Advertisement

ಮಂಗಳೂರಿನಲ್ಲಿ ಗಲಭೆ ಮಾಡಲು ಹುನ್ನಾರ: ಮಾಯಾ ಗ್ಯಾಂಗ್ ಜೊತೆ ಇದೀಗ ‘ಕಾರ್ಖಾನಾ’ಗ್ಯಾಂಗ್ ಬಂಧನ

12:48 PM Jan 29, 2021 | Team Udayavani |

ಮಂಗಳೂರು: ನಗರದ ನ್ಯೂ ಚಿತ್ರ ಜಂಕ್ಷನ್‌ ಬಳಿ ಡಿ. 16ರಂದು ಕರ್ತವ್ಯ ನಿರತ ಬಂದರು ಪೊಲೀಸ್‌ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಮಂಗಳೂರಿನಲ್ಲಿ ದೊಡ್ಡ ಮಟ್ಟದ ಗಲಭೆ ನಡೆಸಲು, ವಿಧ್ವಂಸಕಾರಿ ಕೃತ್ಯ ಮಾಡಲು ಹಲವು ಗ್ಯಾಂಗ್ ಗಳು ಸಿದ್ದತೆ ನಡೆಸಿದ್ದವು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

Advertisement

ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮತ್ತೆ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. ಅರ್ಕುಳದ ಇಬ್ರಾಹಿಂ ಶಾಕಿರ್‌ (19), ಸಜಿಪನಡು ಅಕ್ಬರ್‌ (30) ಮತ್ತು ಕುದ್ರೋಳಿಯ ಮಹಮ್ಮದ್‌ ಹನೀಫ್ ಯಾನೆ ಕರ್ಚಿ ಹನೀಫ್ (32) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಪಚ್ಚನಾಡಿ ಸಂತ್ರಸ್ತರಿಗೆ ಪರಿಹಾರ ನೀಡದ ಪಾಲಿಕೆ : ಹೈಕೋರ್ಟ್‌ ಅಸಮಾಧಾನ

ಗುರುವಾರ ಬಂಧಿಸಿರುವ ಮೂವರು ಕಾರ್ಖಾನಾ ಗ್ಯಾಂಗ್ ಎಂಬ ಗುಂಪು ಕಟ್ಟಿಕೊಂಡಿದ್ದರು. ಈ ಹಿಂದೆ ಬಂಧಿತರಾದವರು ‘ಮಾಯಾ’ ಎಂಬ ಗ್ಯಾಂಗ್ ಕಟ್ಟಿಕೊಂಡಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.

Advertisement

ಗಲಭೆ ಸೃಷ್ಟಿಸಲು ಸಂಚು: ವರ್ಷದ ಹಿಂದೆ ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಗೋಲಿಬಾರ್ ಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಗ್ಯಾಂಗ್ ಗಳು ಸಿದ್ದತೆ ನಡೆಸಿದ್ದವು. ಪೊಲೀಸರ ಮೇಲೆ ದಾಳಿ ನಡೆಸುವ ಮೂಲಕ ಮತ್ತೊಂದು ಗಲಭೆ ನಡೆಸಲು ಇವರು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ಗ್ಯಾಂಗ್ ಗಳು ಈ ಕೃತ್ಯಕ್ಕಾಗಿ ತಯಾರಿ ಮಾಡಿಕೊಂಡಿದ್ದು, ದಾಳಿ ನಡೆಸಲು ಮತ್ತು ನಂತರ ತಪ್ಪಿಸಿಕೊಳ್ಳಲು ಕೆಲವು ಆಯಕಟ್ಟಿನ ಜಾಗಗಳನ್ನು ಗುರುತು ಮಾಡಿಕೊಂಡಿದ್ದರು. ಇವರಿಗಳಿಗೆ ಮತ್ತು ಇವರ ಕುಟುಂಬಗಳಿಗೆ ಹಣಕಾಸಿನ ಸಹಾಯ ಮಾಡಿದವರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೇಸ್ ಸಂಸದ ಶಶಿ ತರೂರ್ ಸೇರಿ ಆರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು..!

ಒಂದು ವೇಳೆ ಬಂಧನವಾದರೆ ಪೊಲೀಸರ ವಿಚಾರಣೆಯನ್ನು ಹೇಗೆ ಎದುರಿಸಬೇಕು. ಜೈಲಿನಲ್ಲಿ ಯಾವ ರೀತಿ ಇರಬೇಕು, ಜೈಲಿನಲ್ಲಿ ಯಾರೊಂದಿಗೆ ಸೇರಬೇಕು ಎನ್ನುವ ಬಗ್ಗೆ ಹೇಳಿಕೊಡಲಾಗಿತ್ತು ಎಂದು ಕಮಿಷನರ್ ಹೇಳಿದರು.

ಇದೊಂದು ಗಂಭೀರ ವಿಚಾರವಾಗಿದ್ದು, ಇವರಿಂದ ಮಹತ್ವದ ಮಾಹಿತಿ ದೊರೆತಿದೆ. ತನಿಖೆ ಇನ್ನಷ್ಟು ತೀವ್ರಗೊಳಿಸಲಾಗುವುದು. ಸದ್ಯ ಸಿಐಡಿ ಅಥವಾ ಉನ್ನತ ಮಟ್ಟದ ತನಿಖೆಗೆ ವಹಿಸುವ ಬಗ್ಗೆ ತೀರ್ಮಾನಿಸಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next