Advertisement
ಕಾಪು ಮೂಲದ ಚಿತ್ರ ಕಲಾವಿದೆಯಾಗಿರುವ ರಕ್ಷಾ ಪೂಜಾರಿ ಪಶ್ಚಿಮ ಘಟ್ಟಗಳ ಸಾಲಿನ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಳ್ಳಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಮೂಲಕ ಪರಿಸರದ ಪಾಠ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ವಿಷ್ಯುವಲ್ ಆರ್ಟ್ಸ್ ನಲ್ಲಿ ಪದವಿ ಪಡೆದ ಇವರು ತಮ್ಮ ಕಾಯಕಕ್ಕೆ ಇಟ್ಟಿರುವ ಹೆಸರು: ವನಗಿರಿಯ ರಂಗು!
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಹಿಂದುಳಿದಿರುವ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಚಿತ್ರ ಕಲೆಗಳಲ್ಲಿ ಆಸಕ್ತಿ ಮೂಡಿಸುವುದು, ಆ ಮೂಲಕ ಪರಿಸರ ಪಾಠ ಹೇಳಿಕೊಡುವುದು ಇವರ ಉದ್ದೇಶ. ಕುಂದಾಪುರ ತಾ|ನ ಹಾಲಾಡಿಯ ಕೆಳಸುಂಕ ಶಾಲೆಯಲ್ಲಿ ವನಗಿರಿ ರಂಗು ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ತಪ್ಪಲಿನ ಊರುಗಳಾದ ಅಮಾವಾಸ್ಯೆಬೈಲು, ಹೆಬ್ರಿ, ನಾಡಾ³ಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಮುಟ್ಲುಪಾಡಿ, ಅಂಡಾರು, ಕಾರ್ಕಳ ತಾಲೂಕಿನ ಶಿರ್ಲಾಲು, ಅಜೆಕಾರು ಕೆರುವಾಶೆ, ಮಾಳ, ನೂರಾಳಬೆಟ್ಟು, ನಾರಾವಿ, ಹೊಸ್ಮಾರು, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಚಿಕ್ಕಮಗಳೂರಿನ ಕುದುರೆಮುಖ, ಕಳಸ, ಜಾಂಬಳೆ, ಸಂಸೆ, ಹೊರನಾಡು, ಶೃಂಗೇರಿ, ಕೊಗ್ರೆ, ಕಿಗ್ಗ, ಶಿವಮೊಗ್ಗ ಜಿಲ್ಲೆಯ ಆಗುಂಬೆ ಹೊಸನಗರ, ತಾಲೂಕಿನ ಭಾಗಗಳಲ್ಲಿ ಪ್ರಯಾಣಿಸಿ ಅಲ್ಲಿನ ಸರಕಾರಿ ಶಾಲೆಗಳಲ್ಲಿ ಚಿತ್ರಕಲೆಯೊಂದಿಗೆ ಪರಿಸರದ ಪಾಠ ಕಲಿಸಲಿದ್ದಾರೆ.
Related Articles
Advertisement
ಸ್ವಂತ ಹಣದಿಂದಲೇ ಪರಿಕರ ಖರೀದಿರಕ್ಷಾ ಪೂಜಾರಿ ಅವರು ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ದೇಶದ ಹಲವೆಡೆ ಕಲಾಕೃತಿಗಳ ಪ್ರದರ್ಶನ ನೀಡಿದ್ದಾರೆ. ವಿವಿಧ ಕಲಾಕೃತಿ ರಚಿಸಿ ಮಾರಾಟ ಮಾಡುತ್ತಾರೆ. ಆಯಿಲ್ ಪೈಂಟಿಂಗ್, ವಾಲ್ ಮ್ಯೂರಲ್ಸ…, ವಾಲ್ ಪೈಂಟಿಂಗ್‌ಗಳಲ್ಲಿ ಅನುಭವಿಗಳು. ಇವರು ವಿದ್ಯಾರ್ಥಿಗಳಿಗೆ ಚಿತ್ರಕಲೆ ಗಳಿಗೆ ಬೇಕಾದ ಪರಿಕರಗಳನ್ನು ಸ್ವಂತ ಖರ್ಚಿನಿಂದಲೇ ಒದಗಿಸುತ್ತಿದ್ದಾರೆ. ಚಿತ್ರ, ಫೋಟೊಗಳ ಮೂಲಕ ಜಾಗೃತಿ
ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಕಲಾಕೃತಿಗಳನ್ನು ತಯಾರಿಸುವ ಕಾರ್ಯಾಗಾರ ಮಾಡುತ್ತಾರೆ ರಕ್ಷಾ. ಇದು ಮಕ್ಕಳ ಮನೋವಿಕಾಸ, ಕಲ್ಪನಾ ಶಕ್ತಿ ಹೆಚ್ಚಿಸಲು ಸಹಕಾರಿ ಆಗುವುದರ ಜತೆಗೆ ಪರಿಸರದ ಮೇಲೆ ಪ್ರೀತಿಯನ್ನು ಹೊಂದುತ್ತದೆ ಎನ್ನುವುದು ಅವರು ಕಂಡುಕೊಂಡ ಸತ್ಯ. ಸಾಸ್ತಾನದ ವನ್ಯಜೀವಿ ಛಾಯಾಗ್ರಾಹಕ ಮನೋಜ್ ಭಂಡಾರಿ ತೆಗೆದಿರುವ ವಿವಿಧ ಕಾಡು ಪ್ರಾಣಿ ಪಕ್ಷಿಗಳ ಚಿತ್ರಗಳನ್ನೂ ವಿದ್ಯಾರ್ಥಿ ಗಳಿಗೆ ತೋರಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಸಂಬಂಧಿತ ಪ್ರಬಂಧಗಳನ್ನೂ ಬರೆಸಲಾಗುತ್ತದೆ. ಹೆತ್ತವರೇ ಸ್ಫೂರ್ತಿ
ಕಲೆಯ ಬಗ್ಗೆ ನನಗೆ ಎಳವೆ ಯಿಂದಲೂ ಆಸಕ್ತಿ. ಹೆತ್ತವರೇ ನನಗೆ ಸ್ಫೂರ್ತಿ. ಸ್ನೇಹಿತರ ಪ್ರೋತ್ಸಾಹದಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಲಾ ಪ್ರದರ್ಶನ ನೀಡಲು ಸಾಧ್ಯವಾಗಿದೆ. ರಾಜ್ಯದ 80ಕ್ಕೂ ಹೆಚ್ಚು ಕಡೆ ಸಂಚರಿಸಿ ಶಿಬಿರ ಏರ್ಪಡಿಸಿದ್ದೇನೆ. ಮುಂದೆ ಹಳ್ಳಿಯ ಶಾಲೆಗಳಲ್ಲಿ ಜಾಗೃತಿ ಮೂಡಿಸಿ ವಿಸ್ತರಿಸಲಾಗುವುದು.
-ರಕ್ಷಾ ಪೂಜಾರಿ, ಚಿತ್ರಕಲಾವಿದೆ – ಬಾಲಕೃಷ್ಣ ಭೀಮಗುಳಿ