Advertisement

ನಿದ್ದೆ ಕೆಡಿಸುತ್ತಿವೆ ಕೊರೊನೋತ್ತರ ಅಪರಾಧ ಪ್ರಕರಣಗಳು

11:10 PM Mar 22, 2021 | Team Udayavani |

ಕಾರ್ಕಳ: ಕೊರೊನಾ ಲಾಕ್‌ಡೌನ್‌ ಅವಧಿ ಅನಂತರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಾರ್ಕಳ ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಕಳೆದ 8 ತಿಂಗಳುಗಳಲ್ಲಿ 131 ಪ್ರಕರಣಗಳು ದಾಖಲಾಗಿದ್ದು, ಇದು ಪೊಲೀಸರು, ಸಾರ್ವಜನಿಕರ ನಿದ್ದೆ ಕೆಡಿಸಿವೆ.

Advertisement

ಕಾರಣ ಏನು?
ಲಾಕ್‌ಡೌನ್‌ ಬಳಿಕ ನಿರುದ್ಯೋಗ ಮತ್ತು ತತ್ಸಂಬಂಧಿ ಅಂಶಗಳು ಪ್ರಕರಣಗಳು ಹೆಚ್ಚಲು ಕಾರಣ ಎಂದು ಪೊಲೀಸರು ಅಭಿಪ್ರಾಯಪಡುತ್ತಿದ್ದಾರೆ. ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರ ವಹಿವಾಟು ಸೇರಿದಂತೆ ವಿವಿಧ ಕ್ಷೇತ್ರಗಳ ಪುನಶ್ಚೇತನ ಮಂದಗತಿಯಲ್ಲಿದೆ. ಸ್ವ-ಉದ್ಯೋಗಸ್ಥರು, ಕೃಷಿ ಅವಲಂಬಿತರೂ ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕಾಗಿ ಸಾರ್ವಜನಿಕರು ಜಾಗೃತರಾಗಬೇಕು ಎಂದು ಪೊಲೀಸರು ಮನವಿ ಮಾಡುತ್ತಿದ್ದು, ಇದಕ್ಕಾಗಿ ಅರಿವು ಮೂಡಿಸುತ್ತಿದ್ದಾರೆ.

ಸಾಮಾಜಿಕ ಪರಿಸ್ಥಿತಿಯೂ ಕಾರಣ
ಹಿಂದೆ ಕೂಡು ಕುಟುಂಬವಿತ್ತು. ಅಕ್ಕಪಕ್ಕದವ ರೊಂದಿಗೆ ಸಂಬಂಧವೂ ಚೆನ್ನಾಗಿತ್ತು. ಮನೆ ಬಿಟ್ಟು ಹೋಗುವ ವೇಳೆ ಪಕ್ಕದ ಮನೆಯವರಿಗೆ ಹೇಳಿ ಹೋಗುವ ಪರಿಪಾಠವಿತ್ತು. ಈಗ ಬದಲಾಗಿದೆ. ನೆರೆ ಹೊರೆಯವರೊಂದಿಗೆ ಮನಸ್ತಾಪ ಸಾಮಾನ್ಯವಾಗಿದೆ. ಪಕ್ಕದ ಮನೆಗೆ ಯಾರು ಬಂದರೂ ಗೊತ್ತಾಗುತ್ತಿಲ್ಲ. ಇದು ಕಳ್ಳತನ, ಸುಲಿಗೆ, ದರೋಡೆ ಮಾಡುವವರಿಗೆ ವರದಾನವಾಗಿದೆ ಎನ್ನುತ್ತಾರೆ ಪೊಲೀಸರೊಬ್ಬರು.

ಜಾಗೃತಿ ಅಗತ್ಯ
ನಿರುದ್ಯೋಗ ಹೆಚ್ಚಳ ಹಾಗೂ ಕನಿಷ್ಠ ಆದಾಯ ಇಲ್ಲದಿರುವ ಸ್ಥಿತಿ ಅಪರಾಧ ಮನೋಭಾವನೆಗೆ ಪ್ರಚೋದನೆ ನೀಡುವ ಸಾಧ್ಯತೆಯಿದೆ. ನಗರ- ಹಳ್ಳಿಗಳೆನ್ನದೆ ಅನೇಕ ಕಡೆ ಕಳ್ಳತನ, ದರೋಡೆ ಪ್ರಮಾಣ ಹೆಚ್ಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಎಲ್ಲ ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸರಿಂದ ಮಾತ್ರವೇ ಸಾಧ್ಯವಿಲ್ಲ. ನಾಗರಿಕರೂ ಈ ವಿಚಾರದಲ್ಲಿ ಸ್ವಯಂ ಜಾಗೃತಿ, ಎಚ್ಚರಿಕೆಗಳನ್ನು ವಹಿಸಿಕೊಳ್ಳುವುದು ಅಗತ್ಯವಾಗಿದೆ.

ನಮ್ಮದೂ ಇದೆ ಜವಾಬ್ದಾರಿ
ಚಿನ್ನಾಭರಣ, ಅಗತ್ಯಕ್ಕಿಂತ ಹೆಚ್ಚು ನಗದು ಮನೆಯಲ್ಲಿಟ್ಟುಕೊಳ್ಳದಿರುವುದು, ಹೆಚ್ಚಿನ ಭದ್ರತೆ, ಮನೆ, ದೇವಸ್ಥಾನ, ಅಂಗಡಿಗಳ ಸುತ್ತಮುತ್ತ ಬೆಳಕಿನ ವ್ಯವಸ್ಥೆ, ಅಪರಿಚಿತರನ್ನು ಮನೆಯೊಳಗಡೆ ಕರೆಯದಿರುವುದು, ಚಿನ್ನ, ತಾಮ್ರ, ಕಂಚು ಪಾತ್ರೆ ಪಾಲಿಶ್‌ ಮಾಡಲು ಸೊತ್ತು ನೀಡದಿರುವುದು, ಮನೆಯಿಂದ ತೆರಳುವಾಗ ನೆರೆಯವರಿಗೆ ಮತ್ತು ಪೊಲೀಸ್‌ ಠಾಣೆಗೆ ತಿಳಿಸುವುದು, ವಯಸ್ಸಾದವರು, ಅಂಗವಿಕಲರನ್ನು ಮನೆಯಲ್ಲೇ ಬಿಟ್ಟು ಹೋಗದಿರುವುದು, ಮಹಿಳೆಯರು ಚಿನ್ನಾಭರಣ ಧರಿಸಿಕೊಂಡು ಒಂಟಿಯಾಗಿ ಹೋಗದಿರುವುದು. ಒಂಟಿಯಾಗಿ ಪ್ರಯಾಣಿಸುವಾಗ ಎಚ್ಚರಿಕೆಯಿಂದಿರುವುದು, ಅಪರಿಚಿತರು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವುದು ನಾಗ ರಿ ಕರ ಜವಾಬ್ದಾರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next