Advertisement

ಕಾರ್ಕಳ ಉತ್ಸವ: ಐತಿಹಾಸಿಕ ಮೆರವಣಿಗೆಗೆ ಕ್ಷಣಗಣನೆ

08:53 PM Mar 17, 2022 | Team Udayavani |

ಕಾರ್ಕಳ:  ಕಾರ್ಕಳ ಉತ್ಸವದಲ್ಲಿ ಮಾ. 18ರಂದು ನಡೆಯುವ  ಕಲಾವಿದರ ಸಮಾಗಮದ ವರ್ಣರಂಜಿತ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಕಲಾಸಕ್ತರು ತುದಿಗಾಲಲ್ಲಿ  ನಿಂತಿದ್ದಾರೆ.

Advertisement

ಕ್ಷಣಗಣನೆ ಆರಂಭವಾಗಿದೆ. ಮಾ.18ರಂದು ಸಂಜೆ 3 ಗಂಟೆಗೆ  ಬಂಡಿಮಠದಿಂದ ಸ್ವರಾಜ್‌ ಮೈದಾನದ ವರೆಗೆ ನೂರಾರು ಕಲಾ ಮತ್ತು ಸಾಂಸ್ಕೃತಿಕ ತಂಡಗಳ ಒಳಗೊಂಡ  ಅದ್ದೂರಿ ಉತ್ಸವ ಮೆರವಣಿಗೆ ಸಾಗಲಿದೆ.

ಎಲ್ಲರೂ ಸ್ವಯಂ ಸೇವಕರೇ…

ಉತ್ಸವ ಮೆರವಣಿಗೆಯಲ್ಲಿ  ಎಳ್ಳಷ್ಟೂ ಗೊಂದಲ ಆಗದಂತೆ, ರಾಜ್ಯಕ್ಕೆ ಮಾದರಿ ಯಾಗುವ ರೀತಿಯಲ್ಲಿ ನಡೆಸಲು ಸಚಿವರು ಕರೆ ನೀಡಿದ್ದಾರೆ.  ಊರ ಹಬ್ಬದಲ್ಲಿ  ಸಂಘಟಕರು, ಪ್ರೇಕ್ಷಕರು ಎಲ್ಲರೂ ಸ್ವಯಂ ಸೇವಕರು ಎಂದಿದ್ದಾರೆ.

ಅವರು ಮಾ. 17ರಂದು ಮೆರವಣಿಗೆಗೆ ಸಂಬಂಧಿಸಿ ಸರಣಿ ಸಭೆ ನಡೆಸಿ, ನೂಕುನುಗ್ಗಲು, ಪ್ರೇಕ್ಷಕರು, ಕಲಾವಿದರಿಗೆ ತೊಂದರೆಗಳಾಗದೆ ಗೊಂದಲ ಏರ್ಪಡದ ರೀತಿಯಲ್ಲಿ  ಯಶಸ್ವಿಯಾಗಿಸಲು ಮನವಿ ಮಾಡಿದ್ದಾರೆ. ತಾಳ್ಮೆ, ವಿನಮ್ರತೆ ವರ್ತನೆಯ ಕಿವಿಮಾತು  ಹೇಳಿದರು.

Advertisement

ತವರು ಸೇರಿದ ಕಾರ್ಕಳದವರು:

ಉತ್ಸವ ಮೆರವಣಿಗೆಯಲ್ಲಿ ಕಾರ್ಕಳದವರಾಗಿದ್ದು  ಹೊರ ಭಾಗದಲ್ಲಿ ನೆಲೆಸಿದವರು, ನೆಂಟರಿಸ್ಟರು ದೊಡ್ಡ  ಪ್ರಮಾಣದಲ್ಲಿ ಭಾಗಿಗಳಾಗುತ್ತಿದ್ದಾರೆ. ಸಚಿವರು ಕಾರ್ಕಳದ ಮೂಲ ನಿವಾಸಿಗಳ ಬೃಹತ್‌ ಸಭೆ, ವೀಡಿಯೋ ಕಾನ್ಫರೆನ್ಸ್‌ ನಡೆಸಿದ್ದರು. ಉತ್ಸವಕ್ಕೆ ಬರುವಂತೆ ಮನವಿ ಮಾಡಿ ಕೊಂಡಿದ್ದರು. ಹೊರಭಾಗದಲ್ಲಿ  ಇರುವವರೆಲ್ಲ ಬಹುತೇಕರು ಈಗ ಕಾರ್ಕಳ ತಲುಪಿದ್ದು, ಸುಮಾರು 1,500 ಮಂದಿ ಈಗಾಗಲೇ ಊರು ಸೇರಿದ್ದಾರೆ. ಇನ್ನು ಮಾ.17ರಂದು ರಾತ್ರಿ ಹೊರಟು ಬರುವವರಿದ್ದಾರೆ. ಬೆಂಗಳೂರು, ಮುಂಬಯಿ ಸಹಿತ ರಾಜ್ಯ, ಹೊರರಾಜ್ಯಗಳಿಂದ  ಒಟ್ಟು  3 ಸಾವಿರಕ್ಕೂ  ಅಧಿಕ  ಮಂದಿ ಭಾಗವಹಿಸುವ  ನಿರೀಕ್ಷೆಯಿದೆ.

37 ಕಡೆ ನೀರು, ತಂಪು  ಪಾನೀಯ:

ಬಂಡಿಮಠದಿಂದ-ಅನಂತಶಯನ ದವರೆಗೆ 37 ಕಡೆ ಪಾಯಿಂಟ್‌ಗಳನ್ನು ತೆರೆದು  ಕುಡಿಯುವ ನೀರು, ತಂಪು ಪಾನೀಯ ವ್ಯವಸ್ಥೆ ಮಾಡಲಾಗುತ್ತಿದೆ. ನೀರು ಪಾನಕ, ಶರಬತ್‌, ಮಜ್ಜಿಗೆ ಸಹಿತ ತಂಪು ಪಾನೀಯಗಳು   ಇರಲಿವೆ.  ದಾನಿಗಳು ಕೂಡ  ತಂಪು ಪಾನೀಯ ವ್ಯವಸ್ಥೆ ಮಾಡಲಿದ್ದಾರೆ.

ಹೊಸಬಟ್ಟೆ, ಕಲರ್‌ ಪುಲ್‌ ಡ್ರೆಸ್‌ :

ಮೆರವಣಿಗೆ ಉತ್ಸವಕ್ಕೆ ಬರಲು ಮದುವೆ ಮನೆಗೆ ಬರುವಂತೆ ಶೃಂಗಾರಗೊಂಡು ಬರಲು ಹೊಸ ಬಟ್ಟೆ ಖರೀದಿಸಿ ಜನ ಈಗಾಗಲೇ ಸಿದ್ಧರಾಗಿದ್ದಾರೆ. ಮೆಹಂದಿಯನ್ನೂ  ಹಚ್ಚಿಕೊಂಡಿದ್ದಾಗಿದೆ. ಬಣ್ಣಬಣ್ಣದ ಕಲರ್‌ಪುಲ್‌  ಡ್ರೆಸ್‌ನೊಂದಿಗೆ  ಮಕ್ಕಳು, ಮಹಿಳೆಯರು, ವಯೋವೃದ್ಧರು  ಕುಟುಂಬ ಸಮೇತ ಭಾಗವಹಿಸಲಿದ್ದು  ನಗರ ಮದುವೆ ಮನೆಯಂತೆ ಶೋಭಿಸಲಿದೆ.

ಇತಿಹಾಸ ಸೃಷ್ಟಿ :

ಉತ್ಸವ ಮೆರವಣಿಗೆ  ಇತಿಹಾಸ ಸೃಷ್ಟಿಸುವ ರೀತಿಯಲ್ಲಿ ನಡೆಯಲಿದೆ. ಉತ್ಸವ ಮೆರವಣಿಗೆ ನಡೆಯುವ ಮಾ. 18ರಂದು ಕಾರ್ಕಳ ತಾ|ನ ಎಲ್ಲ ಶಿಕ್ಷಣ ಸಂಸ್ಥೆ, ಫ್ಯಾಕ್ಟರಿ, ಕಚೇರಿಗಳು  ಸ್ವಯಂ ರಜೆ ಘೋಷಿಸಿಕೊಳ್ಳಲಿವೆ. ಅಂಗಡಿ ಮುಂಗಟ್ಟುಗಳು ಬಂದ್‌ ಆಗಿ ಎಲ್ಲರೂ  ಈ  ಅಭೂತಪೂರ್ವ ಮೆರವಣಿಗೆಯಲ್ಲಿ  ಪಾಲ್ಗೊಳ್ಳುವರು. ಮೂಡಬಿದಿರೆ, ಕನ್ಯಾಡಿ ಸ್ವಾಮೀಜಿಗಳು  ಕಾರ್ಕಳ್ಳೋತ್ಸವ ಕಾರ್ಯಾಲಯಕ್ಕೆ ಭೇಟಿ ನೀಡಿದರು.

ಜನಪ್ರವಾಹ ನಿರೀಕ್ಷೆ:

ಕಾರ್ಕಳದ ಇತಿಹಾಸದಲ್ಲೇ  ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಆಗಲಿದೆ. ನಾಡಿನ ಕಲಾವಿದರ ದೊಡ್ಡ ತಂಡವೇ ಕಾರ್ಕಳಕ್ಕೆ ಬಂದಿಳಿಯುತ್ತಿದೆ. 150 ಕಲಾ ತಂಡ, 30 ಕಾಲೇಜುಗಳ ತಂಡ, 34 ಗ್ರಾ.ಪಂ.ಗಳ  ತಂಡ ಇರಲಿದ್ದು, ಮೈಲುದ್ದದ  ಮೆರವಣಿಗೆ ವೀಕ್ಷಿಸಲು  ಜನ ಪ್ರವಾಹ  ರೀತಿಯಲ್ಲಿ  ಹರಿದು ಬರುವ ನಿರೀಕ್ಷೆ ಇದೆ.

ಉತ್ಸವ ಮೆರವಣಿಗೆ  ಪ್ರಮುಖ ಕೇಂದ್ರವಾಗಿರುವುದರಿಂದ ಉತ್ಸವ  ಮೆರ ವಣಿಗೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಪ್ರತೀ ಮನೆಯವರೂ ಉತ್ಸವದಲ್ಲಿ  ಭಾಗವಹಿಸಬೇಕೆನ್ನುವ  ಉದ್ದೇಶ  ಇರಿಸಿ ಕೊಂಡು ಉತ್ಸವ  ಮೆರವಣಿಗೆಯನ್ನು  ಆಯೋಜಿಸಲಾಗಿದೆ

ಮೆರವಣಿಗೆ ಸ್ವರೂಪ :

ಗಣ್ಯರ ಸಮ್ಮುಖ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೆರವಣಿಗೆಗೆ ಚಾಲನೆ ನೀಡುವರು. ಭಾರತ ಮಾತೆಯ ಭಾವಚಿತ್ರ, ಶ್ರೀ ಭುವನೇಶ್ವರಿ ಚಿತ್ರ, ಕಲಾವಿದರ ತಂಡ ಮೆರವಣಿಗೆಯಲ್ಲಿ ಮೊದಲು ಸಾಗುತ್ತದೆ. ಪ್ರೇಕ್ಷಕರು ರಸ್ತೆ ಬದಿಯುದ್ದಕ್ಕೂ ಕಲಾವಿದರ ಮೆರವಣಿಗೆ ಸಾಗುವುದನ್ನು ವೀಕ್ಷಿಸಿದ ಬಳಿಕ ಕೊನೆಯಲ್ಲಿ ಮೆರವಣಿಗೆಯಲ್ಲಿ ಸೇರಿಕೊಂಡು ಸ್ವರಾಜ್‌ ಮೈದಾನಕ್ಕೆ ತೆರಳುವರು. ಅಲ್ಲಿ  ಸರಳ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆಯಲಿವೆ.

ನಿಗದಿತ ಸಮಯಕ್ಕೆ  ಆರಂಭ :

ಮೆರವಣಿಗೆ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲಿದೆ. ತಾ|ನಿಂದ ಹಾಗೂ  ಹೊರ ಭಾಗದಿಂದ ಬರುವವರು  ಸಮಯ ಮುಂಚಿತವಾಗಿ  2 ಗಂಟೆ ಒಳಗೆ  ನಗರ ತಲುಪಬೇಕಿದೆ.  ಮೆರವಣಿಗೆ ಸಂಜೆ 5ಕ್ಕೆ ಸ್ವರಾಜ್‌ ಮೈದಾನ ತಲುಪಲಿದೆ.  ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ  ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next