Advertisement

ಮಾರ್ಕೆಟ್‌ ರಸ್ತೆ ಪೂರ್ಣಗೊಳ್ಳದೆ ಸಮಸ್ಯೆ: ಅಸಮಾಧಾನ

02:25 AM Dec 13, 2018 | Team Udayavani |

ಕಾರ್ಕಳ: ನಗರದ ಮಾರ್ಕೆಟ್‌ ರಸ್ತೆಯ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ರಸ್ತೆ ಕೆಲಸ ಪೂರ್ಣಗೊಂಡು ಬಿಟ್ಟುಕೊಡಬೇಕಾದ ಸಮಯ ಕಳೆದರೂ ಕೆಲಸ ಮುಗಿದಿಲ್ಲ. ಹೀಗಾಗಿ ಜನರಿಗೆ ಹಲವು ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ. ಜತೆಗೆ ಇತರ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂದು ಪುರಸಭೆಯ ಸದಸ್ಯರು ಕುಂದುಕೊರತೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಪುರಸಭೆಯ ಸದಸ್ಯರಿಗೆ ಬುಧವಾರ ಆಡಳಿತಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ ನಡೆಯಿತು. ಪುರಸಭೆ  ಮುಖ್ಯಾಧಿಕಾರಿ ಮೇಬಲ್‌ ಮಾತನಾಡಿ, ನ. 25ಕ್ಕೆ ರಸ್ತೆ ಬಿಟ್ಟು ಕೊಡಬೇಕಿತ್ತು. ಆದರೆ ಸಂಬಂಧಿತ ಗುತ್ತಿಗೆದಾರರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಸದಸ್ಯರು ಪ್ರತಿಕ್ರಿಯಿಸಿ ಕಾಳಿಕಾಂಬ ಭಾಗದಲ್ಲೂ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

ಪುರಸಭೆಯಲ್ಲಿ ಖಾತೆ ಬದಲಾವಣೆಗೆ ಒಂದು ತಿಂಗಳ ಅವಧಿ ಬೇಕಾಗುತ್ತದೆ. ಆದರೆ ವ್ಯಕ್ತಿಯೊಬ್ಬರು ಕೇವಲ 4 ದಿನದಲ್ಲಿ ಖಾತೆ ಬದಲಾವಣೆ ಮಾಡಿರುವುದು ತಿಳಿದು ಬಂದಿದೆ. ಅದು ಹೇಗೆ ಸಾಧ್ಯ ವಾಯಿತು ಎಂದು ಸದಸ್ಯ ಶುಭದ ರಾವ್‌ ಪ್ರಶ್ನಿಸಿದರು. ಅಲ್ಲದೇ, ಅವರು ಅರ್ಜಿ ಹಾಕಿದ ದಿನಾಂಕ ಮತ್ತು ನೊಟೀಸ್‌ ಬೋರ್ಡ್‌ಗೆ ಹಾಕಿರುವುದು ಕೂಡ ಯಾವುದೂ ತಾಳೆಯಾಗುತ್ತಿಲ್ಲ. ಫೈಲ್‌ ಕೇಳಿದರೂ ಸಿಗುತ್ತಿಲ್ಲ, ಕೂಡಲೇ ಸಭೆಗೆ ತರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತಾಧಿಕಾರಿ ಭೂಬಾಲನ್‌ ಅವರು ಮಾತನಾಡಿ, ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮೊದಲು ಬಂದವರಿಗೆ ಕ್ರಮ ಪ್ರಕಾರವಾಗಿ ನೀಡಬೇಕು. ಅದರಲ್ಲಿ ಯಾವುದೇ ಗೊಂದಲ ಉಂಟು ಮಾಡಬಾರದು ಎಂದು ಸಂಬಂಧಿತ ಅಧಿಕಾರಿಗೆ ತಿಳಿಸಿದರು. 4ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸದಸ್ಯೆ ತಿಳಿಸಿದರು. ನಗರದಲ್ಲಿ ಕಳೆದ ಒಂದೂವರೆ ತಿಂಗಳಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ಸದಸ್ಯರು ತಿಳಿಸಿದರು.

ಮೋರಿಯಲ್ಲಿ ಮಣ್ಣು
ಸದಸ್ಯ ಅಶ್ಫಕ್‌ ಅಹ್ಮದ್‌ ಮಾತನಾಡಿ, ಬಂಗ್ಲೆಗುಡ್ಡೆ ವಾರ್ಡ್‌ ನಲ್ಲಿ ಮೋರಿಗಳಲ್ಲಿ ಮಣ್ಣು ತುಂಬಿಕೊಂಡಿದೆ. ಅಲ್ಲದೇ ಜನರು ಓಡಾಡುವ ಪ್ರದೇಶದಲ್ಲಿ ಕಳೆ, ಹುಲ್ಲು ತುಂಬಿಕೊಂಡಿದ್ದು, ನೂರಾರು ಜನರು ಓಡಾಡುವ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ ಎಂದರು. ಮೂರನೇಯ ವಾರ್ಡ್‌ನ ರಸ್ತೆ ಬದಿಯಲ್ಲಿ  ಕೂಡ ಕಳೆ ತುಂಬಿದ್ದು, ರಸ್ತೆಗಳೂ ಕೂಡ ಕೆಟ್ಟು ಹೋಗಿವೆ  ಎಂದು ಸ್ಥಳೀಯ ಸದಸ್ಯೆ ಸಭೆಗೆ ತಿಳಿಸಿದರು.

ನಿಧಾನಗತಿಯ ಕೆಲಸ
ಪುರಸಭೆ ಸದಸ್ಯ ಶುಭದರಾವ್‌ ವಿಷಯ ಪ್ರಸ್ತಾವಿಸಿ, ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಹಲವು ಕೆಲಸಗಳು ಅತ್ಯಂತ ನಿಧಾನಗತಿಯಿಂದ ನಡೆಯುತ್ತಿವೆ. ಮಾರ್ಕೆಟ್‌ ರಸ್ತೆ ಈಗಾಗಲೇ ನಿಗದಿತ ಸಮಯವನ್ನು ಕಳೆದಿದ್ದು, ಇನ್ನೂ ಕಾಮಗಾರಿ ಮುಗಿದಿಲ್ಲ. ಅಲ್ಲಿನ ವ್ಯಾಪಾರ ವಹಿವಾಟುಗಳು ಪೂರ್ಣ ಸ್ಥಗಿತಗೊಂಡಿವೆ ಎಂದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next