ಬೆಳ್ಮಣ್: ಈ ಬಾರಿ ಸುರಿದ ಭಾರೀ ಮುಂಗಾರು ಮಳೆ ಹಾಗೂ ಬಳಿಕ ಸುರಿದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಸಂಕಲಕರಿಯದ ಶಾಂಭವಿ ನದಿ ತುಂಬಿ ತುಳುಕುತ್ತಿದೆ.
Advertisement
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬತ್ತಿ ಹೋಗಿದ್ದ ಇದೇ ನದಿ ಈ ಬಾರಿ ಈ ವೇಳೆಗೆ ತುಂಬಿದ್ದು ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ.ಈಗಾಗಲೇ ಪಲಿಮಾರು ಅಣೆಕಟ್ಟು ನಿರ್ವಹಣ ಸಮಿತಿ ಅಣೆಕಟ್ಟುವಿಗೆ ಹಲಗೆ ಹಾಕಿದ್ದು ಶಾಂಭವಿ ನದಿಯಲ್ಲಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ.ಸಂಕಲಕರಿಯದಲ್ಲಿಯೂ ಅಣೆಕಟ್ಟು ವಿಗೆ ಹಲಗೆ ಅಳವಡಿಸಲಾಗಿದ್ದರೂ ನೀರಿನ ರಭಸಕ್ಕೆ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದ ಸುಧಾಕರ ಸಾಲ್ಯಾನ್ ಮುಂದಿನ ಹಲಗೆ ಹಾಕುವ ಪ್ರಕ್ರಿಯೆ ಮುಂದೂಡಿದ್ದಾರೆ.
Related Articles
ಬಜಗೋಳಿ: ಬಜಗೋಳಿ ವ್ಯಾಪ್ತಿಯ ಮಾಳ ಮಲ್ಲಾರ್ ಹೊಳೆ, ಕಡಾರಿ ಹೊಳೆ, ಮಂಜಲ್ತಾರ್ ಹೊಳೆಗಳಲ್ಲಿ ಕಳೆದ ಬಾರಿ ಡಿಸೆಂಬರ್ ತಿಂಗಳಲ್ಲಿ ನೀರಿನ ಒರತೆ ಕಡಿಮೆಯಾಗಿ ನದಿಗಳಲ್ಲಿ ನೀರು ಹರಿಯುತ್ತಿರಲಿಲ್ಲ.
Advertisement
ಆದರೆ ಈ ಬಾರಿ ನವೆಂಬರ್ ವರೆಗೆ ಸುರಿದ ಮಳೆಯಿಂದಾಗಿ ನದಿಗಳಲ್ಲಿ ನೀರು ಹರಿಯುತ್ತಿದ್ದು ಕಳೆದ ಬಾರಿಗಿಂತ ಈ ಬಾರಿ ನೀರಿನ ಹರಿವು ಜಾಸ್ತಿಯಾಗಿದೆ.ನೀರಿನ ಒರತೆಯಿಂದಾಗಿ ನದಿದಡ ಪರಿಸರದ ಕೃಷಿಕರಿಗೆ ಅನುಕೂಲವಾಗಿದೆ. ಈ ಭಾಗದ ರೈತರು ಈ ಬಾರಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಈ ಪರಿಸರದ ನದಿಗಳೆಲ್ಲವೂ ಬತ್ತಿ ಹೋಗಿ ಕೃಷಿಕರು ಸಂಕಷ್ಟಪಡುವಂತಾಗಿತ್ತು. ಪರಿಸರದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಬಿದ್ದ ಪರಿಣಾಮ ಬಜಗೋಳಿ, ಈದು, ಪಳ್ಳಿ ಪರಿಸರದ ನದಿಗಳು ಡಿಸೆಂಬರ್ ತಿಂಗಳಿನಲ್ಲಿಯೂ ಒರತೆಯಿಂದಾಗಿ ಸರಾಗವಾಗಿ ಹರಿಯುವಂತಾಗಿದೆ. – ಸಂದೇಶ್ ಕುಮಾರ್ ಅಜೆಕಾರು ಹೊಳೆಯಲ್ಲಿ ಸಮೃದ್ಧ ನೀರು
ಅಜೆಕಾರು: ಅಜೆಕಾರು ಹಾಗೂ ಸುತ್ತಲ ಪರಿಸರದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಬಿದ್ದ ಪರಿಣಾಮ ಎಣ್ಣೆಹೊಳೆಯ ಸುವರ್ಣಾ ನದಿ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಡಿಸೆಂಬರ್ ತಿಂಗಳಿನಲ್ಲಿಯೂ ನೀರು ಸರಾಗವಾಗಿ ಹರಿಯುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಕೆರೆತೊರೆಗಳಲ್ಲಿ ನೀರು ಸಮೃದ್ದವಾಗಿದೆ. ಕಳೆದ ವರ್ಷ ಎಣ್ಣೆಹೊಳೆ ಸೇರಿದಂತೆ ಎಲ್ಲ ನದಿಗಳ ನೀರು ಡಿಸೆಂಬರ್ ತಿಂಗಳಿನಲ್ಲಿಯೇ ಬರಿದಾಗಿ ಜನತೆ ಸಂಕಷ್ಟಪಡುವಂತಾಗಿತ್ತು. ಆದರೆ ಈ ಬಾರಿ ನದಿಗಳಲ್ಲಿ ನೀರು ಹರಿಯುತ್ತಿರುವುದರಿಂದ ನದಿ ದಡಗಳ ಕೃಷಿಕರಿಗೂ ಬಹಳಷ್ಟು ಅನುಕೂಲವಾಗಿದೆ. ಹೊಳೆಯಲ್ಲಿ ನೀರು ಹರಿಯುವ ಜತೆಗೆ ನದಿ ಪಾತ್ರಗಳಲ್ಲಿ ನೀರಿನ ಒರತೆ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಕೆರ್ವಾಶೆ, ಶಿರ್ಲಾಲು, ಅಂಡಾರು, ಮರ್ಣೆ, ಕಡ್ತಲ, ಕುಕ್ಕುಜೆ ಭಾಗದ ರೈತರು ಪಾಳುಬಿದ್ದ ಗದ್ದೆಗಳಲ್ಲಿಯೂ ಈ ಬಾರಿ ಭತ್ತ ನಾಟಿ ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ವೇಳೆಯಲ್ಲಿಯೇ ನದಿತೊರೆಗಳು ನೀರಿ ಲ್ಲದೆ ಬರಿದಾದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗಿತ್ತು. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಸ್ಥಳೀಯಾಡಳಿತ ಕುಡಿಯುವ ನೀರು ಪೂರೈಸುವಲ್ಲಿ ಹೈರಾಣಾಗಿತ್ತು. ಅಜೆಕಾರು ಸೇರಿದಂತೆ ಸುತ್ತಲ ಪರಿಸರದಲ್ಲಿ ಡಿ.8ರ ವರೆಗೂ ಮಳೆಯಾಗಿದ್ದು ರೈತರು ಸೇರಿ ದಂತೆ ಸ್ಥಳೀಯರಲ್ಲಿ ಸಂತಸ ತಂದಿದೆ. ಕೆರ್ವಾಶೆ ಹೊಳೆ, ಶಿರ್ಲಾಲು ಚೌಕಿ ಹೊಳೆ, ಅಂಡಾರು ಹೊಳೆ, ಕಾಡುಹೊಳೆ, ತೀಥೊìಟ್ಟು ಹೊಳೆ, ದಬುìಜೆ ಹೊಳೆ, ಎಣ್ಣೆಹೊಳೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದ ನದಿಗಳು ನೀರಿನ ಸಮೃದ್ದ ಒರತೆಯೊಂದಿಗೆ ತುಂಬಿ ಹರಿಯುತ್ತಿವೆ. – ಜಗದೀಶ ಅಜೆಕಾರು ಹೆಬ್ರಿ: ಮರಳಿನಿಂದ ಅಂತರ್ಜಲ ಮಟ್ಟ ಕುಂಠಿತ
ಹೆಬ್ರಿ : ಹೆಬ್ರಿ ಪರಿಸರದಲ್ಲಿ ಹಾದು ಹೋಗುವ ಸೀತಾನದಿಯಲ್ಲಿ ಕಳೆದ ಬಾರಿ ಇದೇ ಸಂದರ್ಭದಲ್ಲಿ ನೀರಿನ ಮಟ್ಟ ಹೆಚ್ಚಿತ್ತು. ಆದರೆ ಈ ಬಾರಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಬಾರಿ ಈ ಪ್ರದೇಶ ದಲ್ಲಿ ಮಳೆ ಹೆಚ್ಚಾಗಿದ್ದರೂ ಈಗಲೇ ಕೆಲವೊಂದು ಬಾವಿಕೆರೆಗಳಲ್ಲಿ ಎಪ್ರಿಲ್ ತಿಂಗಳಲ್ಲಿರುವ ಹಾಗೆ ನೀರಿನ ಮಟ್ಟವಿದೆ. ನದಿಯಲ್ಲಿ ಹೇರಳ ಮರಳನ್ನು ಕಳೆದ ಬಾರಿ ತೆಗೆಯದೇ ಇರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಈ ಬಾರಿ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ ಎನ್ನುವುದು ಈ ಭಾಗದ ಕೃಷಿಕರ ಅಭಿಪ್ರಾಯ.
ಈ ಬಾರಿ ಅಂತರ್ಜಲ ಮಟ್ಟ ಕಡಿಮೆಯಾಗಿ ನದಿ ಬಾವಿಗಳಲ್ಲಿ ಈಗಲೇ ನೀರು ಕಡಿಮೆಯಾಗಿದೆ ಎನ್ನುವುದು ಕೃಷಿಕರಾದ ರಾಜೀವ ಶೆಟ್ಟಿ ಅವರ ಅಭಿಪ್ರಾಯ. ಹರಿದು ಹೋಗುವ ಸೀತಾನದಿಗೆ ಸೀತಾನದಿ ಬ್ರಿಜ್ ಬಳಿ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಗೊಂಡು 6 ತಿಂಗಳು ಕಳೆದರೂ ಇನ್ನೂ ಹಲಗೆ ಹಾಕುವ ಕಾರ್ಯ ನಡೆಯದೆ ನೀರು ಹರಿದು ಹೋಗುತ್ತಿದೆ. ಈ ಹಿಂದೆಯೇ ಹಲಗೆ ಹಾಕಿ ಡ್ಯಾಮ್ ಕಾಮಗಾರಿ ಪೂರ್ಣಗೊಂಡಿದ್ದರೂ ನೀರು ನಿಂತು ಸುತ್ತಮುತ್ತಲಿನ ಬಾವಿಕೆರೆಗಳಲ್ಲಿ ಅಂತರ್ಜಲ ಮಟ್ಟದ ಹೆಚ್ಚಾಗುತ್ತಿತ್ತು ಎನ್ನುವುದು ಈ ಭಾಗದ ಕೃಷಿಕರ ಅನಿಸಿಕೆ. – ಹೆಬ್ರಿ ಉದಯಕುಮಾರ್ ಶೆಟ್ಟಿ