ಕಾರ್ಕಳ: ವಿಶ್ವಕ್ಕೆ ಭಾರತೀಯ ಶಿಕ್ಷಣ ಮಾದರಿಯಾಗಿದೆ. ವಿಶ್ವವಿದ್ಯಾನಿಲಯದ ಪಠ್ಯಕ್ರಮವು ಸ್ಥಳಿಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆವಶ್ಯಕತೆಗಳು, ಉದ್ಯಮ ಅಗತ್ಯಗಳಿಗೆ ಅನುಗುಣವಾಗಿರಬೇಕು, ಭವಿಷ್ಯದ ದೃಷ್ಟಿಯಿಂದ ಹೊಸ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕಿದೆ ಎಂದು ಹೊಸದಿಲ್ಲಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಅಧ್ಯಕ್ಷ ಪ್ರೊ| ಅನಿಲ್ ಸಹಸ್ರಬುದ್ದೆ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿ.ವಿ. ವಿಭಾಗದ ವತಿಯಿಂದ ಶ್ರೀ ಭುವನೇಂದ್ರ ಕಾಲೇಜಿನ ಸಭಾಂಗಣದಲ್ಲಿ 2024ನೇ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಸುವೃತ್ ಕುಮಾರ್, ಭುವನೇಂದ್ರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಪೈ, ಬೆಂಗಳೂರು ಕೆಆರ್ಎಸ್ಎಸ್ಎಸ್ ಅಧ್ಯಕ್ಷ ಡಾ| ಗುರುನಾಥ್ ಬಡಿಗೇರ್, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಮೋಹನ್ ಪಡಿವಾಳ್ ಉಪಸ್ಥಿತರಿದ್ದರು.
ಜೀವಮಾನದ ಸಾಧನೆಗಾಗಿ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್, ಶಿಕ್ಷಣ ತಜ್ಞ ಹಾಗೂ ಬರಹಗಾರ ಡಾ| ಶಂಕರ್ ರಾವ್, ಕಾಲೇಜು ಆಡಳಿತ ನಿರ್ವಹಣೆಯಲ್ಲಿನ ಅತ್ಯುತ್ತಮ ಆಡಳಿತ ನಿರ್ವಹಣೆಗೆ ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಜಗದೀಶ್ ಬಾಳ, ಎಸ್ಡಿಎಂ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಡಾ| ಬಿ.ಎ. ಕುಮಾರ ಹೆಗ್ಡೆ, ಸಂಶೋಧನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಶಿಕ್ಷಕರ ಅತ್ಯುತ್ತಮ ಸಂಶೋಧಕ ಮಂಗಳೂರು ವಿ.ವಿ. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ| ವಿಶಾಲಾಕ್ಷಿ ಬಿ. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ| ಮಂಜುನಾಥ್ ಕೋಟ್ಯಾನ್, ಹಾಗೂ ಕಾವೇರಿ ಕಾಲೇಜು ವಿರಾಜಪೇಟೆಯ ನಿವೃತ್ತ ಪ್ರಾಂಶುಪಾಲ ಡಾ| ಆನಂದ ಕಾರ್ಲ ಇವರನ್ನು ಹಾಗೂ ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜಿನ ಗ್ರಂಥಪಾಲಕ ಡಾ| ವಾಸಪ್ಪ ಗೌಡ, ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿಗಾಗಿ ಭಂಡಾರ್ಕಾರ್ಸ್ ಕಾಲೇಜಿನ ದೈ.ಶಿಕ್ಷಕ ಕೆ. ಶಂಕರನಾರಾಯಣ ಕುಂದಾಪುರ ಇವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ವಾಣಿ ವಂದಿಸಿದರು.