Advertisement

ತಾಲೂಕಿಗೆ  105ರ ಸಂಭ್ರಮ; ನೆನಪಿನ ಕಾರ್ಕಳ್ಳೋತ್ಸವ ಮುನ್ನೆಲೆಗೆ

01:31 PM Feb 06, 2022 | Team Udayavani |

ಕಾರ್ಕಳ:  ಕೊರೊನಾ ಲಾಕ್‌ಡೌನ್‌, ವಾರಾಂತ್ಯ ಕಪ್ಯೂì ಬಳಿಕ ಜನಜೀವನ  ಸಹಜ ಸ್ಥಿತಿಗೆ ಬಂದಿದೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಪುನಶ್ಚೇತನಕ್ಕೆ ಪರಿಹಾರ, ಜೀವನೋತ್ಸಾಹ ಮರುಕಳಿಸುವುದು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮರುಜೀವ ನೀಡಿ ಎಲ್ಲ  ಕ್ಷೇತ್ರದ ರಂಗದ  ಚಟುವಟಿಕೆಗೆ ವೇಗ ನೀಡಲು  ಮುಂದೂಡಲ್ಪಟ್ಟ  ಕಾರ್ಕಳ್ಳೋತ್ಸವ   ಕಾರ್ಯಕ್ರಮವನ್ನು ತಾಲೂಕಿನಲ್ಲಿ  ನಡೆಸುವಂತೆ ಸಾರ್ವಜನಿಕ ವಲಯದಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Advertisement

ಕಾರ್ಕಳ ತಾಲೂಕಿಗೆ 105 ವರ್ಷ ತುಂಬಿದ ಸಂದರ್ಭದಲ್ಲಿ  ಕಾರ್ಕಳ್ಳೋತ್ಸವ ಎಂಬ ಸಂಸ್ಕೃತಿ,  ಕಲೆಗಳ  ಅಭೂತಪೂರ್ವ  ಸಮಾಗಮ ಕಾರ್ಯ ಕ್ರಮವನ್ನು 2021ರ ಡಿ. 18ರಿಂದ 26ರ ವರೆಗೆ ತಾಲೂಕಿನಲ್ಲಿ  ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಲಾಕ್‌ಡೌನ್‌, ವಾರಾಂತ್ಯ ಕಪ್ಯೂì ಇವುಗಳಿಂದ ಜನಜೀವನದ  ಕುಸಿದು ವ್ಯಾಪಾರ-ವ್ಯವಹಾರ ನಷ್ಟವಾಗಿ  ಚಟುವಟಿಕೆ  ಪಾತಾಳಕ್ಕೆ  ಕುಸಿದಿತ್ತು. ಕೃಷಿ ಚಟುವಟಿಕೆಗಳ  ಮೇಲೂ ಪರಿಣಾಮ ಬೀರಿತ್ತು. ಜನ ಜೀವನೋತ್ಸಾಹ ಕಳೆದುಕೊಂಡಿದ್ದರು. ಎಲ್ಲ  ವರ್ಗದ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವುದು ಕಾರ್ಕಳ್ಳೋತ್ಸವದ ಮೂಲ ಉದ್ದೇಶವಾಗಿತ್ತು. ಜಿಲ್ಲೆಯ ಸಮಗ್ರ ಸಾಂಸ್ಕೃತಿಯ ಪರಂಪರೆಯನ್ನು ರಾಷ್ಟ್ರ-ನಾಡಿನ ಪ್ರವಾಸಿಗರಿಗೆ- ಜನತೆಗೆ ಪರಿಚಯಿಸಿ, ವ್ಯವಹಾರ ದಿಕ್ಕನ್ನು ಬದಲಾಯಿಸುವುದು, ಕ್ಷೇತ್ರವನ್ನು ಪ್ರವಾಸಿ   ಕ್ಷೇತ್ರವಾಗಿ ಪರಿಚಯಿಸುವುದು, ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡುವುದು ಇವೆಲ್ಲ  ಉದ್ದೇಶ ಇರಿಸಿಕೊಂಡು  105ರ ನೆನಪಿಗಾಗಿ ಕಾರ್ಕಳ ಉತ್ಸವ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವ ಚಿಂತನೆ ಹೊಂದಲಾಗಿತ್ತು.

ಅದಕ್ಕೆ ಬೇಕಾದ ಪೂರ್ವ ತಯಾರಿ, ಸಮಿತಿಗಳ ರಚನೆ, ಪೂರ್ವ ಸಿದ್ಧತೆಗಳು ಭರ್ಜರಿಯಾಗಿ ನಡೆದಿದ್ದವು.  ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಸಲು ಸಿದ್ಧತೆ ನಡೆಸಲಾಗಿತ್ತು.  ಸ್ವರಾಜ್‌ ಮೈದಾನದ  ಸಮತಟ್ಟು, ಕಾರ್ಕಳ ಉತ್ಸವ ಕಚೇರಿ ಉದ್ಘಾಟನೆ, ಸ್ಟಿಕ್ಕರ್‌ ಬಿಡುಗಡೆ  ಇತ್ಯಾದಿ ಸಿದ್ಧತೆಗಳು  ನಡೆದಿದ್ದವು. ಈ ನಡುವೆ ಕೋವಿಡ್‌-19 ರೂಪಾಂತರಿ ಪ್ರಭೇದ (ಓಮಿಕ್ರಾನ್‌) ಮತ್ತೆ ವಕ್ಕರಿಸಿಕೊಂಡಿತ್ತು.  ಸಂಭಾವ್ಯ ಅಲೆಯನ್ನು  ತಡೆಗಟ್ಟಲು ಸರಕಾರ‌ ಅಗತ್ಯ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆಯಲ್ಲಿ   ಕಾರ್ಕಳ ಉತ್ಸವ  ಮುಂದೂಡಲಾಗಿತ್ತು. ಮುಂದೂಡಲ್ಪಟ್ಟ ಕಾರ್ಕಳ ಉತ್ಸವ ಕಾರ್ಯಕ್ರಮ ನಡೆಸಿದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿ ಜನಜೀವನ ಸುಧಾರಣೆ, ಆರ್ಥಿಕ ಚೇತರಿಕೆಗೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ  ವ್ಯಾಪಾರಿಗಳಲ್ಲಿದೆ.

ಸಾಂಸ್ಕೃತಿಕ ಚಟುವಟಿಕೆಗಳು ಕೂಡ  ಹಲವು ಸಮಯದಿಂದ ನಡೆಯದೆ ಇದ್ದು ಜನರು ಕೂಡ ಸಾಂಸ್ಕೃತಿಕ, ಕಲೆ, ಸಾಹಿತ್ಯಿಕ ಮನೋರಂಜನೆಗಳಿಂದ ವಂಚಿತರಾಗಿದ್ದಾರೆ.

ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ :

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇತರೆ ಇಲಾಖೆಗಳ ಸಹಕಾರದಿಂದ ಕಾರ್ಯಕ್ರಮ ನಡೆಸುತ್ತಿದೆ. ಸಾರ್ವಜನಿಕರ ಒತ್ತಾಯದ ಹಿನ್ನೆ‌ಲೆಯಲ್ಲಿ   ಮಾರ್ಚ್‌ ತಿಂಗಳ ದ್ವಿತೀಯ ಅಥವಾ ತೃತೀ ಯ ವಾರದಲ್ಲಿ  ನಡೆಯುವ ಸಾಧ್ಯತೆಯಿದ್ದು, ಕ್ಷೇತ್ರದವರಾದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ವಿ.ಸುನಿಲ್‌ಕುಮಾರ್‌ ಅವರ  ಅಭಿಪ್ರಾಯಕ್ಕೆ  ಕಾಯಲಾಗುತ್ತಿದೆ.

ಉತ್ಸವದ‌  ಮೂಲಕ  ಅವಕಾಶ ದೊರೆತಲ್ಲಿ  ಜೀವನೋತ್ಸಾಹ ಮರಳುತ್ತದೆ.  ಕಾರ್ಕಳ ಉತ್ಸವ ನಡೆಯುವ ಮೂಲಕ ಜಡತ್ವ ಪಡೆದ ಚಟುವಟಿಕೆಗಳು ಮತ್ತೆ ಮರುಜೀವ ಗೊಳ್ಳಬಹುದೆನ್ನುವ‌ ನಿರೀಕ್ಷೆ  ನಾಗರಿಕರದ್ದಾಗಿದೆ.

ತಾ|ನಲ್ಲಿ ಲಸಿಕೆ ವಿತರಣೆ ಕೂಡ ಉತ್ತಮ ಮಟ್ಟದಲ್ಲಿದೆ.  18 ವರ್ಷ ಮೇಲ್ಪಟ್ಟವರಿಗೆ 1, 69, 812  ಲಕ್ಷ  ಮಂದಿಗೆ ಲಸಿಕೆ ವಿತರಿಸಿ ಶೇ.100 ಪ್ರಗತಿ ಸಾಧಿಸಲಾಗಿದೆ. ಎರಡನೆ ಡೋಸ್‌ 1,53,419 ಲಕ್ಷ  ಮಂದಿಗೆ ನೀಡಲಾಗಿದ್ದು , ಶೇ.90.55ರಷ್ಟು ಪ್ರಗತಿಯಾಗಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೊದಲ ಡೋಸ್‌ 12,998 ವಿತರಿಸಲಾಗಿದ್ದು,  ಶೇ.97ರಷ್ಟು ಸಾಧಿಸಲಾಗಿದೆ. ಎರಡನೇ ಡೋಸ್‌  ಈಗಷ್ಟೆ  ಆರಂಭವಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ  ಬೂಸ್ಟರ್‌ ಡೋಸ್‌ ವಿತರಣೆಯಲ್ಲಿ   ಶೇ.60ರಷ್ಟು ಪ್ರಗತಿಯಾಗಿದೆ ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್‌ ಲೈನ್‌ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ಶೇ.83 ರಷ್ಟು  ಸಾಧಿಸಲಾಗಿದೆ.

ಮುಂದೂಡಲ್ಪಟ್ಟ ಕಾರ್ಕಳ್ಳೋತ್ಸವ ನಡೆಸುವ ಬಗ್ಗೆ ಪ್ರಸ್ತಾವಗಳಿವೆ.  ಇನ್ನು ಅಂತಿಮ ತೀರ್ಮಾನವಾಗಿಲ್ಲ.  ಸಚಿವರ ಸೂಚನೆಗೆ ಕಾಯಲಾಗುತ್ತಿದೆ.-ಪೂರ್ಣಿಮಾ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ

ಲಸಿಕೆ ವಿತರಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ.  ಸೋಂಕು ಇಳಿಮುಖವಾಗಿದೆ. ಎರಡನೇ ಡೋಸ್‌ ಅನ್ನು ಮುಂದಿನ ಒಂದು ವಾರದೊಳಗೆ  ಪೂರ್ಣಗೊಳಿಸಲಿದ್ದೇವೆ. -ಡಾ| ಕೃಷ್ಣಾನಂದ ಶೆಟ್ಟಿ,  ತಾಲೂಕು ಆರೋಗ್ಯಾಧಿಕಾರಿ

 

– ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next