ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಬುಧವಾರ ವೈಭವದಿಂದ ನೆರವೇರಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತರೆಲ್ಲರೂ ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿ, ಶ್ರೀ ಶ್ರೀನಿವಾಸ ದೇವರನ್ನು ಸ್ವರ್ಣ ಮಂಟಪದಲ್ಲಿ ಹಾಗೂ ಶ್ರೀ ವೆಂಕಟರಮಣ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ಕುಳ್ಳಿರಿಸಿ ನೈವೇದ್ಯ, ಮಂಗಳಾರತಿ ಬಳಿಕ ಶ್ರೀನಿವಾಸಾಶ್ರಮಕ್ಕೆ ಸಾಗಿತು. ಅಲ್ಲಿ ದೇವರಿಗೆ ಪಂಚಾಮೃತಾ ಭಿಷೇಕ, ಧಾತ್ರಿ ಹವನ, ಹರಿವಾಣ ನೈವೇದ್ಯ, ಮಹಾ ನೈವೇದ್ಯ, ಮಂಗಳಾರತಿ ಬಳಿಕ ಭೂರಿ ಭೋಜನ ನಡೆಯಿತು.
ಅನಂತರ ಉತ್ಸವವು ಪಟ್ಟಣಾಭಿಮುಖವಾಗಿ ಹೊರಟು ವನದಿಂದ ಬಂದ ದೇವರು ಮಧ್ಯ ಪೇಟೆಯಲ್ಲಿರುವ ಗೋಪುರದಲ್ಲಿ ಆಸೀನರಾದ ಬಳಿಕ ಭಕ್ತರು ಹಣ್ಣು ಕಾಯಿಯೊಂದಿಗೆ ಸರತಿ ಸಾಲಿನಲ್ಲಿ ಬಂದು ದೇವರ ಮುಂದೆ ಇಷ್ಟಾರ್ಥಗಳ ಪ್ರಾರ್ಥನೆ ಸಲ್ಲಿಸಿದರು.
ದೇವರನ್ನು ಉತ್ಸವಕ್ಕಾಗಿ ಆಹ್ವಾನಿಸಲು ದೇವಸ್ಥಾನದಿಂದ ಸಮಸ್ತ ಬಿರುದಾವಳಿ ಸಹಿತ ವಾದ್ಯ ಘೋಷಗಳೊಂದಿಗೆ ದೇವಸ್ಥಾನ ಅರ್ಚಕರೂ, ಪ್ರಥಮ ಮೊಕ್ತೇಸರರೂ ಮಹಾ ಭಕ್ತರಿಂದ ಒಡಗೂಡಿ ಗೋಪುರದ ಬಳಿ ಸೇರಿದ ಬಳಿಕ ದೇವರನ್ನು ಅಲಂಕರಿಸಿ ರಾಜೋಪಚಾರ ಸೇವೆ ಸಲ್ಲಿಸಿ ಮಂಗಳಾರತಿ ನಡೆದು ಪಟ್ಟದ ಶ್ರೀ ಶ್ರೀನಿವಾಸ ದೇವರು ರಥಾರೂಢರಾಗಿ, ಉತ್ಸವ ದೇವರಾದ ಶ್ರೀ ವೆಂಕಟರಮಣ ದೇವರು ಪ್ರತಿಯೊಂದು ಗುರ್ಜಿಯಲ್ಲಿ ಕುಳಿತು ಪೂಜೆಯನ್ನು ಸ್ವೀಕರಿಸಿದರು.
ಉತ್ಸವವು ದೇವಸ್ಥಾನದ ಬಳಿಗೆ ತಲುಪಿದ ಬಳಿಕ ವೀರ ಮಾರುತಿ ದೇವಸ್ಥಾನದಲ್ಲಿ ಉಭಯ ದೇವರಿಗೆ ಪೂಜೆ ನಡೆಯಿತು. ಅನಂತರ ಪಟ್ಟದ ದೇವರು ಹಾಗೂ ಉತ್ಸವ ದೇವರನ್ನು ಎದುರೆದುರಾಗಿ ಸ್ವರ್ಣ ಪಲ್ಲಕಿಯಲ್ಲಿ ಕುಳ್ಳಿರಿಸಿ ಉತ್ಸವ ನಡೆದು ವಸಂತ ಪೂಜೆ ನೆರವೇರಿತು.
ಇಂದು ಅವಭೃಥ ಸ್ನಾನ
ನ. 21ರಂದು ಅವಭೃಥ ಸ್ನಾನ ರಾಮ ಸಮುದ್ರದಲ್ಲಿ ನಡೆಯಲಿದ್ದು, ಉಭಯ ದೇವರನ್ನು ವಜ್ರತಟ್ಟೆಯಿಂದ ಅಲಂಕರಿಸಿದ ಪಲ್ಲಕಿಯಲ್ಲಿ ಕುಳ್ಳಿರಿಸಿ ವೈಭದ ಉತ್ಸವ ನಡೆಯಲಿದೆ.