ಕಾರ್ಕಳ: 4 ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಾಗತ ಫಲಕವೊಂದು ಜೋಡುರಸ್ತೆಯ ಮೂಲೆಯಲ್ಲಿ ಕಾಣದಂತೆ ಪಾಳುಬಿದ್ದಿದೆ.
2015ರ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭ ಸರಕಾರದಿಂದ ಲಭಿಸಿದ ವಿಶೇಷ ಅನುದಾನದಲ್ಲಿ ಪುರಸಭೆಯು 8 ಕೋಟಿ ರೂ. ವೆಚ್ಚದಲ್ಲಿ 3 ಗೋಪುರಗಳನ್ನು ನಿರ್ಮಿಸಿತ್ತು. ಕಾರ್ಕಳ ಪೇಟೆಯಿಂದ ಇತರ ಪಟ್ಟಣಗಳಿಗೆ ಇರುವ ದೂರವನ್ನು ಸೂಚಿಸುವ ಸಲುವಾಗಿ ಈ ಫಲಕಗಳ ನಿರ್ಮಾಣ ನಡೆದಿತ್ತು.
ಗೋಮಟೇಶ್ವರ ಬಳಿಯಲ್ಲೊಂದು ಮತ್ತು ಬೈಪಾಸ್ ರಸ್ತೆಯಲ್ಲೊಂದು ಹೀಗೆ ಎರಡು ಫಲಕಗಳು ಸುಸ್ಥಿತಿಯಲ್ಲಿದ್ದರೂ ಜೋಡುರಸ್ತೆ ಗೋಪುರ ಮಾತ್ರ ಉಪಯೋಗವಿಲ್ಲದೇ ಮೂಲೆಯಲ್ಲಿ ಬಿದ್ದಿದೆ.
ಕಾರ್ಕಳ-ಉಡುಪಿ ರಾಷ್ಟ್ರೀಯ ಹೆದ್ದಾರಿ ಯಾಗುವ ಸಂದರ್ಭ ಅಂದರೆ ಒಂದೂವರೆ ವರ್ಷಗಳ ಹಿಂದೆ ತೆಗೆದಿರಿಸಲಾದ ಜೋಡುರಸ್ತೆ ಫಲಕವನ್ನು ರಸ್ತೆ ಕಾಮಗಾರಿ ಪೂರ್ಣವಾದ ಬಳಿಕ ಮರುಸ್ಥಾಪಿಸುವುದು ಪುರಸಭೆಗೆ ಮರೆತೇ ಹೋಗಿದೆ.
ನಾಮ ಫಲಕದ ಕಬ್ಬಣದ ರಾಡ್ ತುಕ್ಕು ಹಿಡಿಯುತ್ತಿದೆ. ಇನ್ನು ಕೆಲ ಸಮಯದ ಬಳಿಕ ಇದನ್ನು ಗುಜರಿಗೆ ರವಾನಿಸುವಂತಾಗಲಿದೆ. ಈ ಮೂಲಕ ಸಾರ್ವಜನಿಕ ಹಣ ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.