Advertisement

ಕಾರ್ಕಳ-ಹೆಬ್ರಿ : ಕಂದಾಯ ಇಲಾಖೆಯಲ್ಲಿ ಸಿಬಂದಿ ಕೊರತೆ

10:27 AM Dec 08, 2019 | mahesh |

ಕಾರ್ಕಳ: ಒಂದಿಲ್ಲೊಂದು ಕಾರ್ಯಕ್ಕಾಗಿ ಪ್ರತಿಯೋರ್ವರೂ ಅವಲಂಬಿಸಬೇಕಾದ ಇಲಾಖೆಗಳಲ್ಲಿ ಕಂದಾಯ ಇಲಾಖೆಯೇ ಪ್ರಮುಖ ವಾದುದು. ಜನನ ಪ್ರಮಾಣ ಪತ್ರದಿಂದ ಮೊದಲ್ಗೊಂಡು ಮರಣ ಪ್ರಮಾಣ ಪತ್ರ ದೊರೆಯುವಲ್ಲಿಯವರೆಗಿನ ತನಕ ಸಾರ್ವಜನಿಕರು ಸಂಪರ್ಕಿಸುವ ಏಕೈಕ ಕೇಂದ್ರ ಕಂದಾಯ ಕಚೇರಿ. ಇಂತಹ ಕಚೇರಿಯಲ್ಲಿ ಸಿಬಂದಿ ಕೊರತೆ ಕಾಡುತ್ತಿರುವುದರಿಂದ ಪ್ರಸ್ತುತ ಇರುವ ಸಿಬಂದಿ ಮೇಲೆ ಅಧಿಕ ಹೊರೆಯಾಗುವುದು ಮಾತ್ರವಲ್ಲದೇ ಜನಸಾಮಾನ್ಯರ ಕೆಲಸ ಕಾರ್ಯಗಳಲ್ಲಿ ಸಹಜವಾಗಿ ವಿಳಂಬವಾಗುತ್ತದೆ.

Advertisement

ಖಾಲಿ ಹುದ್ದೆಗಳು
ಕಾರ್ಕಳ ತಾಲೂಕು ಕಚೇರಿಯಲ್ಲಿ ಆಡಳಿತ ಶಾಖೆಯ ದ್ವಿತೀಯ ದರ್ಜೆ ಸಹಾಯಕ, ಸಾಮಾಜಿಕ ಭದ್ರತೆಯ ಪ್ರಥಮ ದರ್ಜೆ ಸಹಾಯಕ ಹುದ್ದೆ, ಭೂ ಸುಧಾರಣೆ ಶಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆ, ಚುನಾವಣಾ ಶಾಖಾ ದ್ವಿತೀಯ ದರ್ಜೆ ಸಹಾಯಕ ಹುದ್ದೆ, ಆಹಾರ ಶಾಖೆಯ ಶಿರಸ್ತೇದಾರ (ಡಿಟಿ) ಹಾಗೂ 2- ಆಹಾರ ನಿರೀಕ್ಷಕರ ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸೇರಿದಂತೆ ದಫೆದಾರ್‌, ಅಟೆಂಡರ್‌, 2-ಡಿ ದರ್ಜೆ ಹುದ್ದೆ ಖಾಲಿ ಇವೆ. 2018ರ ಡಿ. 24ರಂದು ನೂತನ ತಾಲೂಕು ಘೋಷಣೆಗೊಂಡ ಹೆಬ್ರಿಯಲ್ಲಿ ಪ್ರಸ್ತುತ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಸೇರಿದಂತೆ ಐದಾರು ಮಂದಿ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆ ಇನ್ನು ಭರ್ತಿಯಾಗಬೇಕಿದೆ.

ಆಧಾರ್‌ ಘಟಕ ತೆರೆಯಬೇಕು
ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲು ಇಂದು ಆಧಾರ್‌ ಅತ್ಯಗತ್ಯ. ಪ್ರತಿಯೊಬ್ಬರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಕಾರ್ಕಳದಲ್ಲಿ ತಿಂಗಳುಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ತಾಲೂಕು ಕಚೇರಿಯಲ್ಲಿ ಆಧಾರ್‌ ತಿದ್ದುಪಡಿಗಾಗಿ ಏಕಮಾತ್ರ ಘಟಕವಿದ್ದು, ಇನ್ನೊಂದು ಘಟಕ ತೆರೆದು ಜನತೆಗೆ ಅನುಕೂಲ ಮಾಡಿಕೊಡಬೇಕೆನ್ನುವ ಬೇಡಿಕೆ ಸಾರ್ವಜನಿಕರದ್ದು.

ಬಾಪೂಜಿ ಸೇವೆಯೂ ಇಲ್ಲ
ಗ್ರಾಮೀಣ ಜನತೆ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತ್ವರಿತವಾಗಿ ಪಡೆದುಕೊಳ್ಳುವಂತಾಗಲು 2016ರ ಜು. 30ರಂದು ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆಯಲಾಗಿತ್ತು. ಈ ಮೂಲಕ ಗ್ರಾ.ಪಂ.ಗಳಲ್ಲಿ ಕಂದಾಯ ಇಲಾಖೆಗೊಳ ಪಟ್ಟ ಸುಮಾರು 40 ಸೇವೆಗಳನ್ನು ಗ್ರಾಮ ಪಂಚಾಯತ್‌ ಕಚೇರಿಯಲ್ಲೇ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಈ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಕನಿಷ್ಠ ಪಕ್ಷ ಆಧಾರ್‌ಗೆ ಸಂಬಂಧಿಸಿದ ಕಾರ್ಯ ಆಗುತ್ತಿಲ್ಲ ಎನ್ನುವ ಆರೋಪವಿದೆ.

ಕಂದಾಯ ಸಚಿವರು ಇಂದು ಕಾರ್ಕಳ-ಹೆಬ್ರಿಗೆ
ಕಂದಾಯ ಸಚಿವ ಆರ್‌. ಅಶೋಕ್‌ ಡಿ. 8ರಂದು 10 ಗಂಟೆಗೆ ಮುನಿಯಾಲಿಗೆ ಆಗಮಿಸಲಿದ್ದು, ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಬಳಿಕ 11.30ಕ್ಕೆ ಹೆಬ್ರಿ ಮಿನಿ ವಿಧಾನಸೌಧಕ್ಕೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.

Advertisement

ಹೆಬ್ರಿ ಖಾಲಿ ಹುದ್ದೆಗಳು
ಕಾರ್ಕಳ ತಾಲೂಕಿನ ಒಟ್ಟು ವಿಸ್ತೀರ್ಣ 1,091.2 ಚ.ಕಿ.ಮೀ. ಕಾರ್ಕಳದಲ್ಲಿ 39 ಗ್ರಾಮಗಳಿದ್ದು, 27 ಗ್ರಾಮ ಪಂಚಾಯತ್‌ಗಳಿವೆ. 4 ಜಿಲ್ಲಾ ಪಂಚಾಯತ್‌ ಹಾಗೂ 15 ತಾಲೂಕು ಪಂಚಾಯತ್‌ ಕ್ಷೇತ್ರಗಳಿವೆ. ನೂತನ ತಾಲೂಕಾಗಿರುವ ಹೆಬ್ರಿ 896 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, 16 ಗ್ರಾಮ, 9 ಗ್ರಾಮ ಪಂಚಾಯತ್‌ಗಳನ್ನು ಹೊಂದಿದೆ. 1 ಜಿಲ್ಲಾ ಪಂಚಾಯತ್‌ ಕ್ಷೇತ್ರ ಸೇರಿದಂತೆ 5 ತಾಲೂಕು ಪಂಚಾಯತ್‌ ಕ್ಷೇತ್ರಗಳಿವೆ.

ಗ್ರಾ.ಪಂ. ಕಚೇರಿಯಲ್ಲಿ ಸೇವೆ ದೊರೆಯಲಿ
ಆಧಾರ್‌ ಕಾರ್ಡ್‌ ತಿದ್ದುಪಡಿ ಸೇರಿದಂತೆ ಇನ್ನಿತರ ಕಂದಾಯ ಇಲಾಖಾ ಸೇವೆ ಗ್ರಾ. ಪಂ. ಕಚೇರಿಯಲ್ಲಿ ಲಭ್ಯವಾಗಬೇಕು. ಇಂತಹ ಸೇವೆ ಸಮರ್ಪಕವಾಗಿ ಗ್ರಾ.ಪಂ.ನಲ್ಲಿ ದೊರೆಯುವಂತಾದರೆ ಸಾರ್ವಜನಿಕರ ಅಲೆದಾಟ, ಪರದಾಟ ತಪ್ಪಲಿದೆ. -ಯೋಗೀಶ್‌ ಸಾಲ್ಯಾನ್‌, ಕುಕ್ಕುಂದೂರು ಗ್ರಾ.ಪಂ. ಸದಸ್ಯರು

ಸುಸೂತ್ರವಾಗಿ ನಡೆಯಲು ತೊಡಕು
ಕಾರ್ಕಳ, ಹೆಬ್ರಿ ತಾಲೂಕು ಕಚೇರಿಯಲ್ಲಿ ಸಿಬಂದಿ ಕೊರತೆ ಬಹುವಾಗಿ ಕಾಡುತ್ತಿರುವುದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಗಳು ಸುಸೂತ್ರವಾಗಿ ಮತ್ತು ನಿಗದಿತ ಅವಧಿಯಲ್ಲಿ ನಡೆಯುವಲ್ಲಿ ತೊಡಕಾಗಿದೆ.
-ಪ್ರಸಾದ್‌ ಸುವರ್ಣ, ಇರ್ವತ್ತೂರು

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next