Advertisement

ಕಾರ್ಕಳ: ನೇತಾಡಿಕೊಂಡೇ ವಿದ್ಯಾರ್ಥಿಗಳ ಬಸ್‌ ಪ್ರಯಾಣ

11:26 PM Jul 19, 2019 | Sriram |

ಕಾರ್ಕಳ: ಕಾಲೇಜು ವಿದ್ಯಾರ್ಥಿಗಳು ಬಸ್‌ ಮೆಟ್ಟಿಲಿನಲ್ಲೇ ನಿಂತುಕೊಂಡು ನೇತಾಡಿಕೊಂಡೇ ಪ್ರಯಾಣಿಸುವ ದೃಶ್ಯ ಕಾರ್ಕಳ ಪೇಟೆಯಲ್ಲಿ ನಿತ್ಯ ಬೆಳಗ್ಗಿನ ವೇಳೆ ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಕಾಲೇಜು ಸೇರಬೇಕೆಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆತುರಾತುರವಾಗಿ ಕಾರ್ಕಳದ ಬಸ್‌ಸ್ಟಾಂಡ್‌ನ‌ಲ್ಲಿ ಬಸ್‌ ಏರುತ್ತಾರೆ.

Advertisement

ಎಂಪಿಎಂ ಸೇರಿದಂತೆ ಇಲ್ಲಿನ ಸ್ಥಳೀಯ
ಕಾಲೇಜುಗಳಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸರಕಾರಿ ಬಸ್‌ ಸೌಲಭ್ಯವಿಲ್ಲದ ಕಾರಣ ಖಾಸಗಿ ಬಸ್‌ ಮೂಲಕವೇ ಪ್ರಯಾಣಿಸಬೇಕಿದೆ. ಖಾಸಗಿ ಬಸ್‌ ಕೂಡ ಬೆರಳೆಣಿಕೆಯಲ್ಲಿರುವುದರಿಂದ ಇದ್ದ ಬಸ್‌ನಲ್ಲಿ ನೂಕುನುಗ್ಗಲು. ಇದರಿಂದ ನೇತಾಡಿ ಕೊಂಡೇ ಪ್ರಯಾಣಿಸುತ್ತಿದ್ದಾರೆ.

ಅಪಾಯಕಾರಿ
ಸುರಕ್ಷತೆಯ ಹಿನ್ನೆಲೆಯಲ್ಲಿ ಬಸ್‌ನ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವುದು ಅಪಾಯಕಾರಿ ಮತ್ತು ಕಾನೂನು ಬಾಹಿರ. ಆದರೆ, ನಿಯಮಗಳನ್ನೆಲ್ಲ ಗಾಳಿಗೆ ತೂರಿ ಕಾರ್ಕಳದಲ್ಲಿ ಕಾಲೇಜು ವಿದ್ಯಾರ್ಥಿಗಳು ನೇತಾಡಿಕೊಂಡೇ ಪ್ರಯಾಣಿಸುತ್ತಾರೆ. ಆತ ತಪ್ಪಿ ಬಿದ್ದಲ್ಲಿ ಅನಾಹುತ ಖಚಿತ. ಚಾಲಕ ಓವರ್‌ ಟೇಕ್‌ ಮಾಡುವ ವೇಳೆ ಸೇರಿದಂತೆ ಇನ್ನಿತರ ಸಂದರ್ಭದಲ್ಲೂ ಅವಘಢ ಸಂಭವಿಸುವ ಸಾಧ್ಯತೆಯಿದೆ. ಮೂರು ವರ್ಷಗಳ ಹಿಂದೆ ಎಂಪಿಎಂ ಕಾಲೇಜು ಬಳಿ ಖಾಸಗಿ ಬಸ್‌ ಪಲ್ಟಿಯಾಗಿದ್ದನ್ನು ಜನರು ಇಂದೂ ನೆನಪಿಸುತ್ತಾರೆ.

ಅನಿವಾರ್ಯತೆ
ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬುವುದು ಆರ್‌ಟಿಒ ನಿಯಮದಂತೆ ತಪ್ಪು. ನಿಯಮ ಉಲ್ಲಂ ಸಿದಲ್ಲಿ ಆರ್‌ಟಿಒ ಅಧಿಕಾರಿ, ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬಹುದಾಗಿದೆ. ಆದರೆ, ಬಸ್‌ ಸೌಕರ್ಯವಿಲ್ಲ ದಿರುವುದರಿಂದ ಪೊಲೀಸರು ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.

ಬಸ್‌ ನಿಲ್ದಾಣದ ಅವ್ಯವಸ್ಥೆ
ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ವೇಳೆ ಪ್ರಯಾಣಿಕರು ಕುಳಿತುಕೊಳ್ಳಲು ಸೌಕರ್ಯವಿಲ್ಲ. ತಾ| ಕೇಂದ್ರದ ಬಸ್‌ನಿಲ್ದಾಣ ಇಷ್ಟೊಂದು ಶೋಚನೀಯ ಪರಿಸ್ಥಿತಿಯಲ್ಲಿ ಇರುವುದು ವಿಷಾದನೀಯ.

Advertisement

ಕೆಎಸ್‌ಆರ್‌ಟಿಸಿ ಬಸ್‌ ಒದಗಿಸಲಿ
ಖಾಸಗಿ ಬಸ್‌ನವರು ಬಸ್‌ ಒದಗಿಸುವುದು ಕಷ್ಟಕರವಾಗಿದ್ದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ ಒದಗಿಸುವ ಕಾರ್ಯ ಮಾಡಬೇಕಾಗಿದೆ. ಈ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿ ಕಾಳಜಿ ಮೆರೆಯಬೇಕಿರುವುದು ಸಂಬಂಧಪಟ್ಟವರ ಕರ್ತವ್ಯ.

ಕಾನೂನು ರೀತಿ ಕ್ರಮ
ವಿದ್ಯಾರ್ಥಿಗಳು ನೇತಾಡಿಕೊಂಡು ಹೋದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಹೆಚ್ಚುವರಿ ಬಸ್‌ ಸೌಲಭ್ಯ ಒದಗಿಸುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುವುದು.
-ಪಿ. ಕೃಷ್ಣಕಾಂತ್‌ ,ಎಎಸ್‌ಪಿ ಕಾರ್ಕಳ

ಹೆಚ್ಚುವರಿ ಬಸ್‌ ಒದಗಿಸಿ
ಬಸ್‌ ಕೊರತೆಯಿಂದಾಗಿ ಕಾಲೇಜು ವಿದ್ಯಾರ್ಥಿಗಳು ಬಸ್‌ ಮೆಟ್ಟಿಲಿನಲ್ಲಿ ನಿಂತು ನೇತಾಡಿಕೊಂಡು ಹೋಗುವ ಅನಿವಾರ್ಯತೆಯಿದೆ. ಸಂಭಾವ್ಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಬಸ್‌ ಮಾಲಕರು ಬೆಳಗ್ಗಿನ ವೇಳೆ ಹೆಚ್ಚುವರಿ ಬಸ್‌ ಸೌಲಭ್ಯ ನೀಡಿ ಮಾನವೀಯತೆ ಮೆರೆಯಬೇಕಾಗಿದೆ.
-ಶುಭದಾ ರಾವ್‌, ಪುರಸಭಾ ಸದಸ್ಯರು

ಪೋಷಕರು ಗಮನಹರಿಸಿ
ಬೆಳಗ್ಗಿನ ಜಾವ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಬಸ್‌ನಲ್ಲಿ ನೇತಾಡಿಕೊಂಡೇ ಹೋಗುತ್ತಾರೆ. ಬಸ್‌ ಮಾಲಕ- ಚಾಲಕರು, ಪೋಷಕರು ಗಮಸಬೇಕಿದೆ .
-ಅನಿಲ್‌ ನಾಯಕ್‌ ,ಬಜಗೋಳಿ

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next