Advertisement
ಅಲ್ತಾಫ್ ಹಾಗೂ ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ಬಂಧಿತರು. ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಮೇಲಿನ ಹೇಯ ಕೃತ್ಯವನ್ನು ಹಿಂದೂ, ಮುಸ್ಲಿಂ ಸಹಿತ ಎಲ್ಲ ಸಮುದಾಯದ ಸಂಘಟನೆಗಳು ಖಂಡಿಸಿವೆ.
Related Articles
Advertisement
ಅಲ್ತಾಫ್ ಯುವತಿಯನ್ನು ಶುಕ್ರವಾರ ಮಧ್ಯಾಹ್ನ ಆಕೆ ಕೆಲಸ ಮಾಡು ತ್ತಿದ್ದ ಸ್ಥಳದಿಂದ 15-18 ಕಿ.ಮೀ. ದೂರದ ಪಳ್ಳಿ ಕಡೆಗೆ ಕರೆದೊಯ್ದಿದ್ದ. ಅಲ್ಲಿ ತನ್ನದೊಂದು ಸೈಟ್ ಇದೆ ಎಂದು ನಂಬಿಸಿ ಕಾಡಿನೊಳಗೆ ಕರೆದೊಯ್ದ ಎನ್ನಲಾಗಿದೆ. ಆ ಹೊತ್ತಿಗೆ ಅಲ್ಲಿ ಮತ್ತಿಬ್ಬರು ಕಾದು ನಿಂತಿದ್ದರು. ಬಳಿಕ ಆಕೆಗೆ ಮದ್ಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಲಾಯಿತು. ಆಕೆ ಮತ್ತಿನಲ್ಲಿರುವಾಗ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಆಕೆ ಬೊಬ್ಬೆ ಹೊಡೆಯಲಾರಂಭಿಸಿದ್ದು, ಭಯಗೊಂಡ ಅಲ್ತಾಫ್ ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮನೆ ಕಡೆಗೆ ಹೊರಟ. ದಾರಿ ಮಧ್ಯೆ ಆಕೆ ವಾಂತಿ ಮಾಡಿದ್ದು, ಮನೆಯ ಬಳಿ ತಲುಪುವಾಗ ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಬಳಿಕ ಮನೆಯವರು ಹಾಗೂ ಸ್ಥಳೀಯರು ಸೇರಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.
ಅತ್ಯಾಚಾರ ದೃಢ?:
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆಯೇ ಎನ್ನು ವುದು ಆಕೆ ಚೇತರಿಸಿಕೊಂಡ ಬಳಿಕ ಕೈಗೊಳ್ಳುವ ಸಮಗ್ರ ವೈದ್ಯಕೀಯ ವರದಿ ಹಾಗೂ ಜುಡಿಶಿಯಲ್ ಆಧಿಕಾರಿ ಮುಂದೆ ಆಕೆ ನೀಡುವ ಹೇಳಿಕೆಯಿಂದ ಸ್ಪಷ್ಟವಾಗಬೇಕಿದೆ. ಆದರೆ ಆಕೆಯ ಮೇಲೆ ಅತ್ಯಾಚಾರ ಆಗಿರುವುದು ವೈದ್ಯರ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಭಾರತ ಮೂಲದವನು!:
ಆರೋಪಿ ಅಲ್ತಾಫ್ ವಿವಾಹಿತನಾಗಿದ್ದು, ಮೂಲತಃ ಉತ್ತರ ಭಾರತದವನು. ಸ್ಥಳೀಯವಾಗಿ ಟಿಪ್ಪರ್ ಚಾಲಕನಾಗಿದ್ದ ಆತ ಪತ್ತೂಂಜಿಕಟ್ಟೆ, ಕಾಬೆಟ್ಟು, ಜೋಡುರಸ್ತೆ, ಕುಕ್ಕುಂದೂರು ಮುಂತಾದೆಡೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಇನ್ನೋರ್ವ ಆರೋಪಿ ಶ್ರಾವೆದ್ ರಿಚರ್ಡ್ ಕ್ವಾಡ್ರಸ್ ರಂಗನ ಪಲ್ಕೆ ನಿವಾಸಿಯಾಗಿದ್ದು, ಹಿಂದೆ ಖಾಸಗಿ ಬಸ್ ಚಾಲಕನಾಗಿದ್ದ. ಈಗ ಟಿಪ್ಪರ್ ಓಡಿಸುತ್ತಿದ್ದಾನೆ. ಆರೋಪಿಗಳು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಮದ್ಯ, ಡ್ರಗ್ಸ್ ಸೇವನೆ, ಮಾದಕ ವಸ್ತು ಸರಬರಾಜು ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿ ವಿಲಾಸಿ ಜೀವನ ನಡೆಸುತ್ತಿದ್ದರು.
ಹಿಂದೆಯೂ ಕಿರುಕುಳ ನೀಡಿದ್ದ:
ಐದು ವರ್ಷಗಳ ಹಿಂದೆ ಬಂಗ್ಲೆಗುಡ್ಡೆ ಯಲ್ಲಿ ಯುವತಿ ಯೋರ್ವಳಿಗೆ ಕಿರುಕುಳ ನೀಡಿದ್ದೂ ಸಹಿತ ಅಲ್ತಾಫ್ ವಿರುದ್ಧ ಹಲವು ದೂರುಗಳಿವೆ. ಆಗ ಆತನ ಮೊಬೈಲಲ್ಲಿ ಹಲವು ಯುವತಿ ಯರ ವೀಡಿಯೋ, ಫೋಟೋಗಳು ಸಿಕ್ಕಿದ್ದು, ಸ್ಥಳೀಯರು ನಾಲ್ಕೇಟು ಬಿಗಿದು ಬುದ್ಧಿವಾದ ಹೇಳಿದ್ದರಂತೆ.
ಡ್ರಗ್ಸ್ ಮಾಫಿಯಾ ಶಂಕೆ:
ಅತ್ಯಾಚಾರ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ ಇರುವ ಕುರಿತು ಶಂಕೆ ವ್ಯಕ್ತವಾಗಿದೆ. ಡ್ರಗ್ಸ್ ದಂಧೆ ತಾಲೂಕಿನಾದ್ಯಂತ ವಿಸ್ತರಿಸಿದ್ದು, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಸಹಿತ ಹಲವು ಅಕ್ರಮ ಚಟುವಟಿಕೆ ಗಳೂ ನಡೆಯುತ್ತಿವೆ ಎಂಬ ಆರೋಪ ವಿದೆ. ಅತ್ಯಾಚಾರ ಪ್ರಕರಣದ ಆರೋಪಿ ಗಳು ಮತ್ತು ಅವರೊಂದಿಗೆ ಸಂಪರ್ಕ ವಿರುವವರ ಹಿನ್ನೆಲೆ ಕುರಿತು ತನಿಖೆ ನಡೆಸಿದಲ್ಲಿ ಹೆಚ್ಚಿನ ಮಾಹಿತಿ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ:
ಅತ್ಯಾಚಾರ ಘಟನೆ ನಡೆದು ಒಂದು ತಾಸಿನೊಳಗೆ ಓರ್ವನನ್ನು ಹಾಗೂ ಮರುದಿನ ಬೆಳಗ್ಗೆ ಮತ್ತೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆಯೂ ಪ್ರಕರಣ ನಿರ್ವಹಿಸಿರುವ ಪೊಲೀಸರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಂತ್ರಸ್ತೆಯ ತಂದೆಗೂ ಆರೋಪಿ ಪರಿಚಿತ?: ಸಂತ್ತಸ್ರೆಯ ತಂದೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದು, ಆರೋಪಿ ಅಲ್ತಾಫ್ ಮರಳು ವ್ಯಾಪಾರದೊಂದಿಗೆ ಟಿಪ್ಪರ್ ಓಡಿಸುತ್ತಿದ್ದ. ಈ ವೃತ್ತಿ ಕ್ಷೇತ್ರದ ಸಂಪರ್ಕ ಸಂತ್ತಸ್ತೆಯ ತಂದೆ ಹಾಗೂ ಅಲ್ತಾಫ್ನನ್ನು ಪರಿಚಯವಾಗಿಸಿತ್ತು ಎನ್ನಲಾಗಿದೆ. ಆರೋಪಿ ಮತ್ತು ಯುವತಿ ತಂದೆ ಜೊತೆಯಾಗಿ ಕೆಲವು ಬಾರಿ ಓಡಾಡಿದ್ದರು ಎನ್ನಲಾಗಿದೆ.
ಓರ್ವ ಆರೋಪಿ ಯುವಕ ಮತ್ತು ಸಂತ್ರಸ್ತೆಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಪರಿಚಯವಾಗಿದೆ. ಆತ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ. ಸಂತ್ರಸ್ತಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. -ಡಾ| ಅರುಣ್, ಎಸ್‌ಪಿ, ಉಡುಪಿ
ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ವರದಿ ಆಧರಿಸಿ ಅಮಲು ಪದಾರ್ಥ ಎಲ್ಲಿಂದ ಸರಬರಾಜು ಮಾಡಲಾಗಿದೆ ಮುಂತಾದವುಗಳ ತನಿಖೆ ನಡೆಸುತ್ತೇವೆ. ಡ್ರಗ್ಸ್ ಫೆಡರಲ್ ಬಗ್ಗೆ ಈಗ ಏನೂ ಹೇಳಲು ಸಾಧ್ಯವಿಲ್ಲ. ಸಮಗ್ರ ತನಿಖೆ ನಡೆಸಿದ ಬಳಿಕವಷ್ಟೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ. -ಅಮಿತ್ ಸಿಂಗ್, ಐಜಿ