಇಟ್ಟುಕೊಂಡ ಹಳ್ಳಿ ಹುಡುಗನ ಪಾತ್ರದಲ್ಲಿ ಜೆ. ಪಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ಜಯಪ್ರಕಾಶ್ ರೆಡ್ಡಿ, ಈ ಸಿನೆಮಾದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಈ ಸಿನೆಮಾದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಈ ಸಿನೆಮಾ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಕರ್ಕಿ’ ಸಿನೆಮಾ ಮೂಡಿಬಂದಿದೆ’ ಎಂದರು ಮಲೆಯಾಳಿ ಬೆಡಗಿ ಮೀನಾಕ್ಷಿ ಚಿತ್ರದ ನಾಯಕಿ.
ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು “ಕರ್ಕಿ’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.