Advertisement

ಕಾರ್ಕಳ: ರವಿವಾರ ದಿನಸಿ ಅಂಗಡಿಯಲ್ಲಿ ಜನ ವಿರಳ, ಮೆಡಿಕಲ್‌ನಲ್ಲಿ ಔಷಧಿ ಕೊರತೆ

09:17 AM Mar 30, 2020 | sudhir |

ಕಾರ್ಕಳ: ಬೆಳಗ್ಗೆ 7ರಿಂದ 11ಗಂಟೆ ತನಕ ದಿನಸಿ ಖರೀದಿಗೆ ಅವಕಾಶವಿದ್ದರೂ ಕಾರ್ಕಳ ನಗರದಲ್ಲಿ ದಿನಸಿ ಅಂಗಡಿ ಎದುರು ಜನಸಂದಣಿ ವಿರಳವಾಗಿತ್ತು. ಮೆಡಿಕಲ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಎಂದಿನಂತೆ ಸಂಜೆ ತನಕ ತೆರೆದಿತ್ತು. ದಿನಸಿ ಅಂಗಡಿ ಸೇರಿದಂತೆ ಅಗತ್ಯ ಸಾಮಗ್ರಿ ಒದಗಿಸುವ ಅಂಗಡಿ-ಮುಂಗಟ್ಟು ಬೆಳಗ್ಗೆ 7ರಿಂದ 11ರತನಕ ತೆರೆದಿತ್ತಾದರೂ ಶುಕ್ರವಾರ, ಶನಿವಾರ ಕಂಡುಬಂದಂತೆ ಜನಜಂಗುಳಿಯಿರಲಿಲ್ಲ. ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದ್ದರೂ ತರಕಾರಿ, ಹಣ್ಣು ಹಂಪಲು ದರದಲ್ಲಿ ತುಸು ಏರಿಕೆಯಾಗಿತ್ತು.

Advertisement

ಹಣ್ಣು ದರ ಏರಿಕೆ
80 ರೂ. ಇದ್ದ ದ್ರಾಕ್ಷಿ ಬೆಲೆ 100 ರೂ.ಗೆ ಏರಿದೆ. 120 ರೂ. ಇದ್ದ ದಾಳಿಂಬೆ ಬೆಲೆ 140 ರೂ. ಆಗಿದೆ. ಸೇಬು ದರ (140-160) ಹಾಗೂ ಕಲ್ಲಂಗಡಿ ದರ (20)ದಲ್ಲಿ ಯಥಾಸ್ಥಿತಿಯಲ್ಲಿದೆ.

ಅನಾನಸು ದರ ಕುಸಿತ
ವಿಶೇಷವೆಂದರೆ 50 ರೂ.ಗೆ ಮಾರಾಟವಾಗುತ್ತಿದ್ದ ಅನಾನಸು ದರ 20ರೂ.ಗೆ ಕುಸಿದಿದೆ. ಬೇಡಿಕೆ ಇಲ್ಲದ ಪರಿಣಾಮ ಬೆಲೆ ಕುಸಿದಿದೆ ಎಂದು ವ್ಯಾಪಾರಿಯೋರ್ವರು ಹೇಳುತ್ತಾರೆ.

ತರಕಾರಿ ಬೆಲೆಯಲ್ಲೂ ಏರಿಕೆ
80 ರೂ. ಇದ್ದ ಊರಿನ ಬೆಂಡೆ ಬೆಲೆ 120 ರೂ. ಗೆ ಏರಿದೆ. ಟೊಮ್ಯಾಟೋ ಬೆಲೆ 30 ರೂ. ನಿಂದ 40 ರೂ., ಬಟಾಟೆ 35 ರೂ. ನಿಂದ 45 ರೂ., ನೀರುಳ್ಳಿ 35 ರೂ. ನಿಂದ 45 ರೂ., ಬೀನ್ಸ್‌ 60 ರೂ. ನಿಂದ 80 ರೂ.ಗೆ ಏರಿಕೆ ಕಂಡುಬಂದಿದೆ.

ಪೌರಾಡಳಿತ, ಕಂದಾಯ ಇಲಾಖಾ ಸಿಬ್ಬಂದಿ ನಿರ್ದಿಷ್ಟ ಅವಧಿ ಮುಗಿದ ಬಳಿಕ ಅಂಗಡಿಗಳನ್ನು ಮುಚ್ಚಿಸುವ ಕಾರ್ಯ ಮಾಡುತ್ತಿದ್ದರು.
ನಗರದಲ್ಲಿ ರಾಸಾಯನಿಕ ಸಿಂಪಡಣೆ, ಕಸ ವಿಲೇವಾರಿ, ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ಪೌರಾಡಳಿತ ಅಧಿಕಾರಿ-ಸಿಬ್ಬಂದಿ ವರ್ಗ ವಿಶೇಷ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದರು. ಕಂದಾಯ, ಆರೋಗ್ಯ ಮತ್ತು ಪೊಲೀಸ್‌ ಇಖಾಲಾ ಸಿಬ್ಬಂದಿ ಹೋಂ ಕ್ವಾರಂಟೈನ್‌ನಲ್ಲಿರುವ ಮನೆಗಳ ಮೇಲೆ ನಿಗಾ ವಹಿಸಿತ್ತು. ದಿನಕ್ಕೆರಡು ಬಾರಿ ಭೇಟಿ ನೀಡಿ ಅವರ ಆರೋಗ್ಯ ಕುರಿತು ಮಾಹಿತಿ ಪಡೆಯುತ್ತಿದ್ದರು.

Advertisement

ಕಟ್ಟಡ ಕಾರ್ಮಿಕರಿಗೆ ಸೂರು
ನಿರಾಶ್ರಿತರಾಗಿದ್ದ 11 ಮಂದಿ ಬೇರೆ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಭುವನೇಂದ್ರ ಕಾಲೇಜಿನ ಇಂಡೋರ್‌ ಸ್ಟೇಡಿಯಂನಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಈ ನಿಟ್ಟಿನಲ್ಲಿ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಹಾಗೂ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್‌ ಸಹಕರಿಸಿದ್ದರು.

ಹುಬ್ಬಳ್ಳಿಗೆ ತೆರಳಿದ ತಂಡ
ಕಾರ್ಕಳದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಹುಬ್ಬಳ್ಳಿ ಮೂಲದ 4 ಮಂದಿ ತಮ್ಮೂರಿಗೆ ತೆರಳುವ ನಿಟ್ಟಿನಲ್ಲಿ ಉಡುಪಿ ತನಕ ಕಾಲ್ನಡಿಗೆಯಲ್ಲಿ ಸಾಗಿದರು. ಉಡುಪಿಯಿಂದ ಯಾವುದಾದರೂ ವಾಹನ ದೊರೆತಲ್ಲಿ ತಮ್ಮ ಊರು ಸೇರಬಹುದೆಂಬ ಆಶಾವಾದ ಅವರಲ್ಲಿತ್ತು.

ಪೆಟ್ರೊಲ್‌ ಬಂಕ್‌ ಅವಧಿ ಕಡಿತ
ಕಾರ್ಕಳ ತಾಲೂಕಿನಲ್ಲಿ ರವಿವಾರದಿಂದ ಮುಂದಿನ ಆದೇಶದವರೆಗೆ ಪೆಟ್ರೋಲ್‌ ಬಂಕ್‌ಗಳು ಬೆಳಗ್ಗೆ 7ರಿಂದ 11ರವರೆಗೆ ಸೇವೆ ನೀಡುವಂತೆ ಕಾರ್ಕಳ ತಾಲೂಕು ಆಡಳಿತ ತಿಳಿಸಿದೆ. ಆಗಿದ್ದಾಗ್ಯೂ ವೈದ್ಯರಿಗೆ, ಆರೋಗ್ಯ ಇಲಾಖಾ ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮದವರಿಗೆ ಪೆಟ್ರೊಲ್‌ ಪಡೆಯಲು ಅವಕಾಶ ನೀಡಲಾಗಿದೆ.

ಮೆಡಿಕಲ್‌ನಲ್ಲಿ ಔಷಧಿ ಕೊರತೆ
ಮೆಡಿಕಲ್‌ಗ‌ಳಿಗೆ ಔಷಧಿ ಪೂರೈಕೆಯಲ್ಲಿ ವ್ಯತ್ಯಾಯ ಕಂಡುಬಂದ ಹಿನ್ನೆಲೆಯಲ್ಲಿ ಬಿಪಿ, ಶುಗರ್‌ಗಾಗಿ ಔಷಧ ಪಡೆಯುವವರಿಗೆ ತೊಂದರೆಯುಂಟಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ವಿಪರೀತ ಬೇಡಿಕೆಯಿದ್ದರೂ ದೊರೆಯುತ್ತಿಲ್ಲ. ಔಷಧಿ ವಿತರಣಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರೆತೆಯಿಂದಾಗಿ ಸಮಸ್ಯೆಯುಂಟಾಗಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲೂ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯವೆಂದು ಮೆಡಿಕಲ್‌ ಮಾಲಕರು ಅಭಿಪ್ರಾಯಪಡುತ್ತಾರೆ.

ಹೊರ ಜಿಲ್ಲೆಯ ಸುಮಾರು 20 ಮಂದಿ ಕೂಲಿಕಾರ್ಮಿಕರು ರವಿವಾರ ಬೆಳಗ್ಗೆ ಕಾರ್ಕಳ ಪೊಲೀಸ್‌ ಠಾಣೆಗೆ ಧಾವಿಸಿ ತಾವು ಊರಿಗೆ ಹೋಗಲು ಅನುವು ಮಾಡಿಕೊಡುವಂತೆ ಬೇಡಿಕೊಂಡರು. ಈ ವೇಳೆ ಸ್ಪಂದಿಸಿದ ಪೊಲೀಸರು ನೀವು ನಿಮ್ಮೂರಿಗೆ ತೆರಳುವಂತೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರ. ನಿಮಗೆ ಉಳಿದುಕೊಳ್ಳಲು ವ್ಯವಸ್ಥೆಯೊಂದಿಗೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ಸಾಮಗ್ರಿ ಒದಗಿಸಿಕೊಡುವುದಾಗಿ ತಿಳಿಸಿ ಸಕಲ ವ್ಯವಸ್ಥೆ ಮಾಡಿದರು.

ನಿರಾಶ್ರಿತರ ಶಿಬಿರ ತೆರೆಯುತ್ತೇವೆ-ಸುನಿಲ್‌ ಕುಮಾರ್‌
ಉದ್ಯೋಗ ಅರಸಿ ಕಾರ್ಕಳಕ್ಕೆ ಬಂದಿರುವ ಹೊರ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಮೂರು ಹೊತ್ತು ಊಟ ನೀಡಲಾಗುವುದು. ಅನ್ನ, ನೀರಿಗಾಗಿ ಕಾರ್ಕಳದಲ್ಲಿ ಯಾರೊಬ್ಬರೂ ತೊಂದರೆಗೀಡಾಗಬಾರದೆಂಬ ನಿಟ್ಟಿನಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಅಗತ್ಯ ಸೇವೆಗಾಗಿ 9449052310 (ಮಂಜು ದೇವಾಡಿಗ) 9845243495 (ರಾಜೇಶ್‌ ರಾವ್‌ ಕುಕ್ಕುಂದೂರು) 9980225319 (ಹರೀಶ್‌ ಶೆಣೈ) ಸಂಪರ್ಕಿಸುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ಹೊರ ಜಿಲ್ಲೆ, ತಾಲೂಕಿನಿಂದ ಕಾರ್ಕಳಕ್ಕೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಬಜಗೋಳಿ, ಮಾಳ, ಬೆಳ್ಮಣ್‌, ಸಾಣೂರು, ಕೆದಿಂಜೆ ಭಾಗದಲ್ಲಿ ನಾಕಾಬಂಧಿ ಹಾಕಲಾಗಿದೆ. ದಾನಿಗಳು ಪೊಲೀಸ್‌ ಠಾಣೆಗೆ ತಂದೊಪ್ಪಿಸಿದ ಆಹಾರ ಸಾಮಗ್ರಿಯನ್ನು ಅಗತ್ಯವುಳ್ಳವರಿಗೆ ಪೊಲೀಸ್‌ ಜೀಪ್‌ನಲ್ಲಿ ಸಾಗಿಸಿ ನೀಡಲಾಗುತ್ತಿದೆ ಎಂದು ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್‌ ಹುಸೇನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next