Advertisement

ಕಾರ್ಕಳ: ಆಧಾರ್‌ಗಾಗಿ ನಿಲ್ಲದ ಪರದಾಟ

11:25 PM Oct 02, 2019 | Sriram |

ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅತ್ಯಗತ್ಯ. ಪ್ರತಿಯೋರ್ವರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಸಾರ್ವಜನಿಕರು ಸಂಕಷ್ಟ ಪಡಬೇಕಾದ ಪರಿಸ್ಥಿತಿ ಇದೆ.

Advertisement

ವೋಟರ್‌ ಐಡಿ, ಆರ್‌ಟಿಸಿ ನೋಂದಣಿ, ಪಾಸ್‌ ಪೋರ್ಟ್‌ ಪಡೆಯುವಿಕೆ, ಅಡುಗೆ ಅನಿಲ ಸಂಪರ್ಕ, ಶಾಲಾ ದಾಖಲಾತಿ, ವಿವಿಧ ಪರವಾನಿಗೆ, ಪಿಎಫ್ ಪಡೆಯಲು, ವಸತಿ ಯೋಜನೆ ಸೇರಿದಂತೆ ಬಹುತೇಕ ಎಲ್ಲ ಕಾರ್ಯಗಳಿಗೂ ಆಧಾರ್‌ ಅತ್ಯಗತ್ಯ.

ಸ್ಥಗಿತ
ಈ ಹಿಂದೆ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಮಾಡಲು ಗ್ರಾಮ ಪಂಚಾಯತ್‌ ಹಾಗೂ ಖಾಸಗಿ ಸಂಸ್ಥೆಯವರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಅದನ್ನು ರದ್ದುಪಡಿಸಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಅಂಚೆ ಕಚೇರಿ ಹಾಗೂ ಕೆಲವೊಂದು ಬ್ಯಾಂಕ್‌ಗಳಿಗೆ ವಹಿಸಿಕೊಟ್ಟಿದೆ.

ಅಂಚೆ ಇಲಾಖೆ ಹಾಗೂ ಬ್ಯಾಂಕ್‌ ಸಿಬಂದಿಗೆ ಪ್ರಾಧಿಕಾರವೇ ತರಬೇತಿ ನೀಡಿದ್ದು, ಅಂತಹ ಕೇಂದ್ರಗಳಿಗೆ ಕಂಪ್ಯೂಟರ್‌ ಮತ್ತು ಸಂಬಂಧಿಸಿದ ಇನ್ನಿತರ ಪರಿಕರಗಳನ್ನು ಒದಗಿಸಿದೆ. ಆದರೂ ಕೆಲವೊಂದು ಕಡೆ ಆಧಾರ್‌ ತಿದ್ದುಪಡಿ ಮಾಡಲು ನಿರಾಸಕ್ತಿ ವ್ಯಕ್ತವಾಗುತ್ತಿದೆ.

ಎಲ್ಲೆಲ್ಲಿ ಸೇವೆಯಿದೆ ?
ಕಾರ್ಕಳ ತಾಲೂಕಿನಲ್ಲಿ ಬೆರಳೆಣಿಕೆ ಕೇಂದ್ರಗಳಲ್ಲಿ ಮಾತ್ರ ಆಧಾರ್‌ ನೋಂದಣಿ, ತಿದ್ದುಪಡಿ ಕಾರ್ಯವಾಗುತ್ತಿದೆ. ಕಾರ್ಕಳ ತಾಲೂಕು ಕಚೇರಿ, ನಗರದ ಗಾಂಧಿ ಮೈದಾನದ ಬಳಿಯಿರುವ ಪ್ರಧಾನ ಅಂಚೆ ಕಚೇರಿ, ಅನಂತಶಯನ ಉಪ ಅಂಚೆ ಕಚೇರಿ, ಕರ್ನಾಟಕ ವಿಕಾಸ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ಅಜೆಕಾರು ನಾಡ ಕಚೇರಿಯಲ್ಲಿ ತಿದ್ದುಪಡಿ ಕಾರ್ಯವಾಗುತ್ತಿದೆ.

Advertisement

ನಿತ್ಯ ನೂರಾರು ಮಂದಿ ಅಲ್ಲಿ ಕ್ಯೂ ನಿಂತು ಟೋಕನ್‌ ಪಡೆದು ಹಿಂದಿರುಗುತ್ತಾರೆ. ಟೋಕನ್‌ ಪಡೆಯಲೂ ಬೆಳ್ಳಂ ಬೆಳಗ್ಗೆ ಕಾದು ನಿಲ್ಲಬೇಕಾದ ಅನಿವಾರ್ಯ
ನಾಗರಿಕರದ್ದು.

ಅಂಚೆ ಇಲಾಖೆಯಲ್ಲಿ ಆಧಾರ್‌ ಅದಾಲತ್‌
ಗಾಂಧಿ ಜಯಂತಿಯಂಗವಾಗಿ ಅ.2ರಂದು ಕಾರ್ಕಳ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಸುಮಾರು 500ಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.

ನಿಂತವರಿಗೆ ನೀರು ಪೂರೈಕೆ
ಆಧಾರ್‌ ಕಾರ್ಡ್‌ ತಿದ್ದುಪಡಿಗಾಗಿ ಅಂಚೆ ಇಲಾಖೆಯ ರಸ್ತೆ ಬದಿ ಜನ ಬಿಸಿಲಿಗೆ ಸಾಲುಗಟ್ಟಿ ನಿಂತಿದ್ದರು. ಅಂಚೆ ಕಚೇರಿ ಒಳಗಡೆಯೂ ಜನಸಂದಣಿಯಿತ್ತು. ಇವರಿಗೆ ಕುಡಿಯಲು ಎಸ್‌ಬಿಐ ನೀರಿನ ಬಾಟಲಿ ಪೂರೈಸಿದ್ದು ವಿಶೇಷವಾಗಿತ್ತು.

ಆಧಾರ್‌ ತಿದ್ದುಪಡಿಗೆ ಗುರುತಿಸಲಾದ ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ನಿತ್ಯ ಆಧಾರ್‌ ನೋಂದಣಿ, ತಿದ್ದುಪಡಿ ಕಾರ್ಯವಾಗಬೇಕು. ಅದಕ್ಕೆ ಈಗಿರುವಂತೆ ಸಮಯದ ನಿಗದಿಯಿರಬಾರದು. ತಾಲೂಕು ಕಚೇರಿಯಲ್ಲೂ 2 ಯೂನಿಟ್‌ ತೆರೆದು ಜನರಿಗೆ ಅನುಕೂಲ ಮಾಡಿಕೊಡುವ ಕಾರ್ಯವಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಫ್ಯಾಕ್ಟರಿ ಸಿಬಂದಿ
ಥಂಬ್‌ ಮ್ಯಾಚ್‌ ಆಗಲ್ಲ
ಕಾರ್ಕಳದಲ್ಲಿ ಗೇರುಬೀಜದ ಫ್ಯಾಕ್ಟರಿ ಅಧಿಕ ಸಂಖ್ಯೆಯಲ್ಲಿದ್ದು, ತಾಲೂಕಿನ ಸಾವಿರಾರು ಮಂದಿ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದಾರೆ. ಗೇರು ಬೀಜದ ಫ್ಯಾಕ್ಟರಿಯಲ್ಲಿ ದುಡಿಯುವವರ ಕೈಚರ್ಮ ಸವೆದಿರುವುದರಿಂದ ಥಂಬ್‌ ಮ್ಯಾಚ್‌ ಆಗ್ತಿಲ್ಲ ಎನ್ನುವ ದೂರುಗಳಿವೆ. ಕೂಲಿ ಕಾರ್ಮಿಕರದ್ದು ಕೂಡ ಇದೇ ಸಮಸ್ಯೆ.

ಮೊಬೈಲ್‌ ನಂಬರ್‌ ಲಿಂಕ್‌ ಆಗಬೇಕು
ಆಧಾರ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಬೇಕಾದುದು ಅತಿ ಅಗತ್ಯವಾಗಿರುವುದರಿಂದ ಬಹುತೇಕ ಮಂದಿ ಮೊಬೈಲ್‌ ನಂಬರ್‌ ನಮೂದಿಸುವ ಸಲುವಾಗಿ ಆಗಮಿಸುತ್ತಾರೆ. ರಜಾ ದಿನಗಳಲ್ಲಿ ಇಂತಹ ಕಾರ್ಯ ಮಾಡುವ ಮೂಲಕ ತಮ್ಮಿಂದಾದ ಸೇವೆ ನೀಡುತ್ತಿದ್ದೇವೆ.
-ಆಶಾ ಪೂಜಾರ್ತಿ, ಅಂಚೆ ಇಲಾಖೆ ಸಿಬಂದಿ

60-80 ಮಂದಿಗೆ ಪ್ರತಿದಿನ ಟೋಕನ್‌
ಪ್ರತಿದಿನ ಸುಮಾರು 60ರಿಂದ 80 ಮಂದಿಗೆ ಅಂಚೆ ಕಚೇರಿಯಲ್ಲಿ ಆಧಾರ್‌ ಕಾರ್ಯಕ್ಕಾಗಿ ಟೋಕನ್‌ ನೀಡಲಾಗುತ್ತಿತ್ತು. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಆಧಾರ್‌ ಅದಾಲತ್‌ ನಡೆಸಲಾಗಿದೆ.
-ಧನಂಜಯ್‌ ಆಚಾರ್‌,
ಸಹಾಯಕ ಅಂಚೆ ಅಧೀಕ್ಷಕರು

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next