ಕಾರ್ಕಳ: ಲಾಕ್‌ಡೌನ್ ಘೋಷಣೆಯಾದ ಬಳಿಕ ಅಮಲೆಣ್ಣೆ ದೊರೆಯದೇ ಕಂಗಾಲಾಗಿದ್ದ ಮದ್ಯಪ್ರಿಯರು ಇದೀಗ ಸೋಮವಾರದಿಂದ ಎಂಎಸ್‌ಐಎಲ್ ಸೇರಿದಂತೆ ವೈನ್‌ಶಾಪ್ ತೆರೆದಿರುವುದರಿಂದ ಮದ್ಯಪಡೆಯಲು ಮುಗಿಬೀಳುತ್ತಿದ್ದ ದೃಶ್ಯ ಕಂಡಬಂತು. ರಾಜ್ಯ ಸರಕಾರ ವೈನ್‌ಶಾಪ್, ಎಂಎಸ್‌ಐಎಲ್ ತೆರೆಯಲು ಅನುಮತಿ ನೀಡಿದ ಪರಿಣಾಮ ಯುದ್ಧಗೆದ್ದ ಸಂಭ್ರಮದಲ್ಲಿರುವ ಮದ್ಯಪ್ರಿಯರು ಬೆಳಗ್ಗೆ 7ಗಂಟೆಗೇ ವೈನ್‌ಶಾಪ್‌ನತ್ತ ಧಾವಿಸಿದರು. ರಾಜ್ಯ ಸರಕಾರ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರೂ, ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ತನಕ ಸಮಯ ಸೀಮಿತಗೊಳಿಸಲಾಗಿದೆ. ವೈನ್ ಶಾಪ್ ಎದುರು ಸಾಮಾಜಿಕ ಅಂತರ ಮರೆಯಾಗಿದ್ದರೂ ಮದ್ಯಪ್ರಿಯರು ಶಾಂತಚಿತ್ತದಿಂದಲೇ ಸಾಲುದ್ದ ಕ್ಯೂ ನಿಂತಿದ್ದರು. ಕಾರ್ಕಳ ವಲಯದ ಒಟ್ಟು 22 ವೈನ್‌ಶಾಪ್‌ಗ್ಳಲ್ಲಿ 21, ಹಾಗೂ 3 ಎಂಎಸ್‌ಐಎಲ್‌ಗಳು ತೆರೆದಿತ್ತು.
ವಾಹನ ದಟ್ಟಣೆ
ಸೋಮವಾರ ಕಾರ್ಕಳ ನಗರದಲ್ಲಿ ಸರಕಾರಿ, ಖಾಸಗಿ ಬಸ್ ಸೌಲಭ್ಯವಿರಲಿಲ್ಲ. ಖಾಸಗಿ ವಾಹನ, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಿದ್ದು, ಜನರ ಸಂಚಾರವು ಅಧಿಕವಾಗಿತ್ತು. ಬೇಕರಿ, ಬಟ್ಟೆ ಅಂಗಡಿ ಸೇರಿದಂತೆ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿತ್ತು. ವೈನ್ ಶಾಪ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಕರ್ತವ್ಯನಿರ್ವಹಿಸುತ್ತಿದ್ದರು.